ಕರಾವಳಿ

ಕುಂದಾಪುರ ಬೋರ್ಡ್‌ ಹೈಸ್ಕೂಲ್ ಶತಮಾನೋತ್ತರ ಬೆಳ್ಳಿ ಹಬ್ಬ ಭವನ ಹಸ್ತಾಂತರ, ಪುತ್ಥಳಿ ಅನಾವರಣ

Pinterest LinkedIn Tumblr

ಕುಂದಾಪುರ: ಶಾಲೆಯ ಹಳೆಯ ವಿದ್ಯಾರ್ಥಿಗಳೇ ಆಯಾ ಶಿಕ್ಷಣ ಸಂಸ್ಥೆಗಳ ಶಾಶ್ವತ ಆಧಾರ ಸ್ತಂಭಗಳಾಗಿದ್ದಾರೆ. ಹಳೆ ವಿದ್ಯಾರ್ಥಿಗಳ ನೆನಪು ಹಾಗೂ ಅವರ ಚಟುವಟಿಕೆಗಳು ನೆನಪಿನ ಬುತ್ತಿಗಳಾಗಬೇಕಾದರೆ, ಅವುಗಳನ್ನು ಶಾಶ್ವತವಾಗಿ ಸಂಗ್ರಹಿಸಿಡುವ ಕಾರ್ಯಗಳು ನಡೆಯಬೇಕು ಎಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಮಹಾಬಲೇಶ್ವರ ಎಂ.ಎಸ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರೌಢ ಶಾಲೆ ಬೋರ್ಡ್‌ ಹೈಸ್ಕೂಲ್ ಕಲಾ ಮಂದಿರದಲ್ಲಿ ಭಾನುವಾರ ನಡೆದ ಶತಮಾನೋತ್ತರ ಬೆಳ್ಳಿ ಹಬ್ಬ ಭವನ ಹಸ್ತಾಂತರ ಹಾಗೂ ಈ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ನಂದಳಿಕೆ ಮುದ್ದಣ, ಪ್ರಾಕ್ತನ ವಿದ್ಯಾರ್ಥಿಗಳಾದ ಡಾ.ಕೋಟ ಶಿವರಾಮ ಕಾರಂತ ಹಾಗೂ ಮೊಗೇರಿ ಗೋಪಾಲಕೃಷ್ಣ ಅಡಿಗರ ಪುತ್ಥಳಿ ಅನಾವರಣ ಮಾಡಿ ಅವರು ಮಾತನಾಡಿದರು.

ವ್ಯಕ್ತಿಗಳು ಸಾಧನೆಯ ಮೂಲಕ ಸಮಾಜದ ಆಸ್ತಿಗಳಾಗಬೇಕು. ದೇಶದ ಸಾರಸ್ವತ ಲೋಕದಲ್ಲಿ ಅಪೂರ್ವ ಸಾಧನೆಯನ್ನು ಮಾಡಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿರವ ಹೆಮ್ಮೆಯ ಕನ್ನಡಿಗರಲ್ಲಿ ಒಬ್ಬರಾಗಿರುವ ಡಾ.ಕೋಟ ಶಿವರಾಮ ಕಾರಂತರು ಶಿಕ್ಷಣಾರ್ಜನೆ ಮಾಡಿರುವ ಪುಣ್ಯ ಭೂಮಿ ಕುಂದಾಪುರದ್ದಾಗಿದೆ. 1977 ರಲ್ಲಿ ಕರ್ಣಾಟಕ ಬ್ಯಾಂಕಿನ ಲಾಂಛನವನ್ನು ಡಾ.ಕಾರಂತರೇ ಮಾಡಿ ಕೊಟ್ಟಿದ್ದರು ಎನ್ನುವ ಗೌರವಗಳು ನಮಗಿದೆ. ಸಾಹಿತ್ಯ ಕ್ಷೇತ್ರದ ಮೇರು ವ್ಯಕ್ತಿತ್ವ ರೂಪಿಸಿಕೊಂಡಿದ್ದ ಡಾ.ಕಾರಂತ, ಅಡಿಗ ಹಾಗೂ ಮುದ್ದಣ್ಣ ಅವರಂತಹ ಸಾಹಿತ್ಯ ರತ್ನಗಳು ಶಾಶ್ವತವಾಗಿ ಜನ ಮಾನಸದಲ್ಲಿ ಉಳಿಯುವಂತಹ ಕಾರ್ಯಗಳು ನಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶತಮಾನೋತ್ತರ ಬೆಳ್ಳಿ ಹಬ್ಬ ಸಮಿತಿ ಕಾರ್ಯಾಧ್ಯಕ್ಷ ಮೋಹನದಾಸ ಶೆಣೈ ಅವರು, 135 ಕ್ಕಿಂತಲೂ ಅಧಿಕ ವರ್ಷದ ಇತಿಹಾಸ ಇರುವ ಈ ಶಾಲೆ ದೊಡ್ಡ ಆಲದ ಮರದಂತೆ ಎಲ್ಲ ಕ್ಷೇತ್ರಗಳ ಪ್ರತಿಭಾನ್ವೀತರಿಗೆ ಆಸರೆ ನೀಡಿ ಪೋಷಣೆ ಮಾಡಿದೆ. ಒಳ್ಳೆಯ ಶಿಕ್ಷಕ ವೃಂದ, ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವುದು ನಮ್ಮೆಲ್ಲರ ಭಾಗ್ಯ ಎಂದರು.

ಪತ್ರಕರ್ತ ರಾಜೇಶ್ ಕೆ.ಸಿ , ದಾನಿ ಹೇಮಂತ್ ಪೈ ಕಟೀಲ್, ಪ್ರಾಂಶುಪಾಲ ಬಿ. ಜಿ.ರಾಮಕೃಷ್ಣ, ಉಪ ಪ್ರಾಂಶುಪಾಲೆ ವಿನುತಾ ಗಾಂವ್ಕರ್, ಶತಮಾನೋತ್ಸವ ಬೆಳ್ಳಿ ಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಷಿ ಮಾತನಾಡಿದರು. ಬೆಂಗಳೂರಿನ ಉದ್ಯಮಿ ದಿನೇಶ್ ಕುಂದಾಪುರ, ಶತಮಾನೋತ್ಸವ ಬೆಳ್ಳಿ ಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಷಿ, ಕೋಶಾಧಿಕಾರಿ ಕೆ.ಸೀತಾರಾಮ ನಕ್ಕತ್ತಾಯ, ಉದ್ಯಮಿ ಎ.ಎ.ಕೊಡ್ಗಿ ಇದ್ದರು.

ಮಾಜಿ ಪ್ರಾಂಶುಪಾಲ ನಾರಾಯಣ ಶೇರ್ವೆಗಾರ್, ನಿವೃತ್ತ ಪ್ರಾಂಶುಪಾಲ ಕೆ.ಸೂರ್ಯನಾರಾಯಣ ಉಪಾಧ್ಯಾಯ, ನಿವೃತ್ತ ಶಿಕ್ಷಕರಾದ ಅಸೋಡು ರಾಜೀವ ಶೆಟ್ಟಿ, ಸೂರ್ಯನಾರಾಯಣ ಬಾಸ್ರಿ, ದಿನಕರ ಕೋತ್ವಾಲ್ ಅವರನ್ನು ಸನ್ಮಾನಿಸಲಾಯಿತು. ಶತಮಾನೋತ್ತರ ಬೆಳ್ಳಿ ಹಬ್ಬದ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನ, ಕಟ್ಟಡ ನಿರ್ಮಾಣದ ಇಂಜಿನಿಯರ್ ಸತೀಶ್ ಪೂಜಾರಿ ಹಾಗೂ ಪುತ್ಫಳಿ ನಿರ್ಮಾಣ ಮಾಡಿದ ಕಲಾವಿದ ಡಾ. ಜನಾರ್ದನ್ ಹಾವಂಜೆ ಅವರನ್ನು ಗೌರವಿಸಲಾಯಿತು.

ಕರ್ಣಾಟಕ ಬ್ಯಾಂಕ್ ಮಾಜಿ ನಿರ್ದೇಶಕ ಡಾ. ರಾಮ ಮೋಹನ್ ಸ್ವಾಗತಿಸಿದರು. ಶತಮಾನೋತ್ತರ ಬೆಳ್ಳಿ ಹಬ್ಬ ಸಮಿತಿ ಕಾರ್ಯದರ್ಶಿ ನಾರಾಯಣ ಕೆ. ಪ್ರಸ್ತಾವಿಕವಾಗಿ ಮಾತನಾಡಿದರು. ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ರಾಮಚಂದ್ರ ಬಿ.ಎನ್ ಹಾಗೂ ವರದರಾಜ್ ಪೈ ಸನ್ಮಾನಿತರ ವಿವರ ನೀಡಿದರು. ಕಲಾಕ್ಷೇತ್ರ ಸಂಘಟನೆಯ ಅಧ್ಯಕ್ಷ ಕಿಶೋರಕುಮಾರ ಬಿ ನಿರೂಪಿಸಿದರು, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನಂತಕೃಷ್ಣ ಕೊಡ್ಗಿ ವಂದಿಸಿದರು.

 

Comments are closed.