ಪ್ರಮುಖ ವರದಿಗಳು

ದೇಶ ವಾಸಿಗಳಿಗೆ ಸಿಹಿ ಸುದ್ದಿ: ಪೆಟ್ರೋಲ್​-ಡೀಸೆಲ್ ಬೆಲೆ ಇಳಿಕೆ, ಅಡುಗೆ ಅನಿಲಕ್ಕೆ 200 ರೂ. ಸಬ್ಸಿಡಿ

Pinterest LinkedIn Tumblr

ಹೊಸದಿಲ್ಲಿ: ಕೇಂದ್ರ ಸರಕಾರ ಶನಿವಾರ ಶುಭಸುದ್ದಿ ನೀಡಿದೆ. ಪೆಟ್ರೋಲ್‌-ಡೀಸೆಲ್‌, ಎಲ್‌ಪಿಜಿ ಸಿಲಿಂಡರ್‌, ಉಕ್ಕು, ಕಬ್ಬಿಣ, ಪ್ಲಾಸ್ಟಿಕ್‌, ಸಿಮೆಂಟ್‌ ದರಗಳನ್ನು ದಿಢೀರನೆ ಇಳಿಕೆ ಮಾಡಿ ಶನಿವಾರ ಘೋಷಣೆ ಹೊರಡಿಸಿದೆ. ಅಲ್ಲದೆ ರಸಗೊಬ್ಬರಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಹೆಚ್ಚಳ ಮಾಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಏರಿಕೆ, ಆಹಾರ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಎಪ್ರಿಲ್‌ ತಿಂಗಳ ಚಿಲ್ಲರೆ ಹಣದುಬ್ಬರವು 8 ವರ್ಷಗಳಲ್ಲೇ ಗರಿಷ್ಠಕ್ಕೇರಿತ್ತು. ಇದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದರ ಜತೆಗೆ ದೇಶದ ಆರ್ಥಿಕತೆಯನ್ನು ಸಂಕಷ್ಟಕ್ಕೆ ತಳ್ಳುವ ಸುಳಿವನ್ನು ನೀಡಿತ್ತು. ಹೀಗಾಗಿ ಸರಕಾರ ಹಣದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿದೆ.

ಕೇಂದ್ರ ಸಚಿವೆ ನಿರ್ಮಲಾ ಘೋಷಣೆ
ಶನಿವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಟ್ವಿಟರ್‌ ಮೂಲಕ ಈ ಎಲ್ಲ ಘೋಷಣೆಗಳನ್ನು ಮಾಡಿದ್ದಾರೆ. ಪೆಟ್ರೋಲ್‌ ಮತ್ತು ಡೀಸೆಲ್‌ ಅಬಕಾರಿ ಸುಂಕವನ್ನು ಸರಕಾರ ಕ್ರಮವಾಗಿ ಲೀ.ಗೆ 8 ರೂ. ಮತ್ತು 6 ರೂ. ಇಳಿಕೆ ಮಾಡಿದೆ. ಇದರಿಂದಾಗಿ ಒಂದು ಲೀಟರ್‌ ಪೆಟ್ರೋಲ್‌ ದರ 9.50 ರೂ. ಮತ್ತು ಡೀಸೆಲ್‌ ದರ 7 ರೂ. ಕಡಿಮೆಯಾಗಲಿದೆ. ಶನಿವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

ಅಬಕಾರಿ ಸುಂಕ ಇಳಿಕೆಯಿಂದಾಗಿ ಸರಕಾರದ ಬೊಕ್ಕಸಕ್ಕೆ ವಾರ್ಷಿಕ ಒಂದು ಲಕ್ಷ ಕೋಟಿ ರೂ. ನಷ್ಟವಾಗಲಿದೆ ಎಂದು ಸಚಿವೆ ತಿಳಿಸಿದ್ದಾರೆ. ಎಲ್ಲ ರಾಜ್ಯ ಸರಕಾರಗಳೂ ಇಂಧನ ತೈಲದ ಮೇಲಿನ ವ್ಯಾಟ್‌ ಇಳಿಸಲಿ. ಈ ಹಿಂದೆ ನಾವು ಅಬಕಾರಿ ಸುಂಕ ಇಳಿಸಿದ್ದಾಗ ಯಾವೆಲ್ಲ ರಾಜ್ಯಗಳು ಇಳಿಸಿರ ಲಿಲ್ಲವೋ ಅವು ಈಗಲಾದರೂ ಜನರಿಗೆ ನೆಮ್ಮದಿ ನೀಡಬೇಕು ಎಂದು ನಿರ್ಮಲಾ ಮನವಿ ಮಾಡಿದ್ದಾರೆ. ಈ ಘೋಷಣೆಯ ಬೆನ್ನಲ್ಲೇ ಕೇರಳ ಸರಕಾರವು ಪೆಟ್ರೋಲ್‌ ಮೇಲೆ 2.41 ರೂ. ಮತ್ತು ಡೀಸೆಲ್‌ ಮೇಲೆ 1.36 ರೂ. ಅಬಕಾರಿ ಸುಂಕ ಇಳಿಸಿದೆ.

ಎಲ್.ಪಿ.ಜಿ. ಗೆ 200 ರೂ. ಸಬ್ಸಿಡಿ
ಇದೇ ವೇಳೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫ‌ಲಾನುಭವಿಗಳಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್‌ (ವರ್ಷಕ್ಕೆ 12 ಸಿಲಿಂಡರ್‌ವರೆಗೆ)ಗೆ 200 ರೂ. ಸಬ್ಸಿಡಿ ನೀಡಲಾಗುವುದು. 9 ಕೋಟಿ ಮಂದಿಗೆ ಇದರಿಂದ ಅನುಕೂಲವಾಗಲಿದ್ದು, ಸರಕಾರಕ್ಕೆ ವಾರ್ಷಿಕ 6,100 ಕೋಟಿ ರೂ. ಹೊರೆ ಬೀಳಲಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.

Comments are closed.