ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರ ಕರ್ನಾಟಕ ಬಂದ್ ಕರೆ ನೀಡಿದ್ದು ಅಂದು ಒತ್ತಾಯದ ಬಂದ್‌ಗೆ ಅವಕಾಶ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಬಂದ್ ವಿಚಾರವಾಗಿ ಈವರೆಗೂ ಯಾರೊಬ್ಬರೂ ನಮ್ಮನ್ನು ಸಂಪರ್ಕಿಸಿಲ್ಲ. ನಾಗರಿಕರು ಸ್ವ ಇಚ್ಛೆಯಿಂದ ಬಂದ್‌ಗೆ ಸಹಕರಿಸಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಬಂದ್ ಮಾಡುವಂತೆ ಬಲವಂತಪಡಿಸಿದರೆ, ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ಹಾಗೆಯೇ ಈ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಇಲ್ಲ ಎಂದ ಅವರು, ‘ಸರ್ಕಾರದ ಆದೇಶದಲ್ಲೇ ಇದನ್ನು ಸ್ಪಷ್ಟಪಡಿಸಲಾಗಿದೆ. ಪಬ್ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ 50 ರಷ್ಟು ಮಂದಿಗೆ ಮಾತ್ರ ಅವಕಾಶವಿದೆ. ಅಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗುತ್ತದೆ. ಹೋಟೆಲ್, ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ನಿಗದಿಯಾಗಿರುವ ಪಾರ್ಟಿಗಳಿಗೆ ಮುಂಗಡ ಬುಕ್ಕಿಂಗ್ ಮಾಡಿರುವವರಿಗೆ ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಅವರು ಅಗತ್ಯ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಅಧಿಕಾರಿಗಳು ಈಗಾಗಲೇ ಕ್ಲಬ್ ಹಾಗೂ ಪಬ್ ಮಾಲೀಕರ ಜೊತೆ ಮಾತುಕತೆ ನಡೆಸಿದ್ದಾರೆ. ಸೋಮವಾರ ಅಥವಾ ಮಂಗಳವಾರ ಹೊಸ ಆದೇಶ ಹೊರಡಿಸಲಾಗುತ್ತದೆ ಎಂದರು.
Comments are closed.