ಪ್ರಮುಖ ವರದಿಗಳು

ಕೇರಳದ ಅಲಪ್ಪುಳದಲ್ಲಿ ಎಸ್‌ಡಿಪಿಐ ಮುಖಂಡನ‌ ಕೊಲೆ ಬೆನ್ನಲ್ಲೇ ಬಿಜೆಪಿ ನಾಯಕನ ಹತ್ಯೆ; ನಿಷೇಧಾಜ್ಞೆ ಜಾರಿ

Pinterest LinkedIn Tumblr

ಅಲಪ್ಪುಳ: ಕೇರಳದಲ್ಲಿ ಎಸ್‌ಡಿಪಿಐ ನಾಯಕನ ಕೊಲೆ‌ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ಬಿಜೆಪಿ ಮುಖಂಡನ ಕೊಲೆ ನಡೆದಿದೆ.

ಆಲಪ್ಪುಳ ಜಿಲ್ಲೆಯಲ್ಲಿ ಈ ಎರಡೂ ಕೊಲೆ ನಡೆದಿದ್ದು, ಶನಿವಾರ ತಡರಾತ್ರಿ ಮುಸ್ಲಿಂ ಪಕ್ಷದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್ ಶಾನ್(38) ಅವರನ್ನು ಕೊಲೆ ಮಾಡಲಾಗಿತ್ತು. ಇಂದು ಬೆಳಗಿನ ಜಾವ ಬಿಜೆಪಿಯ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್(40) ಅವರ ಮನೆಗೆ ನುಗ್ಗಿದ ದುಷ್ಕಮರ್ಮಿಗಳ ಗುಂಪೊಂದು ಅವರನ್ನು ಹತ್ಯೆ ಮಾಡಿದೆ.

ಎರಡು ಕೊಲೆಯ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ಅಲಪ್ಪುಳ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಿನ್ನೆ ರಾತ್ರಿ ಅಲಪ್ಪುಳದ ಮನ್ನಂಚೇರಿ ಬಳಿಯ ಪೊನ್ನಾಡ್ ಎಂಬಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ಎಸ್.ಡಿ.ಪಿ.ಐ ಮುಖಂಡ ಶಾನ್ ಅವರಿಗೆ ಬೈಕ್ ಗೆ ಕಾರು ಡಿಕ್ಕಿ ಹೊಡೆಸಿದ ದುಷ್ಕರ್ಮಿಗಳು ಅವರು ಕೆಳಗೆ ಬೀಳುತ್ತಿದ್ದಂತೆಯೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಮೇಲ್ನೋಟಕ್ಕೆ ಇದೊಂದು ಪ್ರತೀಕಾರದ ದಾಳಿಯಂತೆ ತೋರುತ್ತಿದೆ. ಅಲಪ್ಪುಳ ಪುರಸಭೆಯ ವೆಲ್ಲಕಿನಾರ್‌ನಲ್ಲಿರುವ ರಂಜಿತ್ ಅವರ ಮನೆಗೆ ನುಗ್ಗಿದ ಜನರ ಗುಂಪು ಅವರನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿರುವ ರಂಜಿತ್ 2016ರ ಚುನಾವಣೆಯಲ್ಲಿ ಅಲಪ್ಪುಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು.

Comments are closed.