ಮಂಗಳೂರು: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆ ಮೊಟ್ಟೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ನೀಡಿದ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಮತ್ತು ಅಪೂರ್ಣ ಮಾಹಿತಿ ನೀಡಿವೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ.
(ಸಂಗ್ರಹ ಚಿತ್ರ)
ಪೇಜಾವರ ಮಠ ಬಿಡುಗಡೆ ಮಾಡಿದ ವೀಡಿಯೋ ಕ್ಲಿಪ್‌ನಲ್ಲಿ, ವಿದ್ಯಾರ್ಥಿಗಳು ತಾವು ತಿನ್ನುವ ಆಹಾರವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಇದೆ. ಆದರೆ ತಮ್ಮ ಅಭಿಪ್ರಾಯದ ಮೇಲೆ ಜನರನ್ನು ತಮ್ಮ ವಿರುದ್ಧ ಎತ್ತಿಕಟ್ಟಲು ಕೆಲವು ವಿಭಾಗಗಳು ಪ್ರಯತ್ನಿಸುತ್ತಿವೆ. ದುರ್ಬಲ ಮತ್ತು ಅಪೌಷ್ಟಿಕ ಮಕ್ಕಳಿಗೆ ಮೊಟ್ಟೆಗಳನ್ನು ನೀಡುವುದನ್ನು ನಾನು ವಿರೋಧಿಸುತ್ತೇನೆ ಎಂದು ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.
ಎಲ್ಲಾ ಮಕ್ಕಳಿಗೆ ಅವರ ಮಧ್ಯಾಹ್ನದ ಊಟದ ಭಾಗವಾಗಿ ಮೊಟ್ಟೆಗಳನ್ನು ನೀಡುವ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದ ಸ್ವಾಮೀಜಿ, ಆಹಾರದ ಬಗ್ಗೆ ಪ್ರತಿಯೊಬ್ಬರಿಗೂ ಆಯ್ಕೆಯ ಸ್ವಾತಂತ್ರ್ಯವಿದೆ ಮತ್ತು ಸಸ್ಯಾಹಾರಿಗಳಿಗೆ ಬಲವಂತವಾಗಿ ಮೊಟ್ಟೆಗಳನ್ನು ತಿನ್ನಿಸಬಾರದು ಎಂದು ಹೇಳಿದ್ದರು.
ಶಾಲೆಯಲ್ಲಿ ಸಾಮೂಹಿಕವಾಗಿ ಮೊಟ್ಟೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಆದರೆ ಶಾಲೆಯಲ್ಲಿ ಮೊಟ್ಟೆ ತಿನ್ನುವವರಿಗೆ ಮೊಟ್ಟೆ ಕೊಡುತ್ತಾರೆ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ನೀಡುತ್ತಾರೆ ಎನ್ನುವ ವಿಚಾರ ನಂತರ ತಿಳಿಯಿತು. ಪೂರ್ತಿಯಾಗಿ ವಿಚಾರವನ್ನು ನಮಗೆ ತಿಳಿಸದೆ ಮೊಟ್ಟೆ ಹಂಚುವ ಕುರಿತು ಅಭಿಪ್ರಾಯವೇನು ಎಂದು ಕೇಳಲಾಗಿದೆ. ಅದಕ್ಕೆ ತಕ್ಕ ಹಾಗೆ ನಾನು ಉತ್ತರ ನೀಡಿದ್ದೇನೆ. ಸಮಾಜದ ಮುಂದೆ ನಮ್ಮ ಅಭಿಪ್ರಾಯ ಮುಂದಿಟ್ಟು ಶಾಲೆಯಲ್ಲಿ ಬಡ, ಆಶಕ್ತ, ದುರ್ಬಳ ಮಕ್ಕಳಿಗೆ ಮೊಟ್ಟೆ ಕೊಡುವುದನ್ನು ವಿರೋಧಿಸುತ್ತಿದ್ದಾರೆ ಎನ್ನುವುದು ಸರಿಯಲ್ಲ ಎಂದಿದ್ದಾರೆ.
Comments are closed.