ಕರಾವಳಿ

ಹುಟ್ಟೂರಿನ‌ ಕನ್ನಡ ಶಾಲೆಗೆ ತಾಯಿ ಹೆಸರಿನಲ್ಲಿ ಸಭಾಂಗಣ ಕಟ್ಟಿಸಿಕೊಟ್ಟ ಗುರುಕುಲ ಸಂಸ್ಥೆಯ ಮುಖ್ಯಸ್ಥ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಗ್ರಾಮೀಣ ಭಾಗದ ಮಕ್ಕಳು ವಿದ್ಯಾವಂತರಾಗಿ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕೆಂಬ ನಿಟ್ಟಿನಲ್ಲಿ ಬಾಂಡ್ಯ ಎಜುಕೇಶನ್ ಟ್ರಸ್ಟಿನ ಗುರುಕುಲ ಸಂಸ್ಥೆಯು 94 ವರ್ಷ ಇತಿಹಾಸವಿರುವ ಕೊಡ್ಲಾಡಿ ಸರಕಾರಿ ಶಾಲೆಯನ್ನು ದತ್ತು ಪಡೆದು ಪುನರುಜ್ಜೀವನಗೊಳಿಸಲು ಮುಂದಾಗಿದ್ದು ಶಾಲೆ ಹಳೆ ವಿದ್ಯಾರ್ಥಿಯಾಗಿ ತನ್ನೂರಿನ ಋಣ ತೀರಿಸುವ ಮಹತ್ಕಾರ್ಯಕ್ಕೆ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಪಣ ತೊಟ್ಟಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯು ಇಲ್ಲಿನ ಋಣ ತೀರಿಸುವ ಚಿಂತನೆ ಹೊಂದಬೇಕು ಎಂದು ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಭಿಪ್ರಾಯಪಟ್ಟರು.

 

ಕೋಟೇಶ್ವರ ಸಮೀಪದ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ಸಂಸ್ಥೆಯ ವತಿಯಿಂದ ಕೊಡ್ಲಾಡಿ-ಬಾಂಡ್ಯ ಸರ್ಕಾರಿ ಶಾಲೆಗೆ ಕೊಡುಗೆಯಾಗಿ ನೀಡಿದ ಶಾಲಾ ಸಭಾಂಗಣ ‘ ಬಾಂಡ್ಯ ಚಂದಮ್ಮ ಶೆಡ್ತಿ ಮೆಮೋರಿಯಲ್ ಹಾಲ್ ‘ ಅನ್ನು ಭಾನುವಾರ ಸಂಜೆ ಉದ್ಘಾಟಿಸಿ‌ ಅವರು ಮಾತನಾಡಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ಜಂಟಿ ಕಾರ್ಯನಿರ್ವಾಹಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಅವರು, 1926 ರಲ್ಲಿ ಪ್ರಾರಂಭಗೊಂಡು ಇನ್ನೇನು ಶತಮಾನದ ಹೊಸ್ತಿಲಲ್ಲಿರುವ ಕೊಡ್ಲಾಡಿ- ಬಾಂಡ್ಯ ಶಾಲೆ, ಈ ಭಾಗದ ನಾಲ್ಕಾರು‌ ಗ್ರಾಮಗಳ ವಿದ್ಯಾರ್ಥಿಗಳ ಶಿಕ್ಷಣಾರ್ಜನೆಗೆ ಅವಕಾಶ ನೀಡಿತ್ತು. ಇಲ್ಲಿಯೇ ಶಿಕ್ಷಣ ಪಡೆದುಕೊಂಡ ನನ್ನ ಕುಟುಂಬದವರಿಗೂ ಈ ಶಾಲೆಯ ಋಣವಿದೆ. ಈ ಶಾಲೆಯನ್ನು ಉಳಿಸಿ ಬೆಳೆಸುವ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು‌ ನೀಡಲು ರೂಪುರೇಷೆ ಸಿದ್ದಪಡಿಸಿ, ವಾರವಿಡೀ ಗುರುಕುಲ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಹಲವು ಅಭಿವೃದ್ಧಿ‌ ಕೆಲಸ ಹಮ್ಮಿಕೊಳ್ಳಲಾಗಿದೆ. ಪೋಷಕರು ವಿಶ್ವಾಸವಿಟ್ಟು ತಮ್ಮ ಮಕ್ಕಳನ್ನು ಮತ್ತೆ ಈ ಕನ್ನಡ ಶಾಲೆಗೆ ಕಳುಹಿಸುತ್ತಿರುವುದು ಹೆಮ್ಮೆ ಸಂಗತಿ. ಈ ಸಭಾಂಗಣವನ್ನು ತಾಯಿ ಹೆಸರಿನಲ್ಲಿ‌ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದು , ಮುಂದಿನ ದಿನಗಳಲ್ಲಿ ಗ್ರಂಥಾಲಯ, ಕಂಪ್ಯೂಟರ್ ಶಿಕ್ಷಣ, ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಿಂತಲೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಬದ್ಧರಾಗಿದ್ದು ಕನ್ನಡ ಶಾಲೆ ಹೇಗಿರಬೇಕೆಂಬುದನ್ನು ಇಡೀ ಜಿಲ್ಲೆಗೆ ತೊರಿಸುವ ಮಾದರಿ ಕೆಲಸ ಮಾಡೋಣ, ಇದಕ್ಕೆ ಪೋಷಕರ ಸಹಕಾರ ನೀಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಪತ್ರಕರ್ತ ಕೆ.ಸಿ ರಾಜೇಶ್ ಮಾತನಾಡಿ, ಈ ಶಾಲೆ ಭವ್ಯ ಪರಿಸರದಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದ್ದು ತನ್ನೂರ ಶಾಲೆಯನ್ನು‌ ಉನ್ನತೀಕರಿಸಿ ಈ ಶಿಕ್ಷಣ ದೇಗುಲದ ಮೂಲಕ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸದ ಕನಸು ನನಸು ಮಾಡುತ್ತಿರುವ ಗುರುಕುಲ ಸಂಸ್ಥೆಯ ಸುಭಾಶ್ಚಂದ್ರ ಶೆಟ್ಟಿ ದಂಪತಿಗಳ ಕಾರ್ಯ ಶ್ಲಾಘನೀಯ. ಆಧುನಿಕತೆಯ ತಂತ್ರಜ್ಞಾನದ ಜೊತೆಗೆ ಜಗತ್ತು‌ ಬದಲಾಗುತ್ತಿದೆ. ಆಂಗ್ಲ ಭಾಷೆ ಶಿಕ್ಷಣದ ಪ್ರಭಾವಕ್ಕೆ ಮಾತೃ ಭಾಷೆಯ ಶಿಕ್ಷಣ ಮರೆಯಾಗಬಾರದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ. ಸನಾತನ ಸಂಸ್ಕೃತಿಯನ್ನು ಬಿಂಬಿಸುವ, ಹಿರಿಯರನ್ನು ಗೌರವಿಸಿ ಪೂಜಿಸುವ ಸಂಸ್ಕಾರಗಳುಳ್ಳ ಮೌಲ್ಯಯುತ ಶಿಕ್ಷಣಗಳು ಗ್ರಾಮೀಣ ಭಾಗದ ಕನ್ನಡ ಶಾಲೆಗಳಲ್ಲಿ ಸಿಗುತ್ತದೆ ಎನ್ನುವ ಅಪೂರ್ವ ಕನಸು ನನಸಾಗುವ ಕಾಲ ಇದಾಗಿದೆ ಎಂದರು.

ಬಾಂಡ್ಯ ಎಜುಕೇಶನ್ ಟ್ರಸ್ಟಿನ ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಸುಬ್ಬಣ್ಣ ಶೆಟ್ಟಿ ಬಾಂಡ್ಯ ವಹಿಸಿದ್ದರು.

ಕರ್ಕುಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ ಬಾಂಡ್ಯ, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಮೋಹನ್ ಕೆ, ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ಜಂಟಿ ಕಾರ್ಯನಿರ್ವಾಹಕಿ ಅನುಪಮಾ‌ ಎಸ್. ಶೆಟ್ಟಿ, ಕುಂದಾಪುರ ತಾ.ಪಂ‌ ಮಾಜಿ ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಬಾಂಡ್ಯ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ ಜನಾರ್ಧನ, ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ರತ್ನಾಕರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಇದ್ದರು.

ಗುರುಕುಲ ಪಬ್ಲಿಕ್ ಸ್ಕೂಲ್ ಸಂಯೋಜಕಿ ವಿಶಾಲಾ ಶೆಟ್ಟಿ ಸ್ವಾಗತಿಸಿದರು, ಬಾಂಡ್ಯ ಶಾಲೆ ಸಹಶಿಕ್ಷಕಿ ಆಶ್ರಿತಾ ನಿರೂಪಿಸಿದರು.

Comments are closed.