ಕರಾವಳಿ

ಮೃತ ಗೋವುಗಳನ್ನು ಅಮಾನುಷವಾಗಿ ರಾ.ಹೆದ್ದಾರಿಯಲ್ಲಿ ಎಳೆದೊಯ್ದ ಐ.ಆರ್.ಬಿ ವಿರುದ್ಧ ಸಿಡಿದೆದ್ದ ಹಿಂದೂಪರ‌ ಸಂಘಟನೆಗಳು..! (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಟೋಯಿಂಗ್ ವಾಹನದ ಹಿಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗೋವನ್ನು ಹಿಂಸಾತ್ಮಕವಾಗಿ ಕಟ್ಟಿಕೊಂಡು ಸಾಗಿದವರ ಐ.ಆರ್.ಬಿ ಕಂಪೆನಿ ವಿರುದ್ದ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ಶಿರೂರು ಟೋಲ್ ಪ್ಲಾಜಾದಲ್ಲಿ ಸೋಮವಾರ ನಡೆಯಿತು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶ್ರೀಧರ ಬಿಜೂರು ಮಾತನಾಡಿ, ಬೈಙದೂರು ಶಿರೂರು ಬಳಿ‌ನಡೆದ ಈ ಕೃತ್ಯ ದೇಶವ್ಯಾಪಿ ವೈರಲ್ ಆಗಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ರೈತಾಪಿ ಜನರು‌ ಜಾಸ್ಥಿಯಾಗಿರುವ ಈ ಕೃಷಿ ಪ್ರಾಧಾನ್ಯ ತಾಲೂಕಿನಲ್ಲಿ ಮೃತ ಗೋವನ್ನು ಈ‌ಮಟ್ಟಿಗೆ ನಡೆಸಿಕೊಂಡಿರುವುದು ನಮ್ಮೆಲ್ಲರ ಭಾವನೆಗೆ ಘಾಸಿಯಾಗಿದೆ. ಇದು ದುಷ್ಕರ್ಮಿಗಳ ಮಾನಸಿಕತೆ ಎಂಬುದು ಎದ್ದು ಕಾಣುತ್ತಿದೆ. ಐ.ಆರ್.ಬಿ. ಕಂಪೆನಿ‌ನಿತ್ಯ ನೂರಾರು ತಪ್ಪುಗಳನ್ನು ಮಾಡಿ‌ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ಹೆದ್ದಾರಿಯಲ್ಲಿ‌ ಮಳೆ‌ ನೀರು‌ ನಿಲ್ಲುವುದು, ಬೀದಿ ದೀಪ ಸಮಸ್ಯೆಯಿಂದ ಅವಘಡಗಳು ನಡೆಯುತ್ತಿದ್ದು ಜನ ಜಾನುವಾರುಗಳ ಸಾವು ನೋವಿಗೆ ಹೊಣೆ ಯಾರು? ಉತ್ತಮವಾದ ರಸ್ತೆ, ವೇಗ ಪಥ ರಸ್ತೆಯ ನೆಪಹೇಳಿ ಇದೀಗಾ ಬ್ರಿಟೀಷರು ಅಹಾಗೂ ಪೋರ್ಚುಗೀಸರಂತೆ ನಮ್ಮ‌ ಬಳಿಯೇ ವಸೂಲಿಗೆ ಇಳಿದಿದ್ದಾರೆ. ರಸ್ತೆ ಸೌಲಭ್ಯದ ಹೆಸರಿನಲ್ಲಿ‌ ಊರು ಕೊಳ್ಳೆಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು. ಶಿರೂರು ಟೋಲ್ ಗೇಟ್‌ನಲ್ಲಿ ಪೇಟಿಯಂ ವಾಲೇಟ್ ಮೂಲಕ ಸಾಗುವುದಾದರೆ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು ಇದನ್ನೆಲ್ಲಾ ಶೀಘ್ರವಾಗಿ ಸರಿಪಡಿಸಬೇಕು. ಒಂದೊಮ್ಮೆ ಇಲ್ಲವಾದ್ದಲ್ಲಿ ವಿ.ಹಿಂ.ಪ ಹಾಗೂ ವಿವಿಧ ಸಮಾನ ಮನಸ್ಕ ಸಂಘಟನೆಯ ಒಗ್ಗೂಡುವಿಕೆಯಲ್ಲಿ ಶಿರೂರು ಟೋಲ್ ಪ್ಲಾಜಾದ ಮುಂದೆ ಧರಣಿ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಜರಂಗದಳ ಬೈಂದೂರು ತಾಲೂಕು ಸಂಚಾಲಕ ಸುಧಾಕರ ಶೆಟ್ಟಿ ನೆಲ್ಯಾಡಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಆರಂಭಗೊಂಡಿರುವ ಚತುಷ್ಪಥ ಹೆದ್ದಾರಿ ಕಾಮಗಾತಿ ಗುತ್ತಿಗೆ ಪಡೆದ ಐ.ಆರ್.ಬಿ ಕಂಪೆನಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಶೃದ್ಧಾಬಿಂಧುವಾದ ಗೋವುಗಳು‌ ಅಪಘಾತಗೊಂಡು ಮೃತಪಟ್ಟಾಗ ಸಮರ್ಪಕವಾಗಿ ವಿಲೇವಾರಿ ಮಾಡದೇ ಕ್ರೂರತನ ಪ್ರದರ್ಶಿಸಲಾಗಿದೆ. ಹಿಂದೂಗಳ ಭಾವನೆಗೆ ದಕ್ಕೆಯಾದರೆ ಸುಮ್ಮನಿರೋದಿಲ್ಲ. ಈ ಪೈಶಾಚಿಕ ಕೃತ್ಯ ನಡೆಸಿದ ಸಂಬಂಧಪಟ್ಟವರಿಗೆ ಶಿಕ್ಷೆಯಾಗಬೇಕು.ಇನ್ನು ಬಹುಕಾಲದ ಬೇಡಿಕೆಯಾದ ಬೀದಿ ದೀಪ,ರಸ್ತೆ ಸಮಸ್ಯೆಗಳನ್ನು ಐ.ಆರ್.ಬಿ ಕಂಪೆನಿ ಸರಿಪಡಿಸದಿದ್ದಲ್ಲಿ ಮುಂದಿನ ದಿನದಲ್ಲಿ ಸಂಘಟಿತ ಹೋರಾಟ ಅನಿವಾರ್ಯ ಎಂದರು.

ವಿ.ಹಿಂ.ಪ ಬೈಂದೂರು ತಾಲೂಕು ಅಧ್ಯಕ್ಷ ಜಗದೀಶ ಕೊಲ್ಲೂರು ಮಾತನಾಡಿ ಗೋಮಾತೆಗೆ ಗೌರವ ನೀಡುವುದು ಹಿಂದೂ ಸಂಸ್ಕ್ರತಿಯ ಪ್ರತೀಕವಾಗಿದೆ. ಕೋವಿಡ್ ವೇಳೆ ಮೃತಪಟ್ಟವರನ್ನು ಸಂಘಟನೆಯವರು ಸಂಪ್ರದಾಯಬದ್ಧವಾಗಿ ಅಂತ್ಯಕ್ರಿಯೆ ಮಾಡಿದ್ದೆವು. ಹಾಗೆಯೇ ಮಾತೃ ಸ್ವರೂಪಿ ಗೋವುಗಳು ರಸ್ತೆಯಲ್ಲಿ ಅಪಘಾತ ಹೊಂದಿದಾಗ ಅವುಗಳನ್ನು ಸಮರ್ಪಕವಾಗಿ ಗೌರವಿಸಬೇಕು. ಮುಂದೆ ಇಂತಹ ಘಟನೆಗಳು ಪುನರಾವರ್ತನೆಯಾದರೆ ಹಿಂದೂ ಸಂಘಟನೆ ಕೈಕಟ್ಟಿ ಕೂರುವುದಿಲ್ಲ ಎಂದು ಎಚ್ಚರಿಸಿದರು.

ವಿ.ಹಿಂ.ಪ ಬೈಂದೂರು ತಾಲೂಕು ಕಾರ್ಯದರ್ಶಿ ಶ್ರೀನಿವಾಸ ಮೂದೂರು, ವಿ.ಹಿಂ.ಪ ಬಜರಂಗದಳ ಪಡುವರಿ ಘಟಕದ ಅಧ್ಯಕ್ಷ ಗುರುರಾಜ್ ಕಲ್ಲುಕುಂಟನಮನೆ, ವಿಹಿಂಪ, ಭಜರಂಗದಳ ಸಂಘಟನೆಯ ರಾಘವೇಂದ್ರ ಹೊಸಾಡು, ಮಹೇಶ್ ಖಾರ್ವಿ, ಶರತ್ ಮೋವಾಡಿ, ನವೀನ್ ಕಾಂಚನ್, ಗಿರೀಶ್ ಶಿರೂರು, ಹಿಂಜಾವೇ ಪ್ರಮುಖರಾದ ವೇದನಾಥ್, ರಾಜೇಶ್ ಆಚಾರ್ಯ, ರತ್ನಾಕರ ಗಂಗೊಳ್ಳಿ, ಸ್ವದೇಶಿ ಗೆಳೆಯರ ಬಳಗದ ಸತೀಶ್ ನಾವುಂದ, ಮುಖಂಡರಾದ ಪುಷ್ಪರಾಜ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಸಮಾಜಸೇವಕ ಸುಬ್ರಹ್ಮಣ್ಯ ಬಿಜೂರು, ವಿ.ಹಿಂ.ಪ ಬಜರಂಗದಳದ ಮುಖಂಡರು ಹಾಗೂ ವಿವಿಧ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮೊದಲಾದವರಿದ್ದರು.

ಇದೇ ವೇಳೆ ಐ.ಆರ್.ಬಿ ಸಂಸ್ಥೆಯ ಮುಖ್ಯಸ್ಥ ಪ್ರಪ್ಪುಲ್ಲ ಕಾಕಡೆ ಹಿಂದೂ ಪರ ಸಂಘಟನೆ ಎದುರು‌ ಕೈ‌ ಮುಗಿದು ಆದ ಅಚಾತುರ್ಯದ ಬಗ್ಗೆ ಕ್ಷಮೆಯಾಚಿಸಿದರು.

ಬಂದೋಬಸ್ತ್
ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ್ ಕೆ.,ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ,‌ ಬೈಂದೂರು ಠಾಣಾಧಿಕಾರಿ ಪವನ್ ನಾಯಕ್, ಗಂಗೊಳ್ಳಿ ಪಿಎಸ್ಐ ನಂಜಾ‌ ನಾಯ್ಕ್, ಕೊಲ್ಲೂರು ಪಿಎಸ್ಐ ನಾಸೀರ್ ಹುಸೇನ್, ಭಟ್ಕಳ ಗ್ರಾಮಾಂತರ ಠಾಣೆ ಪಿಎಸ್ಐ ಭರತ್ ಕುಮಾರ್ ಹಾಗೂ ವಿವಿಧ ಠಾಣೆ ಸಿಬ್ಬಂದಿಗಳ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ತಹಶಿಲ್ದಾರ್ ಅವರಿಗೆ ಮನವಿ…
ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮಿ ಅವರಿಗೆ ಹಿಂದೂ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು. ಮನವಿ ಸಾರಾಂಶ ಹೀಗಿದೆ..ರಾಷ್ಟೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್.ಬಿ ಕಂಪೆನಿಯು ಅವೈಜ್ಞಾನಿಕ ಕಾಮಗಾರಿಯ ಮೂಲಕ ಜನರಿಗೆ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ನೀಡುತ್ತಲೇ ಬಂದಿದೆ.ದಿನಾಂಕ 05.12.2021 ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ತುಣುಕೊಂದು ವೈರಲ್ ಆಗಿದ್ದು,ಅದರಲ್ಲಿ ಐ.ಆರ್.ಬಿ ಕಂಪನಿಯು ಟೋಲ್ ಪ್ಲಾಜಾ ಸಮೀಪದಲ್ಲಿನ ಟೋಯಿಂಗ ವಾಹನ (1033) ದ ಮೂಲಕವಾಗಿ ಶಿರೂರು ಕಡೆಯಿಂದ ಟೋಲ್ ನತ್ತ ಮ್ರತ ಗೋವುಗಳ ಕಳೆಬರವನ್ನು ವಾಹನಕ್ಕೆ ಹಗ್ಗದಿಂದ ಕಟ್ಟಿ ಅಡ್ಡಾದಿಡ್ಡಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮಾನುಷವಾಗಿ ಎಳೆದೋಯ್ಯಲಾಗಿದ್ದು, ಈ ದುಷ್ಕ್ರತ್ಯ ದಿಂದ ನಮ್ಮೆಲ್ಲಾ ಭಾವನೆಗಳಿಗೆ ತೀವ್ರವಾದ ಘಾಸಿಯಾಗಿದೆ. ಬುದ್ದಿವಂತರ ಜಿಲ್ಲೆಯಾದ ಅವಿಭಜಿತ ದ. ಕ ಜಿಲ್ಲೆ ಅದರಲ್ಲೂ ಕೃಷಿ ಕಾಯಕವನ್ನೆ ನಂಬಿಕೊಂಡು ಬಂದಂತಹ ರೈತಾಪಿ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಬೈಂದೂರು ಭಾಗದಲ್ಲಿ ಇಂತಹ ಅಮಾನವೀಯ ಕ್ರತ್ಯ ನಡೆದಿರುವುದು ಮಾನವೀ6ಯ ವ್ಯವಸ್ಥೆಯನ್ನು ಅಣಕಿಸುವಂತಿದೆ. ಸಿಬ್ಬಂದಿಗಳು ವಾಹನಗಳು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರುವಂತಹ ಕಂಪನಿ ಆಗಿದ್ದರೂ ಈ ರೀತಿ ಆಮಾನುಷವಾಗಿ ವರ್ತಿಸಿ ದುಷ್ಕ್ರತ್ಯ ಎಸಗಿದ ದುಷ್ಕರ್ಮಿಗಳು, ಈ ಕಂಪೆನಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು.ತಪ್ಪಿತಸ್ಥರನ್ನು ಬಂಧಿಸಿ ಕಾನೂನಿನಂತೆ ಶಿಕ್ಷಿಸುವರೇ ವಿನಂತಸಿಕೊಳ್ಳುತ್ತೇವೆ.

Comments are closed.