ಕರಾವಳಿ

ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಆರೋಪ: ಅಡುಗೆ ಅನಿಲ ವಿತರಕ ಏಜೆನ್ಸಿಗಳ ಮೇಲೆ ಕ್ರಮ ಕೈಗೊಳ್ಳಲು ಎಸ್‌ಡಿಪಿಐ ಆಗ್ರಹ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಒಡೆತನದ ವಿವಿಧ ತೈಲ ಕಂಪೆನಿಗಳ ಏಜೆನ್ಸಿಗಳು ಅಡುಗೆ ಅನಿಲ ವಿತರಿಸುವ ಸಂದರ್ಭದಲ್ಲಿ ಗ್ರಾಹಕರಿಂದ ಮೂಲಬೆಲೆಗಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದಾರೆ.

ಇದರ ಬಗ್ಗೆ ವಿಚಾರಿಸಿದಾಗ ಇದು ಸಾಗಾಟದ ಹೆಚ್ಚುವರಿ ಹಣ ಎಂಬ ಸಬೂಬು ನೀಡುತ್ತಿದ್ದಾರೆ, ಆದರೆ ಸಾಗಾಟಕ್ಕೆ ಸರಕಾರ ನಿಗದಿಪಡಿಸಿದ ಮಾನದಂಡ ಇದ್ದು ಇದನ್ನು ಬಹುತೇಕ ಎಲ್ಲಾ ಕಂಪೆನಿಗಳ ಎಜೆನ್ಸಿಗಳು ಗಾಳಿಗೆ ತೂರಿ ತಮ್ಮಿಚ್ಚೆಯಂತೆ ಬೇಕಾಬಿಟ್ಟಿ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆ ನಡೆಸುತ್ತಿದ್ದಾರೆ.

ಈ ಬಗ್ಗೆ ಎಸ್‌ಡಿಪಿಐ ಜಿಲ್ಲಾ ನಿಯೋಗ ಅಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರನ್ನು ಭೇಟಿಯಾಗಿ ಇಂತಹ ಏಜೆನ್ಸಿಗಳ ವಿರುದ್ಧ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ಈಗಾಗಲೇ ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದ್ದು ಅದರಲ್ಲಿ ಅಡುಗೆ ಅನಿಲದ ಬೆಲೆಯೂ ವಿಪರೀತ ದುಬಾರಿಯಾಗಿ ಸರಕಾರದ ಸಹಾಯಧನವೂ ಇದೀಗ ಲಭಿಸುತ್ತಿಲ್ಲ ಇದರಿಂದಾಗಿ ಮಧ್ಯಮ ವರ್ಗದ ಹಾಗೂ ಬಡಜನರ ಜೀವನ ನಿರ್ವಹಣೆ ಕಷ್ಟಕರವಾಗಿದೆ.

ಇಂತಹ ಸಂದರ್ಭದಲ್ಲಿ ಎಜೆನ್ಸಿಗಳು ಪಡೆಯುವ ಹೆಚ್ಚುವರಿ ಮೊತ್ತವನ್ನು ತಾವುಗಳು ಕೂಡಲೇ ತಡಹಿಡಿಯಬೇಕು ಹಾಗೂ ವಿತರಕರ ಮೇಲೆ ಇಲಾಖೆ ವತಿಯಿಂದ ನಿಯಂತ್ರಣ ಹೇರುವ ಮೂಲಕ ಜನಸಾಮಾನ್ಯರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ನಿಯೋಗವು ಅಹಾರ ಇಲಾಖೆಯ ಉಪನಿರ್ದೇಶಕರಲ್ಲಿ ಒತ್ತಾಯಿಸಿದೆ.

ಇಲ್ಲವಾದಲ್ಲಿ ಇದರ ವಿರುದ್ಧ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ನಾಗರಿಕರ ಸಹಯೋಗದಲ್ಲಿ ಪಕ್ಷದ ವತಿಯಿಂದ ಜನಾಂದೋಲನವನ್ನು ಹಮ್ಮಿಕೊಳ್ಳಲು ತೀಮಾನಿಸಲಾಯಿತು.

ಎಸ್‌ಡಿಪಿಐ ನಿಯೋಗದಲ್ಲಿ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ರಾಜ್ಯ ಮುಖಂಡರಾದ ಶರೀಫ್ ಪಾಂಡೇಶ್ವರ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಖಾದರ್ ಪರಂಗಿಪೇಟೆ ಉಪಸ್ಥಿತರಿದ್ದರು.

Comments are closed.