ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಮುಂಭಾಗದಲ್ಲಿ ಹರಿಯುವ ಅಗ್ನಿತೀರ್ಥ ನದಿಯು ಸಂಪೂರ್ಣ ಕಲುಷಿತಗೊಂಡಿದ್ದು ಜಲಚರಗಳು ಸಾಯುತ್ತಿದೆ. ಇದಕ್ಕೆ ಜಿಲ್ಲಾಡಳಿತದ ನಿಷ್ಕ್ರೀಯತೆ ಕಾರಣ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಕೋಟ ಆರೋಪಿಸಿದ್ದಾರೆ. ಈ ಬಗ್ಗೆ ಸಮಾನ ಮನಸ್ಕರು ಕಳೆದ ಹದಿನೈದು ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಕೂಡ ಆಳುವ ಪಕ್ಷದಿಂದಾಗಲೀ, ಅಧಿಕಾರಿಗಳಿಂದಗಾಗಲೀ ನ್ಯಾಯ ಸಿಕ್ಕಿಲ್ಲ. ಈ ಬಗ್ಗೆ ಕಾನೂನು ಹೋರಾಟಕ್ಕೆ ಅಣಿಯಾಗಿದ್ದೇವೆ ಎಂದು ಅವರು ಹೇಳೀದರು.
ಕುಂದಾಪುರದ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಅಗ್ನಿತೀರ್ಥ ನದಿ ಸೌಪರ್ಣಿಕ ನದಿಯನ್ನು ಸೇರಿಕೊಳ್ಳುತ್ತದೆ. ಕೊಲ್ಲೂರು ಕ್ಷೇತ್ರಕ್ಕೆ ತಮ್ಮ ಇಷ್ಟಾರ್ಥಗಳ ಸಿದ್ದಿಗಾಗಿ ಬರುವ ಕೋಟ್ಯಾಂತರ ಭಕ್ತರು ಈ ಪುಣ್ಯತೀರ್ಥದಲ್ಲಿ ಪವಿತ್ರಾ ಸ್ನಾನವನ್ನು ಮಾಡುವ ಧಾರ್ಮಿಕ ಆಚರಣೆಗಳಿವೆ. ಪ್ರತಿ ವರ್ಷದ ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವ ಆಚರಣೆಯ ವೇಳೆ ಶ್ರೀ ದೇವಿಗೆ ಇದೆ ಪುಣ್ಯತೀರ್ಥದಲ್ಲಿ ತೆಪ್ಪೋತ್ಸವ ಮತ್ತು ಅವಭೃತ ಸ್ಥಾನ ಮಾಡುವ ಆಚರಣೆಯೂ ಇದ್ದು ಎರಡು ವಾರಗಳ ಹಿಂದೆ ನಡೆದ ಜಾತ್ರಾ ಸಂದರ್ಭ ಇದೇ ಕಲುಷಿತ ನೀರಿನಲ್ಲಿ ಸ್ನಾನ ಮಾಡಿಸಿರುವುದು ನಿಜಕ್ಕೂ ದುರಂತವಾಗಿದೆ ಎಂದರು.

ಅಗ್ನಿತೀರ್ಥ ನದಿಯ ಎರಡೂ ದಡದಲ್ಲಿ ಇರುವ ಕಲ್ಯಾಣಮಂಟಪ, ವಸತಿಗೃಹ, ಹೋಟೆಲ್ ಸೇರಿದಂತೆ ಅನೇಕ ವಾಣಿಜ್ಯ ಚಟುವಟಿಕೆಯ ಕಟ್ಟಡದಲ್ಲಿ ಉಪಯೋಗಿಸಿ ಹೊರಬರುವ ತ್ಯಾಜ್ಯ ಮಿಶ್ರಿತ ನೀರು ಅಗ್ನಿತೀರ್ಥವನ್ನು ಸೇರುತ್ತಿದೆ. ದೇವಸ್ಥಾನಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತರು ಉಪಯೋಗಿಸಿ ಎಸೆದಿರುವ ಘನ ತ್ಯಾಜ್ಯಗಳು ಕೂಡ ನದಿಯನ್ನು ಸೇರಿಕೊಂಡು ಸೌಪರ್ಣಿಕ ನದಿಯು ವಿಷಪೂರಿತ ಕಲುಷಿತ ತೀರ್ಥವಾಗುತ್ತಿದೆ. ವರ್ಷದ ಮಳೆಗಾಲದ ಮೂರು ತಿಂಗಳನ್ನು ಹೊರತುಪಡಿಸಿ ಉಳಿದ ಋತುಗಳಲ್ಲಿ ನೀರಿನ ನಿರಂತರ ಹರಿಯುವಿಕೆ ಇಲ್ಲದೆ ಇರುವುದರಿಂದ ವಿಷಪೂರಿತ ನೀರನ್ನು ಕುಡಿದು ಇಲ್ಲಿನ ಅಮುಲ್ಯ ಮತ್ಸ ಸಂಪತ್ತು, ಜಲಚರಗಳು ಹಾಗೂ ಮೂಕಾಂಬಿಕಾ ಅಭಯರಣ್ಯದ ಪ್ರಾಣಿ-ಸಂಕುಲಗಳು ದೊಡ್ಡ ಪ್ರಮಾಣದಲ್ಲಿ ಜೀವ ಕಳೆದುಕೊಳ್ಳುತ್ತಿವೆ. ಕೊಳಚೆ ಹಾಗೂ ಕೆಸರು ಮಯವಾಗುವ ಈ ನೀರಿನಿಂದ ಹರಡುವ ಗಬ್ಬು ವಾಸನೆ ಹಾಗೂ ಸೊಳ್ಳೆಗಳಿಂದಾಗಿ ಪರಿಸರದ ಜನರು ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.ಈ ಬಗ್ಗೆ ಉಡುಪಿ ಡಿಸಿ, ಕುಂದಾಪುರ ಎಸಿ, ತಹಶಿಲ್ದಾರ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳ ಮೇಲೆ ಹಸಿರು ಪೀಠಕ್ಕೆ ದೂರು ನೀಡಲಾಗುವುದು ಎಂದರು.
ಸಾಮಾಜಿಕ ಕಾರ್ಯಕರ್ತ ಹರೀಶ್ ತೋಳಾರ್ ಕೊಲ್ಲೂರು ಮಾತನಾಡಿ, ದೇಶ ಹಾಗೂ ವಿದೇಶದಿಂದ ಬರುವ ಶ್ರೀ ಮೂಕಾಂಬಿಕೆಯ ಮುಗ್ಧ ಭಕ್ತರು ಸೌಪರ್ಣಿಕ ನದಿಯ ಮಾಲೀನ್ಯತೆಯ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲದಿರುವುದರಿಂದ ಈ ವಿಷಪೂರಿತ ನೀರಿನಲ್ಲೇ ಪುಣ್ಯ ಸ್ನಾನ ಮಾಡುವುದರಿಂದ ಚರ್ಮ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಭಕ್ತರ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿರುವ ದೇವಸ್ಥಾನದ ಆಡಳಿತ ಹಾಗೂ ಸ್ಥಳೀಯ ಆಡಳಿತಕ್ಕೆ ಈ ಕುರಿತು ಸಾಕಷ್ಟು ದೂರುಗಳನ್ನು ನೀಡಿದ್ದರು ಯಾವುದೇ ಸರಕಾರದ ಯಾವುದೇ ಅಧಿಕಾರಿಗಳು ಸಮಸ್ಯೆಯ ಪರಿಹಾರಕ್ಕೆ ಸೂಕ್ತವಾಗಿ ಸ್ಪಂದಿಸಿಲ್ಲ. ಕೊಲ್ಲೂರು ಗ್ರಾಮದ ಸರ್ವೇ ನಂಬ್ರ: ೧೧೮/೧ ರಲ್ಲಿ ಇರುವ ಕಂದಾಯ ಇಲಾಖೆಯಲ್ಲಿ ಪರಂಬೂಕು ಹೊಳೆ ಎಂದು ನಮೂದಿಸಲಾಗಿದ್ದು ಈ ನದಿಯ ಎರಡು ಕಡೆಯಲ್ಲಿ ನದಿ ಹಾಗೂ ಅರಣ್ಯ ಭೂಮಿಯನ್ನು ಅತಿಕ್ರಮಿಸಿ, ಅನಧೀಕೃತ ವಸತಿಗೃಹ ಹಾಗೂ ಹೋಟೆಲ್ಗಳ ನಿರ್ಮಾಣ ಮಾಡಲಾಗಿದೆ. ಕೊಲ್ಲೂರು ಗ್ರಾಮದ ಸರ್ವೇ ನಂಬ್ರ: ೫೬ ರಲ್ಲಿ ಒಟ್ಟು ೧೫,೭೬೪.೪೮ ಎಕರೆ ಭೂಮಿ ಇದ್ದು ೨.೨೦ ಎಕರೆ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿಯ ದೇವಸ್ಥಾನದ ಭೂಮಿಯಾಗಿದೆ. ೦.೨೦ ಎಕರೆ ಸ್ಮಶಾನಕ್ಕೆ ಮೀಸಲಿಡಲಾಗಿದೆ. ಬಾಕಿ ಉಳಿದಿರುವ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಇದರಲ್ಲಿ ೮೬೬.೭೫ ಎಕರೆ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಇಲ್ಲಿಗೆ ಸೇರಿದ ಕೊಲ್ಲೂರಿನ ಸೌಪರ್ಣಿಕ ನದಿ ಹತ್ತಿರ ಇರುವ ಗಣೇಶ ದೇವಸ್ಥಾನದಿಂದ ಕಾಶಿ ಹೊಳೆಯವರೆಗೆ ಅಂದಾಜು ೨೫೦ ಮೀಟರ್ ಉದ್ದಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆ ನಿಮಾರ್ಣದ ಕುರಿತು ಕೊಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಮಾಹಿತಿಯು ಇಲ್ಲ. ರಸ್ತೆ ನಿರ್ಮಾಣದ ಪೂರ್ವದಲ್ಲಿ ಅರಣ್ಯ ಇಲಾಖೆ ಸೇರಿದಂತೆ ಪರಿಸರ ಹಾಗೂ ಇತರ ಇಲಾಖೆಗಳಿಂದ ಪೂರ್ವಾನುಮತಿಯನ್ನು ಪಡೆದುಕೊಂಡಿರುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಸೌಪರ್ಣಿಕ ಪುಣ್ಯನದಿಗೆ ಹೆಸರು ಬರಲು ಕಾರಣವಾದ “ಸುಪರ್ಣ” ಗರುಡನು ತಪಸ್ಸು ಮಾಡಿರುವ ಪುಣ್ಯ ಸ್ಥಳವನ್ನು ಅತಿಕ್ರಮಿಸಿಕೊಂಡು, ಸೌಪರ್ಣಿಕ ನದಿಯನ್ನು ಅನಧೀಕೃತವಾಗಿ ತುಂಬಿಸಿ ಕೆಲ ಉದ್ಯಮಿಗಳ ವ್ಯವಹಾರಗಳ ಅನುಕೂಲ ಮಾಡಿಕೊಡಲು ರಿಂಗ್ ರಸ್ತೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಅರಣ್ಯ ಸಂಪತ್ತನ್ನು ನಾಶಪಡಿಸಲಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ವಿರೋಧ ಸಂರಕ್ಷಣಾ ಮೀಸಲು ಅರಣ್ಯ ಭೂಮಿಯನ್ನು ಹಾಗೂ ನೈಸರ್ಗಿಕವಾಗಿ ಹರಿಯುವ ನದಿ ಪ್ರದೇಶವನ್ನು ಅತಿಕ್ರಮಿಸಿ ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ವೆಚ್ಚ ಮಾಡಿರುವವರ ಕುರಿತು ಸರಕಾರ ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಯನ್ನು ನಡೆಸಬೇಕು, ಕಾನೂನು ಬಾಹಿರವಾಗಿ ರಸ್ತೆ ನಿರ್ಮಾಣಕ್ಕೆ ಕಾರಣವಾದವರ ವಿರುದ್ದ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಕೊಲ್ಲೂರಿನ ಪರಂಪರೆ, ಇತಿಹಾಸ, ಪಾವಿತ್ರ್ಯತೆಗೆ ಧಕ್ಕೆಯನ್ನು ಉಂಟು ಮಾಡಿರುವ ಈ ಅನಧೀಕೃತ ರಸ್ತೆಯನ್ನು ತೆರವುಗೊಳಸಿ, ನದಿಯ ಅತಿಕ್ರಮಣ ನಿವಾರಿಸಬೇಕು ಎಂದು ಅವರು ಆಗ್ರಹಿಸಿದರು. ಸರಕಾರ ಕೊಲ್ಲೂರಿನ ಭಕ್ತರ ಭಾವನೆಗಳಿಗೆ ಗೌರವಕೊಟ್ಟು ಸೂಕ್ತ ಕಾನೂನು ಕ್ರಮಕೈಗೊಳ್ಳದೇ ಇದ್ದಲ್ಲಿ ಸಮಾನಮಾನಸ್ಕರೊಡಗೂಡಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ದಾವೆ ಹೂಡಿ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿವೇಕ್ ಜಿ. ಸುವರ್ಣ, ಧನಂಜಯ್ ಕುಂದಾಪುರ, ರಾಜೇಂದ್ರ ಸಂಗಮ್ ಮೊದಲಾದವರಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.