ಕರಾವಳಿ

ದ.ಕ.ಜಿಲ್ಲೆಯಲ್ಲಿ ಹೊಸ ಮಾರ್ಗಸೂಚಿ ಪ್ರಕಟ : ವೀಕೆಂಡ್ ಕರ್ಫ್ಯೂ ಕಠಿಣ- ಮದುವೆ ಮನೆಯವರಿಗೆ ಸಂಕಟ

Pinterest LinkedIn Tumblr

 

ಮಂಗಳೂರು, ಎಪ್ರಿಲ್. 21: ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಹೊಸ ಕೋವಿಡ್ ಗೈಡ್ ಲೈನ್ಸ್ ಪ್ರಕಟವಾಗಿದ್ದು, ಮಂಗಳೂರಿನಲ್ಲಿ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಬುಧವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ದ.ಕ.ಜಿಲ್ಲೆಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

ವೀಕೆಂಡ್ ಕರ್ಫ್ಯೂ ಸಮಯದಲ್ಲಿ ನಿಗದಿಯಾಗಿದ್ದ ಮದುವೆ ನಡೆಸಲು ಅನುಮತಿ ಇದೆ. ಆದರೆ ಕೇವಲ 50 ಜನರು ಮಾತ್ರ ಮದುವೆಯಲ್ಲಿ ಭಾಗವಹಿಸಲು ಅವಕಾಶವಿದೆ

ಇದಕ್ಕಾಗಿ ಮದುವೆ ಮನೆಯವರು 50 ಜನರ ಪಟ್ಟಿ ತಯಾರಿಸಬೇಕು. ಆ ಪಟ್ಟಿಯನ್ನು ಸ್ಥಳೀಯಾಡಳಿತಕ್ಕೆ ತೋರಿಸಿ ಅಪ್ರೂವ್ ಮಾಡಿಸಿಕೊಳ್ಳಬೇಕು. ಆ ಬಳಿಕ ಆ 50 ಜನರ ಅನುಮತಿ ಪಡೆದ ಪತ್ರ ಮತ್ತು ಮದುವೆ ಆಮಂತ್ರಣ ಪತ್ರಿಕೆ ಹಾಗೂ ಮದುವೆಗೆ ಹೋಗುವವರ ಐಡಿ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು.

ಈ ಮೂರು ದಾಖಲೆಗಳನ್ನು ವಾಟ್ಸ್ ಅಪ್ ನಲ್ಲಿ ಪೊಲೀಸರಿಗೆ ತೋರಿಸಿ ಪ್ರಯಾಣಿಸಬಹುದು. ಆದರೆ ಮದುವೆ ಆಮಂತ್ರಣ ಪತ್ರಿಕೆಯ ನೈಜ ಪ್ರತಿ ಪ್ರಯಾಣದ ವೇಳೆ ಕೈಯ್ಯಲ್ಲಿರಲೇ ಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇನ್ನು ಮದುವೆಗೆ ಹೋಗುವ ಕಾರಿನಲ್ಲಿ ಏಳೆಂಟು ಜನರನ್ನು ತುಂಬಿದ್ರೆ ಪ್ರಯಾಣಿಸಲು ಅವಕಾಶ ಇಲ್ಲ. ಮದುವೆಗೆ ಗೆಸ್ಟ್ ಲಿಸ್ಟ್ ನಲ್ಲಿರುವವರ ಐಡಿ ತೋರಿಸಿದರಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದರು.

ಈಗಾಗಲೇ ಮಾಡಿದ ನಿಯಮದಂತೆ ದೇವಸ್ಥಾನಗಳಲ್ಲಿ ‌ಮದುವೆಗೆ ಅನುಮತಿ ನೀಡಲಾಗುವುದು. ದೇವಸ್ಥಾನದಲ್ಲಿ ಮದುವೆ ನಡೆಯುವುದಾದರೆ 50 ಜನರನ್ನು ಸೇರಿಸಿ ಮಾಡಬಹುದು. ಮದುವೆ ಫೋಟೋಗ್ರಾಫರ್ಸ್, ಅರ್ಚಕರು ಎಲ್ಲರೂ 50 ಜನರ ಲಿಸ್ಟ್ ನಲ್ಲೇ ಬರುತ್ತಾರೆ ಎಂದು ಅವರು ತಿಳಿಸಿದರು.

ದೇವಸ್ಥಾನದ ಧಾರ್ಮಿಕ ಕಾರ್ಯಗಳನ್ನು ಅರ್ಚಕರು ಸೇರಿಕೊಂಡು ಮಾಡಬೇಕು. ಆದರೆ ಯಾವುದೇ ಸಾರ್ವಜನಿಕರು ಈ ಆಚರಣೆಯಲ್ಲಿ ಭಾಗಿಯಾಗಲು ನಿಷೇಧವಿದೆ. ಈ ಆದೇಶ ಇವತ್ತಿನಿಂದಲೇ ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲಿ ಜಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅವಶ್ಯಕತೆ ಪಾಸ್ ಮತ್ತು ಐಡಿ ಕಾರ್ಡ್ ಬಳಸಿ ಕುಟುಂಬದ ಜೊತೆ ಸಂಚರಿಸಲು ಅವಕಾಶವಿಲ್ಲ. ಯಾರ ಹೆಸರಿನಲ್ಲಿ ಪಾಸ್ ಮತ್ತು ಐಡಿ ಕಾರ್ಡ್ ಇದೆ, ಅವರಿಗಷ್ಟೇ ಸಂಚಾರಕ್ಕೆ ಅವಕಾಶ. ವೀಕೆಂಡ್ ‌ಕರ್ಫ್ಯೂ ಸಮಯದಲ್ಲಿ ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಇದೆ.

ಅದರೆ ಈ ವಸ್ತು ಖರೀದಿ ಅವರ ಮನೆಯ ಅಕ್ಕಪಕ್ಕದಲ್ಲೇ ಖರೀದಿಸಬೇಕು. ವಾಹನ ಬಳಸಿ ಅಗತ್ಯ ವಸ್ತು ಖರೀದಿಗೆ ಹೋಗೋದಾದರೂ ಅದಕ್ಕೆ ಸೂಕ್ತ ಕಾರಣ ಬೇಕು. ಅದನ್ನು ದುರುಪಯೋಗ ಪಡಿಸಿಕೊಂಡರೆ ಅಂಥವರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದರು.

Comments are closed.