ಕರಾವಳಿ

ಶೀರೂರು ಮಠದ ಉತ್ತರಾಧಿಕಾರಿಯಾಗಿ ಅನಿರುದ್ಧ ನೇಮಕ: ಮೇ 14ರಂದು ಪಟ್ಟಾಭಿಷೇಕ

Pinterest LinkedIn Tumblr

ಉಡುಪಿ: ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ. ಅನಿರುದ್ಧ ಎಂಬ ವಟುವನ್ನು ಮಠದ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದು, ಮೇ 14ರಂದು ಪಟ್ಟಾಭಿಷೇಕ ನಡೆಯಲಿದೆ.

ಶೀರೂರು ಮಠಾಧೀಶರಾಗಿದ್ದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಉತ್ತರಾಧಿಕಾರಿಯಾಗಿ ಧರ್ಮಸ್ಥಳ ಸಮೀಪದ ನಿಡ್ಲೆ ಗ್ರಾಮ ಮೂಲದ ಡಾ|| ಎಂ.ಉದಯ್ ಕುಮಾರ್ ಸರಳತ್ತಾಯ ಮತ್ತು ಶ್ರೀವಿದ್ಯಾ ದಂಪತಿಯ ಪುತ್ರ ಅನಿರುದ್ಧ ಎಂಬ ವಟುವನ್ನು ಆಯ್ಕೆ ಮಾಡಲಾಗಿದೆ.

ವಟು ಅನಿರುದ್ಧ 10ನೇ ತರಗತಿಯಲ್ಲಿ ವ್ಯಾಸಂಗ ಪೂರೈಸಿದ್ದು, ಬಾಲ್ಯದಿಂದಲೇ ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿ ಹೊಂದಿದ್ದರು. ಶೀರೂರು ಮಠಕ್ಕೆ ಯತಿಯಾಗಿ ತೆರಳುವೆನೆಂದು ತನ್ನ ಅಭಿಪ್ರಾಯವನ್ನು ತಂದೆಯ ಬಳಿ ವ್ಯಕ್ತಪಡಿಸಿದ್ದರು. ಈ ವೇಳೆ ಜಾತಕ ವಿಮರ್ಶಿಸಿದಾಗ ಪೀಠಾಧಿಪತ್ಯದ ಯೋಗ ಇದೆ ಎಂದು ತಿಳಿಯಿತು ಎಂದು ಸೋದೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ತಿಳಿಸಿದರು.

ವಟುವಿನ ಹಿನ್ನೆಲೆ, ಗುಣ, ಜ್ಞಾನ, ಆಸಕ್ತಿ ಹಾಗೂ ಜಾತಕ ಎಲ್ಲವನ್ನೂ ಪ್ರತ್ಯಕ್ಷ- ಪರೋಕ್ಷವಾಗಿ ಪರಿಶೀಲನೆ ಮಾಡಿದಾಗ ಎಲ್ಲಾ ಪರೀಕ್ಷೆಯಲ್ಲಿ ವಟು ಅನಿರುದ್ಧ ಸಮಂಜಸವಾಗಿ ಕಂಡಿದ್ದು, ವಟುವಿಗೆ ಸನ್ಯಾಸ ದೀಕ್ಷೆ ನೀಡಲು ಸಂಕಲ್ಪಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಮೇ.14ರಂದು ಪಟ್ಟಾಭಿಷೇಕ…
ಶಿರಸಿ ಬಳಿಯಿರುವ ಸೋಂದೆ ಮೂಲ ಮಠದಲ್ಲಿ ಮೇ11ರಿಂದ 14ರವರೆಗೆ ಸನ್ಯಾಸ ಸ್ವೀಕಾರ, ಪಟ್ಟಾಭಿಷೇಕ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ. ಮೇ.13ರ ಬೆಳಗ್ಗೆ 7.30ರಿಂದ 8 ಗಂಟೆಯೊಳಗಿನ ಮುಹೂರ್ತದಲ್ಲಿ ಸನ್ಯಾಸ ಸ್ವೀಕಾರ ನಡೆಯಲಿದೆ. ಮೇ.14ರಂದು ಮಧ್ಯಾಹ್ನ 12.35ರಿಂದ 12.50ರ ಅಭಿಜಿನ್ ಮುಹೂರ್ತದಲ್ಲಿ ಶೀರೂರು ಮಠದ 31ನೇ ಮಠಾಧಿಪತಿಯಾಗಿ ಪಟ್ಟಾಭಿಷೇಕ ನಡೆಯಲಿದೆ.

 

Comments are closed.