ಕರಾವಳಿ

ಮಂಗಳೂರಿನ ಬಲ್ಮಠದ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ರ್‍ಯಾಗಿಂಗ್: ಕೇರಳ ಮೂಲದ ಮೂವರ ಬಂಧನ

Pinterest LinkedIn Tumblr

ಮಂಗಳೂರು, ಮಾರ್ಚ್.06: ಮಂಗಳೂರಿನ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿರುವ ಖಾಸಗಿ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳಿಗೆ ರ್‍ಯಾಗಿಂಗ್ ನಡೆಸಿದ ಆರೋಪದ ಮೇರೆಗೆ ಕೇರಳ ಮೂಲದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ನಗರದ ಬಲ್ಮಠದ ಯೆನೆಪೊಯ ಪದವಿ ಕಾಲೇಜಿನಲ್ಲಿ ರ್‍ಯಾಗಿಂಗ್ ನಡೆಸಿದ ಆರೋಪದ ಮೇರೆಗೆ ಕಣ್ಣೂರು ನಿವಾಸಿ ಮೊಹಮ್ಮದ್ ಆದಿಲ್ (20), ಕ್ಯಾಲಿಕಟ್ ನಿವಾಸಿ ಮೊಹಮ್ಮದ್ ರಿಯಾಜ್ (20) ಮತ್ತು ಕಣ್ಣೂರು ನಿವಾಸಿ ಮೊಹಮ್ಮದ್ ನಿಜಮ್ಮುದ್ದೀನ್ (20) ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ನಗರದ ಹಾಸ್ಟೆಲ್‌ನಲ್ಲಿರುವ ಇವರು ಯೆನೆಪೊಯ ಕಾಲೇಜಿನ ಇತರ 9 ವಿದ್ಯಾರ್ಥಿಗಳಿಗೆ ರ್‍ಯಾಗಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ 9 ವಿದ್ಯಾರ್ಥಿಗಳು ನಗರದ ಪಂಪ್‌ವೆಲ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಇವರೂ ಕೂಡ ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದಾರೆ.

ಆರೋಪಿತ ಮೂವರು ವಿದ್ಯಾರ್ಥಿಗಳು 9 ವಿದ್ಯಾರ್ಥಿಗಳಿಗೆ ನಿರಂತರವಾಗಿ ರ್‍ಯಾಗಿಂಗ್ ನಡೆಸುತ್ತಿದ್ದರು. ಆ ಪೈಕಿ ಒಬ್ಬ ವಿದ್ಯಾರ್ಥಿಗೆ ಅತೀ ಹೆಚ್ಚು ರ್‍ಯಾಗಿಂಗ್ ನಡೆಸುತ್ತಿದ್ದರು. ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿಯು ಮನೆಯವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ.

ಅಲ್ಲದೆ ಮನೆಯವರ ಸಲಹೆಯ ಮೇರೆಗೆ ಕಾಲೇಜಿನ ಮುಖ್ಯಸ್ಥರ ಗಮನಕ್ಕೂ ತಾರದೆ ನೇರವಾಗಿ ಕಂಕನಾಡಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆರೋಪಿತ ಮೂವರು ವಿದ್ಯಾರ್ಥಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ರ್‍ಯಾಗಿಂಗ್ ಪ್ರಕರಣವನ್ನು ಸಂಸ್ಥೆಯ ಮುಖ್ಯಸ್ಥರು ಗಂಭೀರವಾಗಿ ಪರಿಗಣಿಸಬೇಕು. ಯಾವ ಕಾರಣಕ್ಕೂ ಮಾತುಕತೆಯ ಮೂಲಕ ಬಗೆಹರಿಸುವ ಪ್ರಯತ್ನ ಮಾಡಬಾರದು. ರ್‍ಯಾಗಿಂಗ್‌ಗೆ ಕಡಿವಾಣ ಹಾಕುವುದಲ್ಲದೆ ರ್‍ಯಾಗಿಂಗ್ ನಡೆದ ಪ್ರಕರಣ ಬೆಳಕಿಗೆ ಬಂದೊಡನೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಅಲ್ಲದೆ ರ್‍ಯಾಗಿಂಗ್‌ಗೆ ಕಡಿವಾಣ ಹಾಕಲು ಶ್ರಮಿಸಬೇಕು. ಯಾವುದೇ ವಿದ್ಯಾರ್ಥಿಗೆ ರ್‍ಯಾಗಿಂಗ್ ಆಗಿದ್ದರೆ ಅಂತಹವರು ನೇರವಾಗಿ ಪೊಲೀಸ್ ಇಲಾಖೆಗೆ ದೂರು ನೀಡಬಹುದಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು.

Comments are closed.