ಆರೋಗ್ಯ

ಸರಕಾರಿ ಆಸ್ಪತ್ರೆಗಳಲ್ಲಿನ ನಾಗರಿಕ ಸಹಾಯವಾಣಿ ಕೇಂದ್ರ ಈ ಮಾಸಾಂತ್ಯಕ್ಕೆ ಬಂದ್..!?

Pinterest LinkedIn Tumblr

ಕುಂದಾಪುರ: ಕಳೆದ 4 ವರ್ಷಗಳಿಂದ ಜಿಲ್ಲೆ ಹಾಗೂ ಉಪ ವಿಭಾಗ ಮಟ್ಟದ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಆಸ್ಪತ್ರೆ, ವೈದ್ಯರು, ಪರೀಕ್ಷೆ, ತಪಾಸಣೆ ಹಾಗೂ ಚಿಕಿತ್ಸೆಯ ಕುರಿತಂತೆ ಮಾರ್ಗದರ್ಶನ ನೀಡಿ ಅವರಿಗೆ ನೋವುಗಳಿಗೆ ಸ್ಪಂದಿಸುತ್ತಿದ್ದ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದ ನಾಗರಿಕ ಸಹಾಯವಾಣಿ ಕೇಂದ್ರಗಳನ್ನು ಇಧೆ ಮಾ.31 ರಿಂದ ಮುಚ್ಚುವಂತೆ ರಾಜ್ಯದ ರಾಷ್ಟ್ರೀಯ ಅಭಿಯಾನದ ನಿರ್ದೇಶಕರು ಫೆ.5 ರಂದು ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದ್ದಾರೆ.

ಗ್ರಾಮೀಣ ಹಾಗೂ ನಗರ ಭಾಗದಿಂದ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ ವೈದ್ಯಕೀಯ ಸೇವೆ ದೊರಕಬೇಕು ಎನ್ನುವ ಉದ್ದೇಶದಿಂದ 2017 ರ ಎಪ್ರಿಲ್‌ ತಿಂಗಳಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ರಾಜ್ಯದ 50 ಕೇಂದ್ರಗಳಲ್ಲಿ ನಾಗರಿಕ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಪ್ರತಿ ಕೇಂದ್ರಗಳಲ್ಲಿ ಒಬ್ಬ ವ್ಯವಸ್ಥಾಪಕರು ಸೇರಿದಂತೆ 6 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಟೆಂಡರ್ ಪಡೆದುಕೊಂಡಿರುವ ಖಾಸಗಿ ಸಂಸ್ಥೆಗಳ ಹೊರ ಗುತ್ತಿಗೆಯಲ್ಲಿ ಸೇವೆ ನೀಡುತ್ತಿದ್ದ ಈ ಸಿಬ್ಬಂದಿಗಳ ವೇತನ ಹಾಗೂ ಇತರ ನಿರ್ವಹಣೆಗಾಗಿ ಕೇಂದ್ರ ಸರ್ಕಾರದಿಂದ ಶೇ.70 ಹಾಗೂ ರಾಜ್ಯ ಸರ್ಕಾರದಿಂದ ಶೇ.30 ಅನುದಾನಗಳು ದೊರಕುತ್ತಿತ್ತು.

ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯಕೀಯ ಸೇವೆಯ ಬಗ್ಗೆ ಮಾಹಿತಿ ನೀಡಿ ಅವರನ್ನು ಸಂಬಂಧಿಸಿದ ವೈದ್ಯರ ಬಳಿಕೆ ಕಳುಹಿಸುವುದು. ವೈದ್ಯಕೀಯ ಪರೀಕ್ಷೆ ಹಾಗೂ ತಪಾಸಣೆಗಾಗಿ ನೆರವಾಗುವುದು. ಅಗತ್ಯವಿದ್ದಲ್ಲಿ ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್ ಸೇವೆಗಾಗಿ ಸಹಕಾರ ನೀಡುವುದು. ರೋಗಿಗಳು ಹಾಗೂ ಅವರ ಮನೆಯವರೊಂದಿಗೆ ಸಮನ್ವಯ ಸಾಧಿಸುವುದು. ರೋಗಿಗಳು, ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಪರಿಸ್ವರ ಸಂವಹನ ಹಾಗೂ ಸಮನ್ವತೆಗೆ ಮಾರ್ಗದರ್ಶನ ನೀಡುವುದು ಸೇರಿದಂತೆ ಆಸ್ಪತ್ರೆಯ ದೈನಂದಿನ ವ್ಯವಸ್ಥೆಯಲ್ಲಿ ಸಕ್ರೀಯರಾಗಿದ್ದ ನಾಗರಿಕ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಕಳೆದ ಕೋವಿಡ್-19 ಸಂಕಷ್ಟದ ದಿನಗಳಲ್ಲಿ ಆಸ್ಪತ್ರೆಯ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದರು.

2021-22 ಸಾಲಿನಿಂದ ಕೇಂದ್ರ ಸರ್ಕಾರ ಎನ್‌.ಎಚ್‌.ಎಂ ( ರಾಷ್ಟ್ರೀಯ ಆರೋಗ್ಯ ಅಭಿಯಾನ ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಗರಿಕ ಸಹಾಯವಾಣಿ ಕೇಂದ್ರಗಳನ್ನು ಸ್ಥಗಿತಗೊಳಿಸಿ ಇದನ್ನು ಗ್ರಿವೆನ್ಸ್ ರಿಡ್ರೆಸಲ್ ವ್ಯವಸ್ಥೆ ಅಡಿಯಲ್ಲಿ 104 ಸಹಾಯವಾಣಿಯೊಂದಿಗೆ ವಿಲೀನಗೊಳಿಸಲು ಸೂಚಿಸಿದೆ ಹಾಗೂ ‘ಮೇರಾ ಹಾಸ್ಪಿಟಲ್‌’ ಕಾರ್ಯಕ್ರಮದ ಮೂಲಕ ಇ-ಆಸ್ಪತ್ರೆ ಅಡಿಯಲ್ಲಿ ಅನುಷ್ಠಾನಗೊಳಿಸಲು ಸೂಚನೆ ನೀಡಿದೆ.

ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಮುಂದುವರೆಸಿದ್ದಲ್ಲಿ ಪ್ರಸ್ತುತ ಇರುವ 12 ಸಿಬ್ಬಂದಿಗಳ ಬದಲಿಗೆ ಬೆರಳೆಣಿಕೆಯ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಬರಬೇಕಾಗಬಹುದು. ಇದರಿಂದ ಖಂಡಿತವಾಗಿಯೂ ಈ ಹಿಂದಿನಂತೆ ರೋಗಿಗಳಿಗೆ ಮಾರ್ಗದರ್ಶನ ವ್ಯವಸ್ಥೆಯನ್ನು ಪರಿಪೂರ್ಣಗೊಳಿಸಲು ಸಾಧ್ಯವಿಲ್ಲ.

ಸರ್ಕಾರಿ ಆಸ್ಪತ್ರೆಗೆ ಬರುವ ಬಡ ಹಾಗೂ ಗ್ರಾಮೀಣ ಭಾಗದ ರೋಗಿಗಳಿಗೆ ಅವಶ್ಯಕವಾಗಿರುವ ನಾಗರಿಕ ಸಹಾಯವಾಣಿ ಕೇಂದ್ರಗಳನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದಿಗೆ ಸಮನ್ವಯ ಸಾಧಿಸಬೇಕು ಒಂದು ವೇಳೆ ಸಾಧ್ಯವಾಗದೆ ಇದ್ದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಪ್ರತ್ಯೇಕ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಒತ್ತಾಯಿಸಿ ಸಚಿವರು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ.

ಕಳೆದ 4 ವರ್ಷಗಳಿಂದ ನಾಗರಿಕ ಸಹಾಯವಾಣಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇದೀಗ ಕೇಂದ್ರಗಳನ್ನು ರದ್ದು ಪಡಿಸಲಾಗುತ್ತಿದೆ ಎನ್ನುವ ಸುದ್ದಿ ತಿಳಿದುಬಂದಿದ್ದು ರಾಜ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಹೊರ ಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆಯನ್ನು ಮಾಡುವಂತೆ ಮನವಿ ಮಾಡುತ್ತಿದ್ದೇವೆ.
-ಲತಾ (ವ್ಯವಸ್ಥಾಪಕರು, ನಾಗರಿಕ ಸಹಾಯವಾಣಿ ಕೇಂದ್ರ, ಕುಂದಾಪುರ ಸಾರ್ವಜನಿಕ ಆಸ್ಪತ್ರೆ)

ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿನ ನಾಗರೀಕ ಸಹಾಯವಾಣಿ ಕೇಂದ್ರಗಳ ಸಿಬ್ಬಂದಿಗಳು ಸೌಜನ್ಯದ ಸೇವೆ ನೀಡುತ್ತಿದ್ದರು. ಹಳ್ಳಿಯಿಂದ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ವೈದ್ಯಕೀಯ ಸೇವೆಗೆ ಮಾರ್ಗದರ್ಶನ ಮಾಡುವ ಆ ಕೇಂದ್ರವನ್ನು ರದ್ದು ಪಡಿಸುವ ನಿರ್ಧಾರವನ್ನು ಸರ್ಕಾರ ಪುನರ್‌ ಪರಿಶೀಲನೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

Comments are closed.