ಕರಾವಳಿ

ನಗರದಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ಮಟ್ಕಾ ಅಡ್ಡೆಗಳಿಗೆ ಸಿಸಿಬಿ ಪೊಲೀಸರ ದಾಳಿ: ನಗದು ಸಹಿತಾ ಐವರ ಸೆರೆ

Pinterest LinkedIn Tumblr

ಮಂಗಳೂರು, ಮಾರ್ಚ್06 : ಮಂಗಳೂರಿನ ವಿವಿಧೆಡೆಗಳಲ್ಲಿ ಮಟ್ಕಾ ದಂಧೆ ನಡೆಯುತ್ತಿದ್ದ ಸ್ಥಳಗಳಿಗೆ ದಾಳಿ ನಡೆಸಿರುವ ಮಂಗಳೂರು ಸಿಸಿಬಿ ಪೊಲೀಸರು ದಂಧೆಯಲ್ಲಿ ನಿರತರಾಗಿದ್ದ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಅತ್ತಾವರದ ನಂದನ್ ಎಸ್.ನಾಯ್ಕ್(35), ಮಣ್ಣಗುಡ್ಡೆಯ ಪ್ರಶಾಂತ್(47), ಉರ್ವ ಹೊಯಿಗೆಬೈಲ್‌ನ ಅನಿಲ್ ಕುಮಾರ್(44), ಕೋಡಿಯಾಲ್‌ಬೈಲ್‌ನ ದಿನಕರ ಆಳ್ವ (44), ಕಾವೂರಿನ ಅನಿಲ್ ಕುಮಾರ್(42) ಬಂಧಿತ ಆರೋಪಿಗಳು.

ಆರೋಪಿಗಳು ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಟ್ಕಾ ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳಿಂದ ರೂ. 30,130 ನಗದು, 5 ಮೊಬೈಲ್ ಫೋನ್‌ಗಳು ಸೇರಿ ಒಟ್ಟು 66,130 ರೂಪಾಯಿ ಮೌಲ್ಯದ ಸೊತ್ತುಗಳನ್ನು, ಮಟ್ಕಾ ಬರೆಯುವ ಚೀಟಿಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ), ಮಂಗಳೂರು ಉತ್ತರ (ಬಂದರ್), ಬರ್ಕೆ, ಹಾಗು ಕಾವೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

Comments are closed.