ಕರಾವಳಿ

ಸುರತ್ಕಲ್ ಸಮೀಪದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ರ್‍ಯಾಗಿಂಗ್: ನಾಲ್ವರು ವಿದ್ಯಾರ್ಥಿಗಳ ಬಂಧನ

Pinterest LinkedIn Tumblr

ಮಂಗಳೂರು, ಮಾರ್ಚ್.06: ನಗರದ ಹೊರವಲಯದ ಸುರತ್ಕಲ್ ಸಮೀಪದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ರ್‍ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸುರತ್ಕಲ್ ಸಮೀಪದ ಮುಕ್ಕಾದಲ್ಲಿನ ಶ್ರೀನಿವಾಸ ಕಾಲೇಜಿನಲ್ಲಿ ಮಾರ್ಚ್ 3 ರಂದು ಕಾಲೇಜಿನ ಮುಖ್ಯಸ್ಥರು ನಾಲ್ಕು ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಯನ್ನು ರ್‍ಯಾಗಿಂಗ್‌ ಮಾಡಿದ್ದಾರೆ. ಆರೋಪಿಗಳು ಕಿರಿಯ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ ನಿಂದಿಸಿದ್ದಾರೆ. ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ದೂರು ದಾಖಲಿಸಿದ್ದರು.

ಫೆಬ್ರವರಿ 26 ರಂದು ಈ ವಿಷಯವನ್ನು ರ್‍ಯಾಗಿಂಗ್‌ ವಿರೋಧಿ ಸಮಿತಿಯಲ್ಲಿ ಚರ್ಚಿಸಲಾಗಿದ್ದು ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಮುಕ್ಕ ಶ್ರೀನಿವಾಸ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಅದೇ ಕಾಲೇಜಿನ ಮೂರನೆ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಬೈಕಂಪಾಡಿಯ ಮುಹಮ್ಮದ್ ಬಾಝಿಲ್, ಮುಕ್ಕದ ಕೆ.ಯು. ಶಮೀಲ್, ಮುಲ್ಕಿಯ ಸಂಭ್ರಮ್ ಆಳ್ವಾ, ಕುಲಶೇಖರದ ಅಶ್ವಿನ್ ಜಾನ್ಸನ್ ಎಂಬವರು ರ್‍ಯಾಗಿಂಗ್ ನಡೆಸಿದ್ದರು.ಈ ಹಿನ್ನೆಲೆಯಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧಿತರನ್ನು ಮುಕ್ಕಾ ನಿವಾಸಿ ಕೆ.ಯು.ಶಮೀಲ್ (22), ಬೈಕಂಪಾಡಿ ನಿವಾಸಿ ಮೊಹಮ್ಮದ್ ಬಾಝಿಲ್ (22), ಮುಲ್ಕಿ ನಿವಾಸಿ ಸಂಭ್ರಮ್ ಆಲ್ವಾ (20) ಮತ್ತು ಕಲ್ಪನೆ ನಿವಾಸಿ ಅಶ್ವಿತ್ ಎನ್ ಜಾನ್ಸನ್ ( 21) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ತಿಳಿಸಿದ್ದಾರೆ.

ಈ ಮಧ್ಯೆ ಆರೋಪಿಗಳಾದ ಶಮೀಲ್, ಬಾಝಿಲ್‌ ಮತ್ತು ಸಂಭ್ರಮ್‌ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿ ಉಪನ್ಯಾಸಕರಿಗೆ ಬೆದರಿಕೆ ಹಾಕಿದ್ದಾರೆ. ಆರೋಪಿತ ವಿದ್ಯಾರ್ಥಿಗಳು ಕಾಲೇಜಿನ ಉಪನ್ಯಾಸಕ ಡಾ. ಪ್ರವೀಣ್‌ರನ್ನು ಅವಹೇಳನಗೈದು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿ ಮತ್ತು ಉಪನ್ಯಾಸಕ ನೀಡಿದ ಎರಡು ಪ್ರತ್ಯೇಕ ದೂರನ್ನು ಸುರತ್ಕಲ್ ಪೊಲೀಸರು ದಾಖಲಿಸಿದ್ದಾರೆ. ಅಲ್ಲದೆ ಬಂಧಿತ ವಿದ್ಯಾರ್ಥಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ರ್‍ಯಾಗಿಂಗ್ ಪ್ರಕರಣವನ್ನು ಸಂಸ್ಥೆಯ ಮುಖ್ಯಸ್ಥರು ಗಂಭೀರವಾಗಿ ಪರಿಗಣಿಸಬೇಕು. ಯಾವ ಕಾರಣಕ್ಕೂ ಮಾತುಕತೆಯ ಮೂಲಕ ಬಗೆಹರಿಸುವ ಪ್ರಯತ್ನ ಮಾಡ ಬಾರದು.ರ್‍ಯಾಗಿಂಗ್‌ಗೆ ಕಡಿವಾಣ ಹಾಕುವುದಲ್ಲದೆ ರ್‍ಯಾಗಿಂಗ್ ನಡೆದ ಪ್ರಕರಣ ಬೆಳಕಿಗೆ ಬಂದೊಡನೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಅಲ್ಲದೆ ರ್‍ಯಾಗಿಂಗ್‌ಗೆ ಕಡಿವಾಣ ಹಾಕಲು ಶ್ರಮಿಸಬೇಕು. ಯಾವುದೇ ವಿದ್ಯಾರ್ಥಿಗೆ ರ್‍ಯಾಗಿಂಗ್ ಆಗಿದ್ದರೆ ಅಂತಹವರು ನೇರವಾಗಿ ಪೊಲೀಸ್ ಇಲಾಖೆಗೆ ದೂರು ನೀಡಬಹುದಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

Comments are closed.