ಕರ್ನಾಟಕ

ರಾಜಕೀಯ ಷಡ್ಯಂತ್ರದ ಗುಮಾನಿಯಿಂದ ಕೋರ್ಟ್ ಮೊರೆ ಹೋಗಿದ್ದೇವೆ: ಸಚಿವ ಡಾ. ಕೆ. ಸುಧಾಕರ್

Pinterest LinkedIn Tumblr

ಬೆಂಗಳೂರು: ರಾಜಕೀಯ ಷಡ್ಯಂತ್ರದ ಗುಮಾನಿ ಹಿನ್ನೆಲೆಯಿಂದಾಗಿ ಕೋರ್ಟ್ ಮೊರೆ ಹೋಗಿದ್ದಕ್ಕೆ ಟ್ವಿಟ್ಟರ್ ಮೂಲಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸುಧಾಕರ್​, ರಾಜ್ಯದಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಜನಮನ್ನಣೆ ಗಳಿಸುತ್ತಿರುವ ಸಚಿವರ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ತೇಜೋವಧೆ ಮಾಡುವ ರಾಜಕೀಯ ಷಡ್ಯಂತ್ರ ನಡೆಯುತ್ತಿರುವ ಗುಮಾನಿ ಇದೆ. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಪರಿಸ್ಥಿತಿ ಇರುವುದು ಸುಳ್ಳಲ್ಲ.

ಸತ್ಯ ಹೊಸಲು ದಾಟುವುದರೊಳಗೆ, ಸುಳ್ಳು ಊರೆಲ್ಲಾ ಸುತ್ತಾಡಿಕೊಂಡು ಬಂದಿರುತ್ತದೆ ಎಂಬಂತೆ, ಜೀವಮಾನವಿಡೀ ಗಳಿಸಿರುವ ಒಳ್ಳೆಯ ಹೆಸರು, ಯಾರದೋ ಷಡ್ಯಂತ್ರದಿಂದ ಕ್ಷಣಮಾತ್ರದಲ್ಲಿ ನಶಿಸಿ ಹೋಗುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕೆಯಿಂದ ಪ್ರಮಾಣೀಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದೇವಿ.

ಸಾರ್ವಜನಿಕ ಜೀವನದಲ್ಲಿರುವವರಿಗೆ ಈ ರೀತಿಯ ಸವಾಲುಗಳು ಸಾಮಾನ್ಯ. ಆದರೆ ನಮ್ಮ ವಿರುದ್ಧ ಷಡ್ಯಂತ್ರಗಳು ನಡೆದಾಗ ಇಂತಹ ದುಷ್ಟ ಶಕ್ತಿಗಳನ್ನು ಎದುರಿಸುವುದೂ ಅನಿವಾರ್ಯ. ನಮ್ಮ ಆತ್ಮಸಾಕ್ಷಿ ಸರಿ ಇರುವವರೆಗೂ, ಜನರ ಆಶೀರ್ವಾದ ಇರುವವರೆಗೂ ಯಾವ ಷಡ್ಯಂತ್ರವೂ ಯಶಸ್ವಿಯಾಗುವುದಿಲ್ಲ. ನಮ್ಮ ನ್ಯಾಯವ್ಯವಸ್ಥೆ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

Comments are closed.