ಕರಾವಳಿ

ಅಚ್ಚೇದಿನ್ ಬಂದಿರುವುದು ಅಧಾನಿ, ಅಂಬಾನಿಗಳಿಗೆ ಹೊರತು ದೇಶದ ಸಾಮಾನ್ಯ ಜನತೆಗಲ್ಲ: ಸಿಪಿಐ ಆರೋಪ

Pinterest LinkedIn Tumblr

ಪೆಟ್ರೋಲ್, ಡೀಸೆಲ್ ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ ವಿರುದ್ದ ಮಂಗಳೂರಿನಲ್ಲಿ ಪ್ರತಿಭಟನೆ

ಮಂಗಳೂರು, ಮಾರ್ಚ್.04: ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆಯೇರಿಕೆಯನ್ನು ಖಂಡಿಸಿ ಹಾಗೂ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಸಿಪಿಐಎಂ ನೇತ್ರತ್ವದಲ್ಲಿ ಮಂಗಳೂರು ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡುತ್ತಾ, ದೇಶವನ್ನು ಧೀರ್ಘಕಾಲ ಆಳಿದ ಕಾಂಗ್ರೆಸ್ ಸರಕಾರದ ತಪ್ಪು ಆರ್ಥಿಕ ನೀತಿಗಳ ವಿರುದ್ದ ಭುಗಿಲೆದ್ದ ಜನತೆಯ ಆಕ್ರೋಶವನ್ನು ಬಂಡವಾಳವನ್ನಾಗಿಸಿದ ಬಿಜೆಪಿ ಅಧಿಕಾರಕ್ಕೇರಿದ ಬಳಿಕ ಅದೇ ನೀತಿಗಳನ್ನು ಜಾರಿಗೊಳಿಸಿ ದೇಶದ ಆರ್ಥಿಕತೆಯನ್ನೇ ನಾಶಪಡಿಸುತ್ತಿದೆ.ಜನತೆಯ ಬದುಕನ್ನು ಸರ್ವ ನಾಶ ಮಾಡುತ್ತಿದೆ* ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಅಂದು ಬೆಲೆಯೇರಿಕೆಯ ವಿರುದ್ದ ಪ್ರತಿಭಟನೆಯ ನಾಟಕವಾಡಿದ ಸಂಸದ ನಳೀನ್ ಕುಮಾರ್ ಕಟೀಲು ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು ಇಂದು ಬಾಯಿ ಬಿಡುತ್ತಿಲ್ಲ.ಇಡೀ ದೇಶದ ಸಂಪತ್ತನ್ನು ಅಂಬಾನಿ, ಅಧಾನಿಗಳಿಗೆ ಧಾರೆ ಎರೆದು ಕೊಡುವ ಮೂಲಕ ಮೋದಿ ಸರಕಾರ ಅವರ ಸಾಮ್ರಾಜ್ಯವನ್ನು ವಿಸ್ತರಿಸಲು ಸಹಕರಿಸುತ್ತಿದೆ.ಅಚ್ಚೇದಿನ್ ಬಂದಿರುವುದು ಅಧಾನಿ, ಅಂಬಾನಿಗಳಿಗೆ ಹೊರತು ದೇಶದ ಸಾಮಾನ್ಯ ಜನತೆಗಲ್ಲ ಎಂದು ಸಾಬೀತಾಗಿದೆ ಎಂದು ಹೇಳಿದರು.

ಸಿಪಿಐಎಂ ಮಂಗಳೂರು ನಗರ ಉತ್ತರ ಕಾರ್ಯದರ್ಶಿ ದಯಾನಂದ ಶೆಟ್ಟಿಯವರು ಮಾತನಾಡುತ್ತಾ, ಧರ್ಮ ದೇವರುಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಾ, ಮಾಧ್ಯಮಗಳನ್ನು ತನ್ನ ಕಪಿಮುಷ್ಠಿಯಲ್ಲಿಟ್ಟು ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಾ ದೇಶದ ಜನರನ್ನು ದಾರಿ ತಪ್ಪಿಸುತ್ತಿರುವ ಫ್ಯಾಸಿಸ್ಟ್ ಸರಕಾರದ ಅಪಾಯಕಾರಿ ನೀತಿಗಳನ್ನು ಜನತೆ ಅರಿಯಬೇಕಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಮಂಗಳೂರು ನಗರ ಮುಖಂಡರಾದ ಸಂತೋಷ್ ಬಜಾಲ್, ಜಯಂತಿ ಶೆಟ್ಟಿ, ಬಾಬು ದೇವಾಡಿಗ,ದಿನೇಶ್ ಶೆಟ್ಟಿ, ಬಶೀರ್ ಪಂಜಿಮೊಗರು, ರಾಜೇಶ್ ಉರ್ವಾಸ್ಟೋರ್, ಸಿಐಟಿಯು ನಾಯಕರಾದ ಭಾರತಿ ಬೋಳಾರ,ಮಹಮ್ಮದ್ ಮುಸ್ತಾಫ,ಸಂತೋಷ್ ಆರ್ ಎಸ್,ಉಮೇಶ್ ಶಕ್ತಿನಗರ ಮುಂತಾದವರು ಭಾಗವಹಿಸಿದ್ದರು.

Comments are closed.