ಕರಾವಳಿ

ಉಡುಪಿ‌ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಉದ್ಘಾಟಿಸಿದ ರಾಷ್ಟ್ರೀಯ ಕ್ರೀಡಾಪಟು ಅಭಿನ್ ದೇವಾಡಿಗ

Pinterest LinkedIn Tumblr

ಉಡುಪಿ: ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ರಾಷ್ಟ್ರೀಯ ಕ್ರೀಡಾಪಟು ಮತ್ತು ಕಲಾಶ್ರೀ ಪ್ರಶಸ್ತಿ ಪುರಸ್ಕೃತ, ಅಭಿನ್ ದೇವಾಡಿಗ ಇಂದು ಚಾಲನೆ ನೀಡಿದರು.

ಪೊಲೀಸರು ಕೆಲಸದ ಒತ್ತಡದಲ್ಲಿದರೂ ಸಹ ಸಮಾಜದ ಒಳಿತಿಗಾಗಿ, ತಮ್ಮ ಕುಟುಂಬವನ್ನು ಮರೆತು  ಹಗಲಿರುಳು ದುಡಿಯುತ್ತಾರೆ. ಕೊರೊನಾ ಸಮಯದಲ್ಲಿ ಪೊಲೀಸರ ಕರ್ತವ್ಯ ನಿರ್ವಹಣೆಯನ್ನು ಮರೆಯುವಂತಿಲ್ಲ. ದಿನಪೂರ್ತಿ ಕಾರ್ಯನಿರತರಾಗುವ ಪೊಲೀಸ್ ಸಿಬ್ಬಂದಿಯವರು ಈ ಮೂರು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ ಎಂದು ಅಭಿನ್ ದೇವಾಡಿಗ ಹೇಳಿದರು.

ಪೋಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವಕಾಶ ನೀಡದೇ ಹೋದಲ್ಲಿ ಶಾಲಾ-ಕಾಲೇಜು ಹಂತದಲ್ಲಿ ದುಶ್ಚಟಕ್ಕೆ ಬಲಿಯಾಗುತ್ತಾರೆ. ಆದ್ದರಿಂದ ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ಮಕ್ಕಳಿಗೆ ಪ್ರೋತ್ಸಾಹಿಸಿದಲ್ಲಿ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಅಭಿನ್ ದೇವಾಡಿಗ ಹೇಳಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಎನ್, ಮಾತನಾಡಿ, 3 ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದ ಮೂಲಕ, ಪೊಲೀಸ್ ಸಿಬ್ಬಂದಿಯಲ್ಲಿನ ಕ್ರೀಡಾ ಮನೋಭಾವ ಹೆಚ್ಚಲು ಸಾಧ್ಯವಾಗಲಿದೆ ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಹಾಗೂ ಜಿಲ್ಲೆಯ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಂದ ಪಥ ಸಂಚಲನ, ಕ್ರೀಡಾ ಪ್ರಮಾಣ ವಚನ ಸ್ವೀಕಾರ ಹಾಗೂ ಕ್ರೀಡಾ ಜ್ಯೋತಿ ಪ್ರದರ್ಶನ ಕಾರ್ಯಕ್ರಮ ನಡೆಯಿತು.

 

Comments are closed.