ಕರಾವಳಿ

ಗೋಕರ್ಣಕ್ಕೆ ತೆರಳುವಾಗ ಕೇಂದ್ರ ಸಚಿವ ಶ್ರೀಪಾದ ನಾಯಕ್ ಕಾರು ಅಪಘಾತ: ಪತ್ನಿ ಹಾಗೂ ಪಿಎ ದುರ್ಮರಣ

Pinterest LinkedIn Tumblr

ಉತ್ತರಕನ್ನಡ: ಕೇಂದ್ರ ಸಚಿವ ಶ್ರೀಪಾದ ನಾಯಕ್ ಕಾರು ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಸಚಿವರ ಪತ್ನಿ ವಿಜಯಾ ಶ್ರೀಪಾದ್ ನಾಯಕ್ ಸಾವಿಗೀಡಾಗಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪತ್ನಿ ವಿಜಯಾ ಹಾಗೂ ಪಿಎ ದೀಪಕ್ ಮೃತಪಟ್ಟಿದ್ದಾರೆ. ಈ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಉತ್ತರ ಕನ್ನಡ ಅಂಕೋಲ ತಾಲೂಕು ಹೊಸಕಂಬಿಯಲ್ಲಿ ನಡೆದ ಅಪಘಾತದಲ್ಲಿ ಸಚಿವರ ಕಾರು ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಕೇಂದ್ರ ಆಯುಶ್ ಸಚಿವರಾದ ಶ್ರೀಪಾದ್ ನಾಯಕ್ ಸೇರಿ ಹಲವರಿಗೆ ಗಾಯಗಳಾಗಿದ್ದು ಅವರನ್ನು ಅಂಕೋಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಲ್ಲಾಪುರದ ಚಂದಗುಳಿ ಗಂಟೆ ಗಣಪತಿ ದೇವಸ್ಥಾನಕ್ಕೆ ಇಂದು (ಸೋಮವಾರ) ಕುಟುಂಬ ಸಮೇತ ಆಗಮಿಸಿದ್ದ ಶ್ರೀಪಾದ ನಾಯಕ ಅವರು ಗಣಹೋಮ ನೆರವೇರಿಸಿದ್ದರು.

ನಂತರ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಸಾಯಂಕಾಲ ಯಲ್ಲಾಪುರದಿಂದ ಹೊಸಕಂಬಿ ಮಾರ್ಗವಾಗಿ ಗೋಕರ್ಣಕ್ಕೆ ಪ್ರಯಾಣ ಬೆಳೆಸಿದ್ದರು. ಆ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅಂಕೋಲ ಪೋಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.