ಕುಂದಾಪುರ: ತಾಲೂಕಿನ ಹಾಸ್ಟೆಲ್’ಗಳಲ್ಲಿ ಕೆಲ ಸಮಸ್ಯೆಗಳಿರುವುದು ಗಮನಕ್ಕೆ ಬಂದಿದೆ. ಈ ಬಾರಿ ಕೇವಲ ಎಚ್ಚರಿಕೆ ನೀಡಿದ್ದೇವೆ. ಮುಂದಿನ ಬಾರಿ ಶಿಸ್ತು ಕ್ರಮಕ್ಕೆ ಮುಂದಾಗುತ್ತದೆ. ವಿದ್ಯಾರ್ಥಿಗಳಿಗೆ ಸರಿಯಾದ ಊಟ ತಿಂಡಿ ನೀಡಿ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹಿಂದುಳಿದ ವರ್ಗ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೆದೂರಿನಲ್ಲಿ ಭೋವಿ ಸಮಾಜದವರ ಅಹವಾಲು ಸ್ವೀಕರಿಸಿದ ಬಳಿಕ ಕುಂದಾಪುರ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖಾಧಿಕಾರಿಗಳ ಸಭೆ ನಡೆಸಿದ ನಂತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್ ಭೇಟಿ ಬಳಿಕ ಅವರು ಮಾತನಾಡಿದರು.
ಕುಂದಾಪುರ ಶಾಸ್ತ್ರೀ ವೃತ್ತ ಸಮೀಪದಲ್ಲಿರುವ ಹಾಸ್ಟೆಲ್’ಗಳಿಗೆ ಭೇಟಿ ನೀಡಿದ ಸಂದರ್ಭ ಬೆಡ್ ಶೀಟ್ ಸಮಸ್ಯೆ, ಸೊಳ್ಳೆ ಕಾಟ, ಸಂಜೆ ಹೊತ್ತು ಚಹಾದ ಜೊತೆ ಬಿಸ್ಕಿಟ್ ಕೊಡುತ್ತಿರುವ ಬಗ್ಗೆ ದೂರು ಕೇಳಿಬಂತು. ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಲುಗದ್ದೆ ವಿದ್ಯಾರ್ಥಿಗಳಲ್ಲಿ ಸಮಸ್ಯೆ ಬಗ್ಗೆ ಕೇಳಿದಾಗ ಈ ದೂರು ಕೇಳಿಬಂದಿದ್ದು ಆಯೋಗದ ಅಧ್ಯಕ್ಷರು ಈ ಬಗ್ಗೆ ಸಂಬಂದಪಟ್ಟವರಲ್ಲಿ ಶೀಘ್ರ ಈ ವ್ಯವಸ್ಥೆ ಸರಿಪಡಿಸಿ ಅಲ್ಲದೆ ಲೋಪವೆಸಗಿದ ಈ ಹಿಂದಿನ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡುವಂತೆ ಸೂಚಿಸಿದರು.
ಭೋವಿ ಸಮಾಜಕ್ಕೆ ಜಾತಿ ಪ್ರಮಾಣದ ಬಗ್ಗೆ….
ಉತ್ತರ ಕನ್ನಡದಲ್ಲಿ ಜಾತಿ ಪ್ರಮಾಣ ಪತ್ರ ಕೊಟ್ಟಿದ್ದಾರೆ.. ಕುಂದಾಪುರದಲ್ಲಿ ಏಕೆ ಕೊಡಲಾಗುತ್ತಿಲ್ಲ.. ಕೊಡಲಾಗದಿದ್ದರೆ ಬರವಣಿಗೆ ಮೂಲಕ ಆಗೋದಿಲ್ಲ ಎಂದು ಕೊಡಿ. ಬಾಯಿಮಾತಲ್ಲಿ ಹೇಳಿದರೆ ಅಗೋದಿಲ್ಲ. ಬರವಣಿಗೆ ಮೂಲಕ ಕೊಟ್ಟರೆ ಅದನ್ನ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತದೆ ಎಂದು ಹಿಂದುಳಿದ ವರ್ಗ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಸಲಹೆ ನೀಡಿದರು.

(ಕೆದೂರು ಭೋವಿ ಸಮಾಜದ ಅಹವಾಲು)
ಒಂದೇ ಕುಟುಂಬದ ಓರ್ವ ಸದಸ್ಯರಿಗೆ ಎಸ್ಸಿ ಸರ್ಟಿಫಿಕೇಟ್ ನೀಡಿದ್ದು, ಮತ್ತೊಬ್ಬ ಸದಸ್ಯರಿಗೆ ಪ ವರ್ಗ ಸರ್ಟಿಫಿಕೇಟ್ ನೀಡಲಾಗಿದೆ. ಕಾನೂನಿನ ಪ್ರಕಾರ ತಂದೆ ಜಾತಿಗೆ ಮಕ್ಕಳು ಬರುತ್ತಿದ್ದು, ಒಬ್ಬರಿಗೊಂದು ಮತ್ತೊಂಬರಿಗೊಂದು ವೈಪರೀತ್ಯ ಏಕೆ. ನಿಮಗೆ ದಾಖಲೆ ಕೊಡಲಾಗದಿದ್ದರೆ ರೈಟಿಂಗ್ ಮೂಲಕ ಕೊಡಿ ಬಾಯಿ ಮಾತಲ್ಲ ಹೇಳಿದರೆ ಸಾಕಾಗೋದಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾನೂನು ಜನಪರ ಇರಬೇಕು. ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದರು.
ಕೆದೂರು ಹಾಸ್ಟೆಲ್ ಕಟ್ಟಡ ನಿರ್ವಹಣೆಯ ಇಲ್ಲದ ಬಗ್ಗೆ ಗರಂ…
ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ಕೆದೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಸ್ಥಳೀಯ ಪಂಚಾಯಿತಿಗೆ ವರ್ಗಾಯಿಸಿದ್ದು ಈ ಬಗ್ಗೆ ಸ್ಥಳೀಯಾಡಳಿತ ಸರಿಯಾದ ನಿರ್ವಹಣೆ ಕೈಗೊಳ್ಳದೆ ಕಟ್ಟಡ ಹಾಳಾಗುತ್ತಿದೆ. ಪಂಚಾಯಿತಿಗೆ ವರ್ಗಾಯಿಸಿದ ಅಧಿಕಾರಿ ಎಂದು ವರ್ಗಾಯಿಸಲಾಗಿದೆ, ಏಕೆ ನಿರ್ವಹಣೆ ಮಾಡಿಲ್ಲ ಎನ್ನುವ ಬಗ್ಗೆ ಸಮಗ್ರ ವರದಿ ನೀಡಿ, ತಪ್ಪಿತಸ್ತರ ವಿರುದ್ಧ ಕಾಲೂನು ಕ್ರಮ ತೆಗೆದುಕೊಳ್ಳಲು ಸಹಕಾರಿ ಆಗಿದೆ ಎಂದು ಹೇಳಿದರು.

ಹಾಸ್ಟೆಲ್ ಸ್ಥಳೀಯಾಡಳಿತಕ್ಕೆ ನಿರ್ವಹಣೆ ಮಾಡಲು ಅಸಾಧ್ಯ ಎಂದಾದಲ್ಲಿ ಅದನ್ನು ಹಾಗೆಯೇ ಬಿಡದೇ ಶಾಲೆಗಳಿಗೆ ಅಥವಾ ಬೇರೆ ಯಾವುದೇ ಸಂಸ್ಥೆಗೆ ಹಸ್ತಾಂತರಿಸಬಹುದಿತ್ತು. ಇದರಿಂದಾಗಿ ಸಾರ್ವಜನಿಕ ಆಸ್ತಿ ಹಾನಿಯಾದಂತಾಗಿದೆ. ಈ ಬಗ್ಗೆ ಸರಿಯಾದ ನಿರ್ವಹಣೆ ನಡೆಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಸ್ಟೆಲ್‌ನಲ್ಲಿ ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ನಿರ್ವಹಣೆ ಮಾಡದಿರುವುದು ಸರಿಯಲ್ಲ ಎಂದರು.
ನೋವು ತೋಡಿಕೊಂಡ ಅಡುಗೆ ಸಹಾಯಕರು…
ಕಳೆದ 15 ವರ್ಷಗಳಿಂದ ಕೋಟೇಶ್ವರ ಸರ್ಕಾರಿ ಹಾಸ್ಟೆಲ್‌ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅಡುಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳು ಸಂಬಳ ನೀಡದಿರುವ ಬಗ್ಗೆ ಹಾಗೂ ಹೊರಗುತ್ತಿಗೆ ಹುದ್ದೆಯನ್ನು ತೆಗೆದು ಖಾಯಂಗೊಳಿಸುವಂತೆ ಮನವಿ ನೀಡಿದರು. ನಾವು ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮ್ಮನ್ನು ಖಾಲಿ ಇದ್ದ ಹಾಸ್ಟೆಲ್‌ಗಳಲ್ಲಿ ಹುದ್ದೆಗಳಿಗೆ ನಿಯೋಜಿಸುವಂತೆ ನೋವನ್ನು ತೋಡಿಕೊಂಡು ಮನವಿ ಮಾಡಿದ್ದು ಹುದ್ದೆ ನೀಡುವ ಕುರಿತು ಮಹಿಳಾ ಸಿಬ್ಬಂದಿಗಳಿಗೆ ಅಧ್ಯಕ್ಷರು ಭರವಸೆ ನೀಡಿದರು.
ರಾಜ್ಯ ಹಿಂದುಳಿದ ಆಯೋಗದ ಸದಸ್ಯರಾದ ಕೆ.ಟಿ.ಸುವರ್ಣ, ಬಿ.ಎಸ್.ರಾಜಶೇಖರ್, ಎಚ್.ಎಸ್ ಕಲ್ಯಾಣ್ ಕುಮಾರ್, ಅರುಣ್ ಕುಮಾರ್, ಎಸಿ ರಾಜು ಕೆ., ತಹಶೀಲ್ದಾರ್ ಆನಂದಪ್ಪ ಎಚ್.ನಾಯ್ಕ್, ಬಿಸಿಎಂ ಇಲಾಖಾಧಿಕಾರಿ ದಯಾನಂದ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪ್ರಮುಖರಾದ ಕೇಶವ ಶೆಟ್ಟಿಗಾರ್, ಗಣೇಶ್ ಕೆ, ಬಿಜೆಪಿ ಮುಖಂಡರಾದ ಶಂಕರ ಅಂಕದ ಕಟ್ಟೆ, ಕಿಶೋರ್ ಕುಮಾರ್, ಮೀನುಗಾರಿಕೆ ಇಲಾಖೆಯ ಹೇಮಲತಾ, ಪುರಸಭಾ ಸದಸ್ಯ ಗಿರೀಶ್ ಜಿ.ಕೆ ಇದ್ದರು. ಹಾಸ್ಟೆಲ್ ವಾರ್ಡನ್ ನರಸಿಂಹ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
ಪುರಸಭಾ ವ್ಯಾಪ್ತಿ ಎರಡು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿ ಬಹಳ ವರ್ಷಗಳಿಂದ ಡ್ರೈನೇಜ್ ಸಮಸ್ಯೆ ಬಹುವಾಗಿ ಕಾಡುತ್ತಿದ್ದು ತೆರೆದ ಗುಂಡಿಗಳಿಂದಾಗಿ ಸುತ್ತಮುತ್ತಲಿನ ಜನತೆ ವಾಸನೆಯಲ್ಲಿ ತಿರುಗಾಡಬೇಕಾಗಿದೆ ಎನ್ನುವ ದೂರಿನ ಮೇರೆಗೆ ಅದರ ಬಗ್ಗೆ ಸ್ಥಳ ವೀಕ್ಷಣೆ ಮಾಡಿ ಚರ್ಚೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಜೊತೆ ಈ ಬಗ್ಗೆ ಚರ್ಚೆ ನಡೆಸಿ ತದನಂತರ ಹಾಸ್ಟೆಲ್‌ನ ಸಮಸ್ಯೆಯ ಕುರಿತು ಸ್ಥಳ ವೀಕ್ಷಣೆ ಕೈಗೊಂಡು, ನೈಜ ಸಮಸ್ಯೆ ಅರಿತು ಪರಿಹಾರ ಮಾಡಲಾಗುತ್ತದೆ.
– ಕೆ.ಜಯಪ್ರಕಾಶ್ ಹೆಗ್ಡೆ, ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗ ಆಯೋಗ.
ಅಹವಾಲು ಸ್ವೀಕಾರ….
ಅಹವಾಲು ಸ್ವೀಕಾರ ಸಭೆಯಲ್ಲಿ ಡೀಮ್ಡ್ ಫಾರೆಸ್ಟ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೀನುಗಾರ ಮಹಿಳೆಯರ ಮಾರುಕಟ್ಟೆ ಸಮಸ್ಯೆ, ಟಿಟಿ ರಸ್ತೆಯಿಂದ ವಿನಾಯಕದವರೆಗಿನ ರಸ್ತೆಗಳ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಅಹವಾಲು ಸ್ವೀಕರಿಸಿ ಪರಿಹರಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
(ವರದಿ- ಯೋಗೀಶ್ ಕುಂಭಾಸಿ)
Comments are closed.