ಕರ್ನಾಟಕ

ರಾಜಕೀಯಕ್ಕೆ ಎಂಟ್ರಿ ನೀಡಲು ಕ್ಷಣಗಣನೆಯಲ್ಲಿರುವ ಸೂಪರ್​ ಸ್ಟಾರ್​ ರಜನಿಕಾಂತ್​ ಅವರಿಗೆ ಸಮನ್ಸ್ ಜಾರಿ!

Pinterest LinkedIn Tumblr

ಚೆನ್ನೈ: ರಾಜಕೀಯಕ್ಕೆ ಎಂಟ್ರಿ ನೀಡಲು ಕ್ಷಣಗಣನೆಯಲ್ಲಿರುವ ಖ್ಯಾತ ನಟ ಸೂಪರ್​ ಸ್ಟಾರ್​ ರಜನಿಕಾಂತ್​ ಅವರಿಗೆ ಏಕ ವ್ಯಕ್ತಿ ಆಯೋಗವು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಿದೆ.

ತಮಿಳುನಾಡಿನ ತೂತುಕುಡಿಯಲ್ಲಿರುವ ಸ್ಟೆರ್‌ಲೈಟ್‌ ತಾಮ್ರ ಕರಗಿಸುವ ಘಟಕದಲ್ಲಿ 2018ರಲ್ಲಿ ನಡೆದಿದ್ದ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ 13 ಜನ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕರಿಸುವಂತೆ ಏಕ ಸದಸ್ಯ ವಿಚಾರಣಾ ನ್ಯಾಯಾಲಯ ತಮಿಳು ನಟ ರಜನಿಕಾಂತ್​ ಅವರಿಗೆ ಸಮಸ್ಸ್ ಜಾರಿ ಮಾಡಿದೆ.

2018ರಲ್ಲಿ ತೂತುಕುಡಿ ಸ್ಟೆರ್‌ಲೈಟ್ ಕಾರ್ಖಾನೆಯಲ್ಲಿ ಹಿಂಸಾಚಾರ ನಡೆದಿತ್ತು. ವೇದಾಂತದ ಸ್ಟರ್ಲೈಟ್ ತಾಮ್ರ ಕರಗಿಸುವ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು. ಘಟನೆಯಲ್ಲಿ ಹದಿಮೂರು ಜನರು ಸಾವನ್ನಪ್ಪಿದ್ದರು. ಆ ಸಮಯದಲ್ಲಿ ಸ್ಥಳಕ್ಕೆ ಬಂದಿದ್ದ ರಜನಿಕಾಂತ್​, ಈ ಹೋರಾಟದಲ್ಲಿ ಸಮಾಜ ವಿರೋಧಿ ಶಕ್ತಿಗಳು ಪ್ರತಿಭಟನೆಯೊಳಗೆ ಸೇರಿಕೊಂಡಿದ್ದಾರೆ ಎಂದು ಹೇಳಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ವೇದಾಂತ ಗ್ರೂಪ್‌ನ ಸ್ಟೆರ್‌ಲೈಟ್ ತಮಿಳುನಾಡಿನ ದೈತ್ಯ ಗಣಿಗಾರಿಕಾ ಕಂಪೆನಿ. ಆದರೆ, ಈ ಕಂಪೆನಿಯಿಂದ ಸುತ್ತಮುತ್ತಲಿನ ಪರಿಸರ ಹಾನಿಯಾಗುತ್ತಿದೆ ಎಂದು ಒತ್ತಾಯಿಸಿ ಸ್ಥಳೀಯರು ಪ್ರತಿಭಟಿಸಿದ್ದರು. ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಸಹ ಕೈಜೋಡಿಸಿದ್ದವು. ಹೀಗಾಗಿ ಈ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕು ಎಂದು ಆಗ್ರಹಿಸಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆ ಪೊಲೀಸ್​ ದಾಳಿಯಿಂದಾಗಿ ಹಿಂಸಾಚಾರಕ್ಕೆ ತಿರುಗಿತ್ತು. ಕೊನೆಗೆ ಜನಸಮೂಹವನ್ನು ಹತ್ತಿಕ್ಕಲು ಪೊಲೀಸರು ಗುಂಡು ಹಾರಿಸಿದ ಪರಿಣಾಮ 13 ಜನರು ಮೃತಪಟ್ಟಿದ್ದರು.ಈ ಘಟನೆ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು.

ಘಟನೆಯ ನಂತರ ಗಾಯಾಳುಗಳನ್ನು ಭೇಟಿಯಾಗಿದ್ದ ರಜನಿಕಾಂತ್‌, ಪ್ರತಿಭಟನೆಯಲ್ಲಿ ಸಾಮಾಜ ವಿರೋಧಿಗಳು ನುಸುಳಿದ್ದರಿಂದ ಹಿಂಸಾಚಾರ ಸಂಭವಿಸಿದೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಏಕ ಮಹಿಳಾ ನ್ಯಾಯಾಂಗ ಪೀಠವು ಅವರಿಗೆ ಸಮನ್ಸ್ ನೀಡಿದೆ ಎನ್ನಲಾಗುತ್ತಿದೆ.

ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಸರ್ಕಾರದ ಆಡಳಿತದ ವಿರುದ್ದ ಕಿಡಿಕಾರಿದ್ದ ರಜನಿಕಾಂತ್, ಹಿಂಸಾಚಾರಕ್ಕೆ ಸಮಾಜ ವಿರೋಧಿಗಳು ಕಾರಣ, ಅವರ ವಿರುದ್ದ ಕಠಿಣ ಕ್ರಮತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು. ಆದರೆ, ರಜನಿಕಾಂತ್​ ತಮ್ಮ ಹೇಳಿಕೆಯಲ್ಲಿ ಎಲ್ಲೂ ಪೊಲೀಸರ ವರ್ತನೆ ಮತ್ತು ಜನರ ಮೇಲೆ ಗುಂಡು ಹಾರಿಸುವ ನಿರ್ಧಾರವನ್ನು ಖಂಡಿಸಿರಲಿಲ್ಲ.

ತೂತುಕುಡಿ ಪೊಲೀಸ್ ಫೈರಿಂಗ್ ಘಟನೆ ಬಗ್ಗೆ ಏಕ ವ್ಯಕ್ತಿ ಆಯೋಗವು ವಿಚಾರಣೆ ನಡೆಸುತ್ತಿದೆ. ಅದೇ ಹಿನ್ನೆಲೆಯಲ್ಲಿ ಈ ವಿವಾದಾತ್ಮಕ ಹೇಳಿಕೆಯ ಬಗ್ಗೆ ವಿಚಾರಣೆಗೆ ಸಹಕರಿಸಲು ಫೆಬ್ರವರಿಯಲ್ಲೇ ರಜನಿಕಾಂತ್​ ಅವರಿಗೆ ಸಮನ್ಸ್​ ನೀಡಲಾಗಿತ್ತು.

ತುತುಕೂಡಿಗೆ ಬಂದರೆ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗಬಹುದು ಎಂದು ಹೇಳುವ ಮೂಲಕ ರಜನಿಕಾಂತ್ ವಿನಾಯಿತಿ ಬಯಸಿದ್ದರು. ಇದೀಗ ಜನವರಿ 19ರಂದು ವಿಚಾರಣೆಗೆ ಹಾಜರಾಗುವಂತೆ ಆಯೋಗವು ಎರಡನೇ ಬಾರಿಗೆ ಸಮನ್ಸ್​ ನೀಡಿದೆ. ನಿವೃತ್ತ ನ್ಯಾಯಾಧೀಶ ಅರುಣಾ ಜಗದೀಶನ್ ನೇತೃತ್ವದ ಆಯೋಗವು ರಿಜಿಸ್ಟರ್ ಪೋಸ್ಟ್ ಮೂಲಕ ಸಮನ್ಸ್ ಕಳುಹಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Comments are closed.