ಕರಾವಳಿ

ಬೈಂದೂರು ತಾಲೂಕಿನ 15 ಗ್ರಾಮಪಂಚಾಯತಿಗೆ ಡಿ.22 ಚುನಾವಣೆ: ಇಂದು ನಡೆದ ಮಸ್ಟರಿಂಗ್

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕಿನ 15 ಗ್ರಾಮಪಂಚಾಯತಿಗೆ ಡಿ.22 ಮತದಾನ ನಡೆಯಲಿದ್ದು ಪೂರ್ವಭಾವಿಯಾಗಿ ಬೈಂದೂರು ಸರಕಾರಿ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ಸೋಮವಾರದಂದು ನಡೆಯಿತು.

ಬೆಳಿಗ್ಗೆಯಿಂದ ಮಸ್ಟರಿಂಗ್ ಪ್ರಕ್ರಿಯೆಗಳು ನಡೆದಿದ್ದು ಮಧ್ಯಾಹ್ನದ ಬಳಿಕ ಮತ ಪೆಟ್ಟಿಗೆಯೊಂದಿಗೆ ಮತ ಕೇಂದ್ರಗಳಿಗೆ ಅಧಿಕಾರಿ ಸಿಬ್ಬಂದಿಗಳು ತೆರಳಿದರು. ಸಹಾಯಕ ಚುನಾವಣಾಧಿಕಾರಿ, ಅಧ್ಯಕ್ಷಾಧಿಕಾರಿ, ಪ್ರಥಮ ಚುನಾವಣಾಧಿಕಾರಿ, 2ನೇ ಹಾಗೂ 3ನೇ ಚುನಾವಣಾಧಿಕಾರಿಗಳ ಜೊತೆಗೆ ಡಿ ಗ್ರೂಫ್ ಹಾಗೂ ಪೊಲೀಸರು ಆಯಾಯ ಮತಗಟ್ಟೆಗಳಿಗೆ ಬಿಸಿಲ ಝಳದ ನಡುವೆ ಉತ್ಸಾಹದಿಂದ ತೆರಳಿದರು. ಬೈಂದೂರು ಮಸ್ಟರಿಂಗ್ ಕೇಂದ್ರಕ್ಕೆ ಉಡುಪಿ ಎಡಿಸಿ ಸದಾಶಿವ ಪ್ರಭು ಭೇಟಿ ನೀಡಿದರು.

ಬೈಂದೂರಿನ 15 ಗ್ರಾಮ ಪಂಚಾಯತಿಗೆ ಒಟ್ಟು 128 ಮತಗಟ್ಟೆಯಲ್ಲಿ ಮಂಗಳವಾರ ನಡೆಯಲಿರುವ ಮತದಾನ ಪ್ರಕ್ರಿಯೆಗೆ 616 ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 128 ಡಿ ಗ್ರೂಫ್ ನೌಕರರು ಇರಲಿದ್ದು ಈ ಬಾರಿ ಕೊರೋನಾ ಹಿನ್ನೆಲೆ ಮತದಾನ ದಿನದಂದು ಎಲ್ಲಾ 128 ಮತಗಟ್ಟೆಯಲ್ಲಿ ಆಶಾ ಅಥವಾ ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಿಕೊಂಡು ಸ್ಯಾನಿಟೈಸಿಂಗ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಲಾಗುತ್ತದೆ‌.

ಬೈಂದೂರು ತಾಲೂಕಿನಲ್ಲಿ ಒಟ್ಟು 128 ಮತಗಟ್ಟೆಗಳಿದ್ದು 88,659 ಒಟ್ಟು ಮತದಾರರಿದ್ದಾರೆ. ಅವರಲ್ಲಿ 45,284 ಮಹಿಳಾ ಮತದಾರರು, 43,374 ಪುರುಷ ಮತದಾರರು ಹಾಗೂ ಒಬ್ಬರು ಇತರ ಮತದಾರರಿದ್ದಾರೆ‌. 14 ಸೂಕ್ಷ್ಮ, 11 ಅತಿ ಸೂಕ್ಷ್ಮ ಮತಗಟ್ಟೆಗಳು ಸೇರಿ ಉಳಿದವು ಸಾಮಾನ್ಯ ಮತಗಟ್ಟೆಗಳಾಗಿದೆ.

ಪೊಲೀಸರ ನಿಯೋಜನೆ….
ಕುಂದಾಪುರ ಪ್ರಭಾರ ಡಿವೈಎಸ್ಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ, ಕುಂದಾಪುರ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಬೈಂದೂರು ಠಾಣೆ ಪಿಎಸ್ಐ ಸಂಗೀತಾ, ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್, ಕೊಲ್ಲೂರು ಪಿಎಸ್ಐ ಮಹಾದೇವ ಬೋಸ್ಲೆ, ಶಂಕರನಾರಾಯಣ ಪಿಎಸ್ಐ ಶ್ರೀಧರ್ ನಾಯ್ಕ್, ಕುಂದಾಪುರ ಪಿಎಸ್ಐ ಸದಾಶಿವ ಗವರೋಜಿ, ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ಸುಧಾಪ್ರಭು, ಸಂಚಾರಿ ಠಾಣೆ ಉಪನಿರೀಕ್ಷಕರಾದ ಸುಬ್ಬಣ್ಣ, ಸುದರ್ಶನ್ ಸೇರಿದಂತೆ 269 ಪೊಲೀಸರನ್ನು ಬಂದೋಬಸ್ತಿಗಾಗಿ ನಿಯೋಜಿಸಲಾಗಿದೆ. ಇವರಲ್ಲಿ 100 ಮಂದಿ ಟ್ರೈನಿ ಪೊಲೀಸ್ ಸಿಬ್ಬಂದಿಗಳಿದ್ದಾರೆ‌. 1 ಕೆ.ಎಸ್.ಆರ್.ಪಿ ಹಾಗೂ 1 ಫ್ಲಟೂನ್ ನಿಯೋಜಿಸಲಾಗಿದೆ.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.