ಕರ್ನಾಟಕ

ಶಾಲೆಗೆ ಕರೆಸಿ 7ರಿಂದ 11 ವಯಸ್ಸಿನ ವಿದ್ಯಾರ್ಥಿನಿಯರ ಮೇಲೆ 40 ವರ್ಷದ ಶಿಕ್ಷಕನಿಂದ ಅತ್ಯಾಚಾರ

Pinterest LinkedIn Tumblr

ಹೈದರಾಬಾದ್​: ಆನ್​ಲೈನ್​ ಶಿಕ್ಷಣ ಪಡೆಯಲು ಸಾಧ್ಯವಾಗದ ಮಕ್ಕಳಿಗೆ ಶಾಲೆಯಲ್ಲಿ ಪಾಠ ಮಾಡುವುದಾಗಿ ಹೇಳಿದ ಶಿಕ್ಷಕನೊಬ್ಬ ಐದರಿಂದ ಆರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಲಾಕ್​ಡೌನ್​ ಅನೇಕ ವ್ಯವಸ್ಥೆಗಳನ್ನೇ ಬದಲಾಯಿಸಿಬಿಟ್ಟಿದೆ. ತರಗತಿ ಶಿಕ್ಷಣ ಹೋಗಿ ಆನ್​ಲೈನ್​ ಶಿಕ್ಷಣ ಬಂದಿದ್ದು, ಇದನ್ನೇ ದುರುಪಯೋಗಪಡಿಸಿಕೊಂಡಿರುವ 40 ವರ್ಷದ ಶಿಕ್ಷಕನೊಬ್ಬ ಆನ್​ಲೈನ್​ ಶಿಕ್ಷಣ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಪಾಠ ಮಾಡುವುದಾಗಿ ಹೇಳಿ ಅವರನ್ನು ಶಾಲೆಗೆ ಕರೆಸಿಕೊಳ್ಳುತ್ತಿದ್ದ.

ಕರೊನಾ ಕಾರಣ ಕೊಟ್ಟು ಒಬ್ಬೊಬ್ಬರನ್ನೇ ಕರೆಸಿಕೊಳ್ಳುತ್ತಿದ್ದ. ಹೀಗೆ ಒಬ್ಬಂಟಿಯಾಗಿ ಬಂದ ವಿದ್ಯಾರ್ಥಿನಿಯರಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ, ಅವರ ಮೇಲೆ ಅತ್ಯಾಚಾರವೆಸಗುತ್ತಿದ್ದ. ಆ ವಿಚಾರವನ್ನು ಯಾರಿಗೂ ಹೇಳದಂತೆ ಎಚ್ಚರಿಕೆ ನೀಡುತ್ತಿದ್ದ ಎನ್ನಲಾಗಿದೆ.

ಇತ್ತಿಚೆಗೆ ಶಾಲೆಗೆ ಹೋಗಿ ಬಂದ ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯಕ್ಕೀಡಾಗಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವ ವಿಚಾರ ತಿಳಿದುಬಂದಿದೆ. ನಂತರ ಬಾಲಕಿಯನ್ನು ವಿಚಾರಿಸಿದಾಗ ಆಕೆ, ಶಿಕ್ಷಕನೇ ಆ ರೀತಿ ಮಾಡಿದ್ದಾಗಿ ಬಾಯಿಬಿಟ್ಟಿದ್ದಾಳೆ.

ಈ ವಿಚಾರ ತಿಳಿಯುತ್ತಿದ್ದಂತೆ, ಬಾಲಕಿಯ ತಂದೆ ತಾಯಿ ಮತ್ತು ಗ್ರಾಮಸ್ಥರು ಶಿಕ್ಷಕನಿಗೆ ಥಳಿಸಿದ್ದಾರೆ. ಶಿಕ್ಷಕನ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಾಲೆಯ ಬೇರೆಯ ವಿದ್ಯಾರ್ಥಿನಿಯರನ್ನೂ ವಿಚಾರಿಸಲಾಗಿದೆ. 7ರಿಂದ 11 ವಯಸ್ಸಿನ ಐದರಿಂದ ಆರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವುದು ವಿದ್ಯಾರ್ಥಿನಿಯರ ಹೇಳಿಕೆಯಿಂದ ತಿಳಿದುಬಂದಿದೆ. ಎಲ್ಲ ವಿದ್ಯಾರ್ಥಿನಿಯರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.