ಕರಾವಳಿ

ದೇಯಿ ಬೈದೇದಿ ಹಾಗೂ ಕೋಟಿ -ಚೆನ್ನಯರ ಮೂಲ ಸ್ಥಾನ ಗೆಜ್ಜೆಗಿರಿ ಅಲ್ಲ -ಪಡುಮಲೆ : ಹರಿಕೃಷ್ಣ ಬಂಟ್ವಾಳ್

Pinterest LinkedIn Tumblr

ಮಂಗಳೂರು, ಡಿಸೆಂಬರ್.13: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಾನ ಮತ್ತು ಮೂಲಸ್ಥಾನವಾದ ಪಡುಮಲೆ ಕತ್ತಲೆಯಲ್ಲಿದ್ದು, ಅದು ಬೆಳಗಬೇಕೆಂಬ ನೆಲೆಯಲ್ಲಿ ಕೆಲಸ ಆರಂಭಿಸಿದ್ದೇವೆ ಎಂದು ಕೋಟಿ ಚೆನ್ನಯರ ಜನ್ಮ ಸ್ಥಾನ ಸಂಚಾಲನಾ ಸಮಿತಿ ಸೇವಾ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟಿ ಚೆನ್ನಯರ ಜನ್ಮ ಸ್ಥಾನ ಪುತ್ತೂರು ತಾಲೂಕಿನಲ್ಲಿದೆ ಎನ್ನುವುದಕ್ಕೆ ಸಾಕಷ್ಟು ಆಧಾರಗಳಿವೆ. ಆದರೆ ಕೋಟಿ ಚೆನ್ನಯರ ಮೂಲ ಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲು ಎನ್ನುವುದರ ಯಾವ ಕುರುಹು ಅಲ್ಲಿ ಇಲ್ಲ.

ಆದುದರಿಂದ ಕೋಟಿ ಚೆನ್ನಯರ ನೈಜ ಜನ್ಮ ಸ್ಥಳ, ದೇಯಿ ಬೈದೇದಿಯ ಮೂಲ ಸ್ಥಾನ ವನ್ನು ಮರೆ ಮಾಚಿದರೆ ಕೋಟಿ ಚೆನ್ನಯರ ಇತಿಹಾಸ ವನ್ನು ತಿರುಚಿದಂತಾಗಿತ್ತದೆ. ಇತಿಹಾಸ ನಾಶಮಾಡಲು ಅಥವಾ ತಿರುಚಲು ಯಾರಿಂದಲೂ ಸಾಧ್ಯವಿಲ್ಲ. ಚರಿತ್ರೆ ತಿರುಚಲು ಹೊರಟರೆ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಹೇಳಿದರು.

ಗೆಜ್ಜೆಗಿರಿ ನಂದನಬಿತ್ತ್‌ಲ್ ಕ್ಷೇತ್ರಾಡಳಿತ ಸಮಿತಿ ತನ್ನ ಮೇಲೆ ಹೊರಿಸಿರುವ ಆರೋಪ ಸತ್ಯಕ್ಕೆ ದೂರವಾದುದು. ನಾನು ನನ್ನ ಭಾಷಣದಲ್ಲಿ ಗೆಜ್ಜೆಗಿರಿಯ ಉಲ್ಲೇಖವನ್ನೇ ಮಾಡಿರಲಿಲ್ಲ. ಕೋಟಿ ಚೆನ್ನಯರ ಜನ್ಮಸ್ಥಾನ ಮತ್ತು ಮೂಲಸ್ಥಾನವಾದ ಪಡುಮಲೆಯ ಕುರಿತಾಗಿ ಮಾತನಾಡಿದ್ದೆ ಎಂದು ಸ್ಪಷ್ಟಪಡಿಸಿದರು.

ತುಳು ನಾಡಿನ ಐತಿಹಾಸಿಕ ಕಾರಣಿಕ ಪುರುಷರಾದ ಕೋಟಿ -ಚೆನ್ನಯ ಎಂಬ ಅವಳಿ ವೀರರ ತಾಯಿ ದೇಯಿ ಹುಟ್ಟಿರುವುದು ಪಡುಮಲೆಯ ಕೂವೆ ತೋಟ ಎಂಬಲ್ಲಿ. (ಈ ಕುರುಹು ಈಗಲೂ ಇದೆ) ಪಡುಮಲೆಯಲ್ಲಿ ಕೋಟಿ ಚೆನ್ನಯರ ಜನನವಾಗಿದೆ ಎನ್ನುವುದನ್ನು ಸ್ವಾತಂತ್ರ್ಯ ಪೂರ್ವ ದಲ್ಲಿ ಅವರ ಬಗ್ಗೆ ಕೃತಿ ರಚಿಸಿದ ದೇಶೀಯರು, ವಿದೇಶೀಯರು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ.

ಕನ್ನಡದ ಖ್ಯಾತ ಕವಿ ಪಂಜೆ ಮಂಗೇಶರಾಯರು ಕೋಟಿ ಚೆನ್ನಯರು ಪಡುಮಲೆಯಲ್ಲಿ ಹುಟ್ಟಿರುವ ಬಗ್ಗೆ ತಮ್ಮ ಕ್ರತಿಯಲ್ಲಿ ಉಲ್ಲೇಖಿಸಿದ್ದಾರೆ. ಪಡುಮಲೆಯಲ್ಲಿ ಕೋಟಿ ಚೆನ್ನಯರು ಜನಿಸಿದ ಬಲ್ಲಾಳರ ಅರಮನೆ ಇದ್ದ ಪ್ರದೇಶದ ಕುರುಹು ಇದೆ. ಆದರೆ ಕೋಟಿ ಚೆನ್ನಯರ ಜನ್ಮ ಸ್ಥಾನವನ್ನು ಗೆಜ್ಜೆ ಗಿರಿಯಲ್ಲಿ ಅಭಿವೃದ್ಧಿ ಮಾಡುವ ಹೆಸರಿನಲ್ಲಿ ಸುಮಾರು 13ಕೋಟಿ ರೂ ಸಂಗ್ರಹಿಸಲಾಗಿದೆ‌ ಎಂದು ಹರಿಕೃಷ್ಣ ಬಂಟ್ವಾಳ್ ಆರೋಪಿಸಿದರು.

ಕೋಟಿ ಚೆನ್ನಯರ ನಿಜವಾದ ಮೂಲಸ್ಥಾನಕ್ಕೆ ಧಕ್ಕೆಯಾಗಬಾರದು ಅದು ಬೆಳಕಿಗೆ ಬರಬೇಕೆಂಬುದೇ ನಮ್ಮ ಪ್ರಮುಖ ಉದ್ದೇಶ. 19ನೆಯ ಶತಮಾನದಲ್ಲಿಯೇ ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಳ ಎಂಬುದು ಸಾಬೀತಾಗಿತ್ತು. 1835ರಲ್ಲಿ ಹರ್ಮನ್ ಫೆಡ್ರಿಕ್ ಮೊಗ್ಲಿಂಗ್ ಕೂಡ ಪಾಡ್ದನದಲ್ಲಿದ್ದುದನ್ನು ಯಥಾವತ್ತಾಗಿ ಅಕ್ಷರಕ್ಕಿಳಿಸಿದ್ದು, ಅದರಲ್ಲೂ ಕೋಟಿ ಚೆನ್ನಯರ ಜನ್ಮಸ್ಥಳ ಮತ್ತು ಮೂಲಸ್ಥಾನ ಪಡುಮಲೆಯ ಉಲ್ಲೇಖವಿದೆ. 1937ರಲ್ಲಿ ಪಂಜೆ ಮಂಗೇಶರಾಯರು ಬರೆದ ಕೃತಿಯಲ್ಲಿಯೂ ಇದೇ ಉಲ್ಲೇಖವಿದೆ ಎಂದರು.

ಆದರೆ ಈ ಸಮಿತಿಯವರ ಬಳಿ ಭೂಮಿ ಇಲ್ಲ. ಈ ಹಿನ್ನೆಲೆಯಲ್ಲಿ ಕೋಟಿ ಚೆನ್ನಯರ ಮೂಲ ಸ್ಥಾನದ ಕುರುಹುಗಳಿರುವ ಸ್ಥಾನಗಳ ಅಭಿವೃದ್ಧಿಯಾಗಬೇಕು ಈ ಹಿನ್ನೆಲೆಯಲ್ಲಿ ಕೋಟಿ ಚೆನ್ನಯರ ಜನ್ಮ ಸ್ಥಾನ ಸಂಚಾಲನಾ ಸೇವಾ ಟ್ರಸ್ಟ್ ರಚನೆಯಾಗಿದೆ.

ಈ ಸಮಿತಿ ಮುಂದಿನ ಹಂತದಲ್ಲಿ ಕೋಟಿ ಚೆನ್ನಯರು ಕಂಬಳದಲ್ಲಿ ಪಾಲ್ಗೊಳ್ಳುತ್ತಿದ್ದ ಪಡುಮಲೆಯ ಎಂಟು ಮುಡಿ ಗದ್ದೆಯ ಪ್ರದೇಶ, ಕೋಟಿ ಚೆನ್ನಯರ ಸಮಾಧಿ ಸ್ಥಳ, ನಾಗ ಬ್ರಹ್ಮರ ಗುಡಿಯ ಅಭಿವೃದ್ಧಿ ಸೇರಿದಂತೆ ಕತ್ತಲಲ್ಲಿ ಇರುವ ಕೋಟಿ ಚೆನ್ನಯರ ಮೂಲ ಸ್ಥಾನವನ್ನು ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಹೊಂದಿದೆ.

ಕೋಟಿ ಚೆನ್ನಯರು ಕೇವಲ ಒಂದು ಜಾತಿ, ಧರ್ಮ, ಪ್ರದೇಶಕ್ಕೆ ಸೀಮಿತರಾದವರಲ್ಲ ಅವರು ಸಮಸ್ತ ತುಳುನಾಡಿಗೆ ಆ ಮೂಲಕ ಈ ದೇಶದ ವಿವಿಧ ಜನ ಸಮುದಾಯದಿಂದ ಆರಾಧನೆ ಪಡೆಯುತ್ತಿರುವ ಕಾರಣಿಕ ಪುರುಷರು ಆ ಕಾರಣದಿಂದಾಗಿ ತುಳುನಾಡಿನ ವಿವಿಧ ಜಾತಿ, ಧರ್ಮಗಳ ಜನರು ಅವರನ್ನು ವಿವಿಧ ಗರಡಿಗಳಲ್ಲಿ ಆರಾಧಿಸುತ್ತಿದ್ದಾರೆ. ಬಿಲ್ಲವರು, ಬಂಟರು, ಜೈನರು ಸೇರಿದಂತೆ ಎಲ್ಲರ ಆರಾಧ್ಯ ದೈವಗಳಾಗಿ ತುಳುನಾಡಿನಲ್ಲಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೋಟಿ ಚೆನ್ನಯ ಜನ್ಮ ಸ್ಥಾನ ಸಂಚಾಲನ ಸಮಿತಿಯ ಗೌರವಾಧ್ಯಕ್ಷ ರುಕ್ಮಯ ಪೂಜಾರಿ, ಆಡಳಿತ ಟ್ರಸ್ಟಿ ಖ್ಯಾತ ಚಲನಚಿತ್ರ ನಟ ವಿನೋದ್ ಆಳ್ವಾ, ತಾಲೂಕು ಅಧ್ಯಕ್ಷ ವೇದನಾಥ ಸುವರ್ಣ, ಟ್ರಸ್ಟಿಗಳಾದ ಶ್ರೀಧರ ಪಟ್ಲ, ವಿಜಯ ಕುಮಾರ್ ಸೊರಕೆ, ಶೇಖರ ನಾರಾವಿ ಮೊದಲಾದವರು ಉಪಸ್ಥಿತರಿದ್ದರು.

Comments are closed.