ಕರಾವಳಿ

ದೇವಾಡಿಗ ಅಭಿವೃದ್ಧಿ ನಿಗಮಕ್ಕಾಗಿ ಒಕ್ಕೋರಲ ಬೇಡಿಕೆ; ಬಾರ್ಕೂರು ಏಕನಾಥೇಶ್ವರಿ ಸನ್ನಿಧಿಯಲ್ಲಿ ಸಭೆ

Pinterest LinkedIn Tumblr

ಉಡುಪಿ: ದೇವಾಡಿಗ ಅಭಿವೃದ್ಧಿ ನಿಗಮ ಮಂಡಳಿ ರಚನೆಗೆ ದೇವಾಡಿಗ ಸಮುದಾಯದಲ್ಲಿ ಪ್ರಭಲ ಕೂಗು ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಉಡುಪಿ ಜಿಲ್ಲೆ ಬಾರ್ಕೂರಿನ ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ ಭಾನುವಾರದಂದು ರಾಜ್ಯದ ವಿವಿದೆಡೆಯ ದೇವಾಡಿಗ ಸಂಘಗಳ ಪದಾಧಿಕಾರಿಗಳು ಹಾಗೂ ದೇವಾಡಿಗ ಸಮಾಜದ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆದಿದ್ದು ಸಮಗ್ರವಾದ ಚರ್ಚೆಯಾಗಿದೆ.

ಸಭೆಯಲ್ಲಿ ಮುಂಬೈ, ಪುಣೆ, ಬೆಂಗಳೂರು, ಕದಂ ಸೇರಿದಂತೆ 65 ವಿವಿದೆಡೆಯ ದೇವಾಡಿಗ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆಯಾಯ ಸಂಘ ವ್ಯಾಪ್ತಿಯಲ್ಲಿನ ದೇವಾಡಿಗ ಕುಟುಂಬಗಳ ಸರ್ವೇ ನಡೆಸಿ ಡಾಟಾ ತಯಾರು ಮಾಡುವುದು ಸೂಕ್ತ ಎನ್ನುವ ಒಕ್ಕೋರಲ ಅಭಿಪ್ರಾಯ ಕೇಳಿಬಂತು.

ಸಭೆಯಲ್ಲಿ ಮೊದಲಿಗೆ ಮಾತನಾಡಿದ ಶ್ರೀ ಏಕನಾಥೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ‌ ಅಧ್ಯಕ್ಷ ಡಾ. ದೇವರಾಜ್ ದೇವಾಡಿಗ ಕಂಕನಾಡಿ, ದೇವಾಡಿಗ ಸಮುದಾಯದಲ್ಲಿ ಒಂದಷ್ಟು ಮಂದಿಯನ್ನು ಬಿಟ್ಟರೇ ಮತ್ತೆಲ್ಲ ಬಹಳಷ್ಟು ಜನರು ಕಷ್ಟದ ಜೀವನ ಕಳೆಯುತ್ತಿದ್ದಾರೆ. ದೇವಾಡಿಗ ಸಂಘಗಳು ಇದ್ದರೂ ಕೂಡ ಆರ್ಥಿಕವಾಗಿ ಹಿನ್ನಡೆಯಾದ್ದರಿಂದ ಸಮುದಾಯದ ಏಳಿಗೆಗೆ ಕೊಡುಗೆ ನೀಡುವಲ್ಲಿ ಹಿನ್ನಡೆಯಾಗುತ್ತಿದೆ. ಸರಕಾರದ ಪ್ರೋತ್ಸಹ ಸಿಕ್ಕಿದರೆ ಸಮಾಜದ ಅಭ್ಯುದಯ ಸಾಧ್ಯವಿದೆ. ಇಂದಿನ ಸಭೆಯ ಎಲ್ಲಾ ಒಕ್ಕೋರಲ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ದೇವಾಡಿಗ ಸಂಘದವರು ಸಮುದಾಯದ ಏಳಿಗೆಗೆ ಸಂಘಟನಾತ್ಮಕವಾಗಿ ಹೋರಾಡಬೇಕು ಎಂದರು.

ದೇವಸ್ಥಾನದ ವಿಶ್ವಸ್ಥರು, ಮುಖ್ಯ ಸಂಚಾಲಕರಾದ ಹಿರಿಯಡ್ಕ ಮೋಹನದಾಸ್ ಮಾತನಾಡಿ, ದೇವಾಡಿಗ ಸಮುದಾಯವು ಸಾಂಸ್ಕೃತಿಕವಾಗಿ ಮುಂದುವರಿದರೂ ಕೂಡ ಆರ್ಥಿಕವಾಗಿ ಬಹಳಷ್ಟು ಹಿಂದೆಯಿದೆ. ಅಲ್ಲಲ್ಲಿ ಸಂಘಟನೆಯಿಂದಾಗಿ ಶೈಕ್ಷಣಿಕವಾಗಿ ಮುಂದುವರಿದರೂ‌ ಕೂಡ ಆರ್ಥಿಕ ಸಮಸ್ಯೆಯಿಂದ ಹೆಚ್ಚಿನ ವಿದ್ಯಾಭ್ಯಾಸ ಪಡೆಯದಿರುವುದು ಕಂಡುಬರುತ್ತಿದೆ. ರಾಜಕೀಯವಾಗಿ ಮತ್ತು ಸರಕಾರಿ ಸೇವೆಗಳಲ್ಲಿ ತೊಡಿಸಿಕೊಂಡವರ ಪೈಕಿ ದೇವಾಡಿಗ ಸಮುದಾಯದವರು ಬಹಳಷ್ಟು ವಿರಳವಾಗಿರುವುದು ದುರದೃಷ್ಟಕರ. ಪ್ರಸ್ತುತ ಕಾಲಘಟ್ಟದಲ್ಲಿ ದೇವಾಡಿಗ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕಿದೆ. ಈ ನಿಗಮದ ಬಗ್ಗೆ ಸಾಗರ ದೇವಾಡಿಗ ಸಂಘದವರು ಈ ಹಿಂದೆಯೇ ನಿರ್ಣಯ ತೆಗೆದುಕೊಂಡಿದ್ದರು. ಈ ಬಗ್ಗೆ ಪ್ರಯತ್ನ ಒಂದೆರಡು ವರ್ಷದ ಹಿಂದೆಯೇ ನಡೆದಿತ್ತಾದರೂ ಆಗಿರಲಿಲ್ಲ. ಸಂಘಟನಾತ್ಮಕ ಹಾಗೂ ಸಾಮೂಹಿಕ ನಾಯಕತ್ವದ ಮೂಲಕ ಶ್ರೀ ಏಕನಾಥೇಶ್ವರೀ ದೇವಸ್ಥಾನದಿಂದಲೇ ಹೆಜ್ಜೆ ಇಡೋಣ. ಈ ಮೂಲಕವಾಗಿ ದೇವಾಡಿಗ ಸಮುದಾಯದ ಅಭಿವೃದ್ಧಿಗೆ ಸಂಕಲ್ಪ ಮಾಡೋಣ ಎಂದು ಕರೆಕೊಟ್ಟರು.

ಇದೇ ಸಂದರ್ಭ ಅಭಿವೃದ್ಧಿ ನಿಗಮದ ರಚನೆಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸುವ ಕರಡು ಮನವಿ ರಚಿಸಲಾಯಿತು. ಮುಂದಿನ ದಿನದಲ್ಲಿ ಮುಖ್ಯಮಂತ್ರಿಗಳನ್ನು ನಿಯೋಗದ ಮೂಲಕ ತೆರಳಿ ಅವರಿಗೆ ಮನವಿ ಸಲ್ಲಿಸುವುದು ಮತ್ತು ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಸಚಿವರ ಮೂಲಕ ಸರಕಾರಕ್ಕೆ ಶಿಫಾರಸ್ಸು ಮಾಡುವಲ್ಲಿ ಆಯಾಯ ಸಂಘದ ಮಟ್ಟದಲ್ಲಿ ಕೆಲಸವಾಗಬೇಕು ಎಂದು ಚರ್ಚಿಲಾಯಿತು‌. ಅಲ್ಲದೆ ಶ್ರೀ ಏಕನಾಥೇಶ್ವರಿ ದೇವಿಗೆ ಸಾಮೂಹಿಕ ಪೂಜೆ ಸಲ್ಲಿಸಲಾಯಿತು.

ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ಪ್ರಧಾನ ಕಾರ್ಯದರ್ಶಿ ನರಸಿಂಹ ದೇವಾಡಿಗ, ವ್ಯವಸ್ಥಾಪನ ಸಮಿತಿ ಗೌರವ ಕಾರ್ಯದರ್ಶಿ ಗಣೇಶ್ ದೇವಾಡಿಗ, ವಿಶ್ವಸ್ಥರಾದ ಆಲೂರು ರಘುರಾಮ ದೇವಾಡಿಗ, ಬಿ. ಜನಾರ್ಧನ ದೇವಾಡಿಗ ಮೊದಲಾದವರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.