ಕುಂದಾಪುರ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶೇ.60 ರಷ್ಟು ಅನುದಾನಗಳು ಗ್ರಾಮ ಪಂಚಾಯಿತಿಗಳ ಮೂಲಕವೇ ಅನುಷ್ಠಾನವಾಗುವುದರಿಂದ ರಾಜಕೀಯ ಪಕ್ಷಗಳಿಗೆ ಅತ್ಯಂತ ಪ್ರಾಮುಖ್ಯ ಚುನಾವಣೆ ಇದಾಗಿರುವುದ್ದು, ಗ್ರಾಮ ಮಟ್ಟದಿಂದಲೇ ಪಕ್ಷ ಸಂಘಟನೆಗೆ ಕಾಂಗ್ರೆಸ್ ಪಕ್ಷ ಪ್ರಯತ್ನ ನಡೆಸಲಿದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಭರವಸೆ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಆರ್‌ಎನ್‌ಶೆಟ್ಟಿ ಸಭಾಂಗಣದ ಮಿನಿ ಹಾಲ್‌ನಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತ್ರತ್ವದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕೊರೊನಾ ಹೆಸರಿನಲ್ಲಿ ಭೃಷ್ಟಾಚಾರ ಮಾಡಿರುವುದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ. ಜಾಗಟೆ ಬಾರಿಸುವುದು, ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದರಿಂದ ಕೊರೊನಾ ನಿಯಂತ್ರಣವಾಗಲೇ ಇಲ್ಲ. ಸಿದ್ಧರಾಮಯ್ಯ ಸರ್ಕಾರ ನೀಡಿದ ಅನ್ನಭಾಗ್ಯದ ಸಹಾಯ ದೊರಕದೆ ಇದ್ದರೆ ಎಷ್ಟೋ ಜನರು ಉಪವಾಸ ಬೀಳುವ ಸಾಧ್ಯತೆಗಳಿದ್ದವು. ಮನ್‌ಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ನೇಮಕವಾದ ಆಶಾ ಕಾರ್ಯಕರ್ತೆಯರೇ ಕೊರೊನಾ ವಾರಿಯರ್ಸ್ ಆಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ನರೇಗಾ ಯೋಜನೆಯಿಂದಾಗಿ ಕೆಲಸವಿಲ್ಲದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗವಕಾಶವಾಗಿದೆ. ಸಂಬಳ, ಪರಿಹಾರ, ಅಭಿವೃದ್ಧಿಗೆ ಅನುದಾನ ನೀಡಲು ಹಣ ಇಲ್ಲದೆ ಇರುವ ಸರ್ಕಾರ ರಾಜ್ಯದಲ್ಲಿ ಇದ್ದು, ಇಲ್ಲದಂತೆ ಇದೆ ಎಂದು ಲೇವಡಿ ಮಾಡಿದರು.
ಭಾವನಾತ್ಮಕ ಹಾಗೂ ಸುಳ್ಳು ಪ್ರಚಾರದೊಂದಿಗೆ ಚುನಾವಣೆ ಎದುರಿಸುವ ಬಿಜೆಪಿಯವರ ತಂತ್ರ ಈ ಬಾರಿ ನಡೆಯುವುದಿಲ್ಲ. ಕಳೆದ 45 ವರ್ಷಗಳಲ್ಲಿ ಕಾಣದ ಆರ್ಥಿಕ ಅವನತಿ ದೇಶದಲ್ಲಿ ಕಾಣುತ್ತಿದೆ. ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಅಮೂಲ್ಯವಾದ ಸರ್ಕಾರಿ ಆಸ್ತಿಗಳನ್ನು ಖಾಸಗಿಯವರಿಗೆ ಪರಭಾರೆ ಮಾಡಲಾಗುತ್ತಿದೆ. ಧರ್ಮ–ಜಾತಿಯ ಹೆಸರಿನಲ್ಲಿ ದೇಶವನ್ನು ಒಡೆಯುವ ಕೆಲಸ ಆಗುತ್ತಿದೆ. ಕೆ.ಪ್ರತಾಪ್‌ಚಂದ್ರ ಶೆಟ್ಟಿಯವರ ನಾಯಕತ್ವದಲ್ಲಿ ವರಾಹಿ ನೀರು ತರುವುದು, ಪುರಸಭೆಯ ಅಭಿವೃದ್ಧಿಯೂ ಸೇರಿ ಕಾಂಗ್ರೆಸ್ ಅನೇಕ ಕೊಡುಗೆಗಳನ್ನು ನೀಡಿದೆ. ದೇಶದಲ್ಲಿ ನಡೆಯುವ ವಾಸ್ತಾವಿಕ ವಿಚಾರಗಳನ್ನು ಕಾರ್ಯಕರ್ತರ ಮೂಲಕ ಗ್ರಾಮದ ಪ್ರತಿ ಮತದಾರರಿಗೂ ಮುಟ್ಟಿಸುವ ಕೆಲಸ ಆಗಬೇಕು. ನಾವು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದನ್ನ ಮಾತ್ರ ಮಾಡುತ್ತೇವೆ. ಆದರೆ ಪ್ರತಿ ಪಕ್ಷದವರು ಅಭ್ಯರ್ಥಿಯನ್ನು ಕದಿಯುವುದರ ಜತೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಹೇಗೆ ಸೋಲಿಸಬೇಕು ಎನ್ನುವ ಷಡ್ಯಂತ್ರವನ್ನು ಮಾಡುತ್ತಾರೆ. 23 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಅಲ್ಲಿನ ಸಮಸ್ಯೆಗೆ ಪರಿಹಾರ ನೀಡಲು ಆದ್ಯತೆ ನೀಡಬೇಕು ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಪ್ರಾಸ್ತಾವಿಕ ಮಾತನಾಡಿದರು. ಪಕ್ಷದ ಪ್ರಮುಖರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಬಿ.ಹಿರಿಯಣ್ಣ ಚಾತ್ರಬೆಟ್ಟು, ಶ್ಯಾಮಲಾ ಭಂಡಾರಿ, ದೇವಾನಂದ ಶೆಟ್ಟಿ, ಜ್ಯೋತಿ ವಿ ಪುತ್ರನ್, ದೇವಕಿ ಪಿ ಸಣ್ಣಯ್ಯ, ಗಣೇಶ್ ಶೇರುಗಾರ, ಅಶೋಕ ಪೂಜಾರಿ ಬೀಜಾಡಿ, ಇಚ್ಛಿತಾರ್ಥ, ಜಾನಕಿ ಬಿಲ್ಲವ ಇದ್ದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ ಕ್ರಾಸ್ಟೋ ನಿರೂಪಿಸಿದರು. ಖಜಾಂಜಿ ನಾರಾಯಣ ಆಚಾರ್ ಕೋಣಿ ವಂದಿಸಿದರು.
ಕಾರ್ಪೋರೇಟ್ ಆಗಿರುವ ಅದಾನಿಯವರಿಗೆ ಮಂಗಳೂರಿನ ವಿಮಾನ ನಿಲ್ದಾಣವನ್ನು ಏಕಾಏಕಿ ಹಸ್ತಾಂತರ ಮಾಡಿ, ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡುವುದರಲ್ಲಿ ಯಾವ ಅರ್ಥ ಇದೆ. ಕಾಂಗ್ರೆಸ್ ಇದರ ವಿರುದ್ಧ ಹೋರಾಟ ನಡೆಸಲಿದೆ.
– ವಿನಯಕುಮಾರ ಸೊರಕೆ. ಮಾಜಿ ಸಚಿವರು