ಕರಾವಳಿ

ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ಗೋಡೆ ಬರಹ ಪ್ರಕರಣ : ಎನ್‌ಐಎ ತನಿಖೆಗೆ ಚಿಂತನೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.10 : ಮಂಗಳೂರಿನ ಪ್ರತ್ಯೇಕ ಸ್ಥಳಗಳಲ್ಲಿ ಉಗ್ರರ ಪರ ಪ್ರಚೋದನಕಾರಿ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಇಬ್ಬರು ಆರೋಪಿಗಳನ್ನು ಬುಧವಾರದಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸರ ಮನವಿಯಂತೆ ನ್ಯಾಯಾಲಯವು ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಅವಧಿಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್ (22) ಮತ್ತು ಮಾಝ್ ಮುನೀರ್ ಅಹಮ್ಮದ್ (21) ಅವರನ್ನು ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ.

ಇಬ್ಬರು ಆರೋಪಿಗಳ ಬಳಿ ಇದ್ದ ಮೊಬೈಲ್‌‌ ಫೋನ್‌ ಹಾಗೂ ಮಾಝ್‌‌ನ ಬಳಿ ಇದ್ದ ಲಾಪ್‌ಟಾಪ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿರುವ ಡೇಟಾವನ್ನು ರಿಟ್ರೈವ್‌ ಮಾಡಲು ತಂತ್ರಜ್ಞರಿಗೆ ನೀಡಿದ್ದಾರೆ.

ಶಾರೀಕ್‌‌‌‌‌‌ನ ಸಂಬಂಧಿ ತೀರ್ಥಹಳ್ಳಿಯ ಸಾದತ್‌‌ನನ್ನು ಕೂಡಾ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಆತನನ್ನು ಕೂಡಾ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಪ್ರಚೋದನಕಾರಿ ಗೋಡೆ ಬರಹ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಗೋಡ ಬರಹ ಬರೆಯುವಂತೆ ವಿದೇಶದಿಂದ ವ್ಯಕ್ತಿಯೋರ್ವ ನಿರ್ದೇಶನ ನೀಡಿದ್ದಾನೆ ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮೊಹಮ್ಮದ್ ಶಾರಿಕ್ ಈ ಪ್ರಕರಣದ ಪ್ರಮುಖ ಆರೋಪಿ. ಇಂಟರ್ನೆಟ್ ಫೋನ್ ಕರೆ ಮೂಲಕ ಆತನ ಸಂಪರ್ಕ ಮಾಡುತ್ತಿದ್ದ ವ್ಯಕ್ತಿಯು ರಾಜ್ಯವ್ಯಾಪಿ ಗಮನವನ್ನು ಸೆಳೆಯಲು ಹಾಗೂ ಚಳುವಳಿಯನ್ನು ಸೃಷ್ಟಿಸಲು ಈ ರೀತಿಯ ಕಾರ್ಯ ಮಾಡಲು ಪ್ರೋತ್ಸಾಹಿಸಿದನು.

ಕರೆ ಮಾಡಿದವರು ಕರಾವಳಿ ಕರ್ನಾಟಕದಲ್ಲಿ ಈ ಕೃತ್ಯ ಮಾಡಬೇಕೆಂದು ಬಯಸಿದ್ದು ಈ ಹಿನ್ನೆಲೆ ಶಾರಿಕ್ ಇಂಟರ್ನೆಟ್ ಮತ್ತು ಯೂಟ್ಯೂಬ್‌ನಲ್ಲಿ ಜನರ ಗಮನ ಸೆಳೆಯಲು ಯಾವ ಕಾರ್ಯ ಸೂಕ್ತ ಎಂದು ಹುಡುಕಿ ಬಳಿಕ ಗೋಡೆ ಬರಹ ಬರೆಯುವ ತೀರ್ಮಾನ ತೆಗೆದುಕೊಂಡನು. ಈ ಕೃತ್ಯಕ್ಕೆ ನಿರ್ದೇಶನ ನೀಡಿದ ವ್ಯಕ್ತಿ ಹಾಗೂ ಈ ಘಟನೆಯಲ್ಲಿ ಭಾಗಿಯಾದ ಸದಸ್ಯರು ಪುಣೆಯ ವಾಟ್ಸಾಪ್‌ ಗುಂಪಿನಲ್ಲಿರುವವರು ಎಂದು ಮೂಲಗಳು ಬಹಿರಂಗಪಡಿಸಿವೆ.

ಮೊಹಮ್ಮದ್ ಶಾರಿಕ್ ತೀರ್ಥಹಳ್ಳಿಯಲ್ಲಿ ವಾಸಿಸುತ್ತಿದ್ದರೆ, ಮಾಜ್‌ ಮುನೀರ್ ಅಹಮದ್ ನಗರದಲ್ಲಿ ವಾಸಿಸುತ್ತಿದ್ದಾನೆ. ಚಟುವಟಿಕೆಯ ಬೆಳವಣಿಗೆಗಳನ್ನು ಗಮನಿಸುವ ಜವಾಬ್ದಾರಿಯನ್ನು ಮಾಜ್‌ಗೆ ಶಾರೀಕ್‌ ನೀಡಿದ್ದನು. ಎಂಜಿನಿಯರಿಂಗ್ ವಿದ್ಯಾರ್ಥಿಯಾದ ಮಾಜ್ ಆರಂಭದಲ್ಲಿ ಈ ಜವಾಬ್ದಾರಿ ವಹಿಸುವುದಕ್ಕೆ ಹಿಂಜರಿದಿದ್ದು ಆದರೆ ಆತನನ್ನು ಒತ್ತಾಯಿಸಿ ಶಾರಿಕ್‌ ತನ್ನ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಆರಂಭದಲ್ಲಿ ಕೋರ್ಟ್ ಸಮೀಪದ ಗೋಡೆಯಲ್ಲಿ ಪ್ರಚೋದನಕಾರಿ ಬರಹವನ್ನು ಬರೆದಿದ್ದ ಅವರು ಈ ಬರಹ ಯಾರ ಗಮನಕ್ಕೂ ಬಾರದ ಕಾರಣ ಬಿಜೈನ ಅಪಾರ್ಟ್‌ಮೆಂಟ್‌ ಒಂದರ ಗೋಡೆಯ ಮೇಲೆ ಪ್ರಚೋದನಕಾರಿ ಬರಹವನ್ನು ಬರೆದಿದ್ದಾರೆ.

ಶಾರಿಕ್ ಮತ್ತು ಮಾಜ್‌ನನ್ನು ಪ್ರಶ್ನಿಸಿದ ಸಂದರ್ಭ ಘಟನಾ ಸ್ಥಳದಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದ ಬಗ್ಗೆ ಪೊಲೀಸರಿಗೆ ತಿಳಿದಿದ್ದು ತೀರ್ಥಹಳ್ಳಿಯ ಸದಾತ್ ಎಂಬತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಾರಿಕ್‌ಗೆ ಈ ಕೃತ್ಯ ಎಸಗಲು ಬೇಕಾದ ಹಣದ ವ್ಯವಸ್ಥೆಯನ್ನು ಸದಾತ್‌ ಮಾಡಿ‌ದ್ದ ಹಾಗೆಯೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಎಂದು ವರದಿಯಾಗಿದೆ.

ಎನ್‌ಐಎ ತನಿಖೆಗೆ ಚಿಂತನೆ :

ಆರೋಪಿಗಳ ಬಗ್ಗೆ ಪೊಲೀಸರು ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದು, ಮುಂದಿನ ತನಿಖೆಯನ್ನು ಯಾವ ಆಯಾಗಳಲ್ಲಿ ನಡೆಸಬೇಕು ಎನ್ನುವ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಒಂದು ವೇಳೆ ತನಿಖೆ ತೀವ್ರಗೊಂಡು ಇನ್ನಷ್ಟು ಮಾಹಿತಿ ಲಭ್ಯವಾದರೆ ರಾಷ್ಟ್ರೀಯ ತನಿಖಾ ತಂಡದಿಂದಲೂ ಕೂಡಾ ಆರೋಪಿಗಳನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

Comments are closed.