ಕರಾವಳಿ

ಮಂಗಳೂರು ಬೋಟ್ ದುರಂತ : 5 ದಿನ ಕಳೆದರೂ ಓರ್ವ ಇನ್ನೂ ನಾಪತ್ತೆ – ಕಾರ್ಯಾಚರಣೆ ಸ್ಥಗಿತ

Pinterest LinkedIn Tumblr

ಮಂಗಳೂರು, ಡಿಸೆಂಬರ್.05: ಮಂಗಳೂರು ಬೋಟ್ ದುರಂತದಲ್ಲಿ ಸಮುದ್ರ ಪಾಲಾದ ಆರು ಮಂದಿಯಲ್ಲಿ ಈಗಾಗಲೇ ಐವರ ಮೃತದೇಹ ಪತ್ತೆಯಾಗಿದ್ದು,ಓರ್ವರ ಶವ ಇನ್ನೂ ಪತ್ತೆಯಾಗಿಲ್ಲ.

ನವೆಂಬರ್ 30ರಂದು ರಾತ್ರಿ ಮಂಗಳೂರು ದಕ್ಕೆಯಿಂದ ಸುಮಾರು 12 ನಾಟಿಕಲ್‌ ಮೈಲು ದೂರದಲ್ಲಿ ಮುಳುಗಿದ ಶ್ರೀರಕ್ಷಾ ದೋಣಿಯಲ್ಲಿದ್ದ ಮೀನುಗಾರರ ಪೈಕಿ ನಾಪತ್ತೆಯಾಗಿರುವ ಕಸ್ಬಾ ಬೆಂಗ್ರೆಯ ಅನ್ಸಾರ್‌ (31) ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ.

ಘಟನೆ ನಡೆದು ಐದು ದಿನಗಳು ಕಳೆದರೂ ಇಲ್ಲಿಯವರೆಗೆ ನಾಪತ್ತೆಯಾದ ಮೀನುಗಾರನ ಸುಳಿವು ದೊರೆತಿಲ್ಲ. ನೀರಿನಡಿಯಲ್ಲಿರುವ ದೋಣಿ ಯನ್ನು ಈಗಾಗಲೇ ಒಂದಷ್ಟು ದೂರಕ್ಕೆ ಸರಿಸಲಾಗಿದೆ. ಆದರೆ ಅದರ ಅಡಿಯಲ್ಲಿ ಮಾನವ ದೇಹಕ್ಕೆ ಸಂಬಂಧಿಸಿ ಯಾವುದೇ ಕುರುತು ಪತ್ತೆಯಾಗಿಲ್ಲ.

ಕರಾವಳಿ ಕಾವಲು ಪೊಲೀಸರ ಮೂರು ಬೋಟ್‌ಗಳು, ಕೋಸ್ಟ್‌ಗಾರ್ಡ್ ತಂಡ, ಸ್ಥಳೀಯ ಮುಳುಗು ತಜ್ಞರು, ಇತರ ಮೀನುಗಾರಿಕಾ ಬೋಟ್‌ಗಳು ಬೆಳಗ್ಗಿನಿಂದ ರಾತ್ರಿಯವರೆಗೆ ಹುಡುಕಾಡಿದರೂ ಅನ್ಸರ್ ಪತ್ತೆಯಾಗಿಲ್ಲ. ಹಾಗಾಗಿ ಸದ್ಯಕ್ಕೆ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಕರಾವಳಿ ಕಾವಲು ಎಸ್‌ಪಿ ಆರ್‌.ಚೇತನ್‌ ಅವರ ನಿರ್ದೇಶನದಂತೆ ಕಳೆದೆರಡು ದಿನಗಳಿಂದ ಪರ್ಶಿನ್‌ ಮೀನುಗಾರರ ಜತೆಗೆ ಕಾರ್ಯಾಚರಣೆ ನಡೆಸಿದ್ದ ಕರಾವಳಿ ಕಾವಲು ಪೊಲೀಸರು ಶುಕ್ರವಾರ ಆ ಪ್ರದೇಶದ ಸುಮಾರು 8.ಕಿ.ಮೀ ಸುತ್ತಳತೆಯಲ್ಲಿ ನಿಗಾ ವಹಿಸಿದರು. ಕರಾವಳಿ ಕಾವಲು ಪೊಲೀಸ್‌ನ ಕರಾವಳಿ ನಿಯಂತ್ರಣ ದಳ ತೀರದುದ್ದಕ್ಕೂ ವಿಶೇಷ ನಿಗಾ ವಹಿಸಲಿದೆ ಎಂದು ಕರಾವಳಿ ಕಾವಲು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.