ಕರಾವಳಿ

ಸಿಟಿ ಬಸ್‌ಗಳಿಗೆ 15 ದಿನಗಳೊಳಗಾಗಿ ಜಿಪಿಎಸ್‌ ಅಳವಡಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ : ಡಿಸಿ ಎಚ್ಚರಿಕೆ

Pinterest LinkedIn Tumblr

ಮಂಗಳೂರು: ಸಿಟಿ ಬಸ್‌ಗಳಿಗೆ ಜಿಪಿಎಸ್ ಜಿಪಿಎಸ್‌ ಅಳವಡಿಕೆ ಕಡ್ಡಾಯ. ಮುಂದಿನ 15 ದಿನಗಳೊಳಗಾಗಿ ಜಿಪಿಎಸ್‌ ಅಳವಡಿಸದಿದ್ದ ಪಕ್ಷದಲ್ಲಿ ಅಂತಹ ಬಸ್‌ಗಳನ್ನು ಗುರುತಿಸಿ, ಪರವಾನಿಗೆ ರದ್ದುಗೊಳಿಸುವ ಜೊತೆಗೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಬಸ್ ಮಾಲಕರಿಗೆ ಎಚ್ಚರಿಕೆ ನೀಡಿದ್ದಾರೆ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾರಿಗೆ ಪ್ರಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಲ್ಲಿ ಸಿಟಿ ಬಸ್‌ಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ.’ ಸಿಟಿ ಬಸ್‌ಗಳಿಗೆ ಜಿಪಿಎಸ್ ಅಳವಡಿಸುವಂತೆ ಈಗಾಗಲೇ ಹಲವು ಬಾರಿ ಸೂಚನೆ ನೀಡಲಾಗಿದೆ. ಇನ್ನು ಗಡುವು ವಿಸ್ತರಿಸಲು ಸಾಧ್ಯವೇ ಇಲ್ಲ. 15 ದಿನಗಳ ಒಳಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದರು.

ಮಂಗಳೂರು ನಗರ ವ್ಯಾಪ್ತಿಯಲ್ಲಿ 320 ಬಸ್‌ಗಳು ಸಂಚರಿಸುತ್ತಿದ್ದು, ಈ ಪೈಕಿ 70 ಬಸ್‌ಗಳಲ್ಲಿ ಮಾತ್ರ ಜಿಪಿಎಸ್ ಅಳವಡಿಸಲಾಗಿದೆ ಎಂದು ಸಾರಿಗೆ ಅಧಿಕಾರಿ ಮಾಹಿತಿ ನೀಡಿದರು.

‘ನಗರದಲ್ಲಿ ಸಂಚರಿಸುವ ವಾಹನಗಳ ವರ್ಷವಾರು ಪಟ್ಟಿಯನ್ನು ಸಾರಿಗೆ ಇಲಾಖೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು. 5 ರಿಂದ 10 ವರ್ಷದೊಳಗಿನ ಮತ್ತು 10 ರಿಂದ 15 ವರ್ಷದೊಳಗಿನ ವಾಹನಗಳು ಎಷ್ಟಿವೆ ಎಂಬ ಮಾಹಿತಿಯನ್ನು ನೀಡಬೇಕು. ವಾಹನಗಳಿಗೆ ಕ್ಷಮತಾ ಪತ್ರ ನೀಡುವಾಗ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‍ರಾಜ್ ಆಳ್ವ, ಮಂಗಳೂರು ಆರ್‌ಟಿಒ ವರ್ಣೇಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್, ಮಹಾನಗರ ಪಾಲಿಕೆ ಉಪ ಆಯುಕ್ತ ಸಂತೋಷ್ ಕುಮಾರ್, ಸಂಚಾರ ಪೊಲೀಸ್ ಎಸಿಪಿ ನಟರಾಜ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

Comments are closed.