ಕರಾವಳಿ

ಕೋವಿಡ್‌ನಿಂದಾಗಿ ಹಿನ್ನಡೆಯಾದ ಜನಸಾಮಾನ್ಯ ಕಲ್ಯಾಣ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಕಾರ್ಯಪ್ರವೃತ್ತರಾಗಿ: ಡಾ.ಎಂ.ಟಿ ರೇಜು

Pinterest LinkedIn Tumblr

ಉಡುಪಿ: ಕೋವಿಡ್‌ನಿಂದಾಗಿ ಪ್ರಸ್ತುತ ಸಾಲಿನ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನ ನಿಗದಿತ ಗುರಿ ಸಾಧಿಸಿಲ್ಲ. ಡಿಸೆಂಬರ್ ಹಾಗೂ ಜನವರಿ ಮಾಹೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ ರೇಜು ತಿಳಿಸಿದರು.

ಅವರಿಂದು ನಗರದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರ ಪ್ರಸ್ತುತ ಬಜೆಟ್‌ನಲ್ಲಿ ಜನಸಾಮಾನ್ಯ ಕಲ್ಯಾಣ ಯೋಜನೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನೇಕ ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳ ಅನುಷ್ಟಾನ ಕೋವಿಡ್ ಸಾಂಕ್ರಾಮಿಕ ರೋಗದಿಂದ ನಿಗದಿತ ಮಟ್ಟದಲ್ಲಿ ಆಗಿಲ್ಲ. ಡಿಸೆಂಬರ್ ಹಾಗೂ ಜನವರಿ ಮಾಹೆಯಲ್ಲಿ ಸಂಪೂರ್ಣಗೊಳಿಸಲು ಕಾರ್ಯಪ್ರವೃತರಾಗಬೇಕು ಎಂದರು.

ಜಿಲ್ಲೆಯಲ್ಲಿ ಕಳೆದ 4 ತಿಂಗಳಿಂದ ಹೆಚ್ಚಿನ ಮಳೆಯಿಂದಾಗಿ ಉಂಟಾದ ನೆರೆಯಿಂದಾದ ನಷ್ಟದ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಮಳೆಯಿಂದ ಹಾನಿಯುಂಟಾದ ಮನೆಗಳ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಲು ಜನಸಾಮಾನ್ಯರಿಗೆ ಅಗತ್ಯ ನೆರವನ್ನು ಕಲ್ಪಿಸಬೇಕು ಎಂದರು.

ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು, ಶೀಘ್ರದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದರೊಂದಿಗೆ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಬಡ ಜನರಿಗೆ ಉದ್ಯೋಗ ನೀಡುವ ಜೊತೆಗೆ ಶಾಶ್ವತ ಅಭಿವೃದ್ಧಿಗಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕೂಲಿ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಕೂಲಿ ಹಣವನ್ನು ನೀಡಬೇಕು ಎಂದರು.

ಮಹಿಳೆಯರು ಸ್ವ-ಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಲು ಸ್ವ-ಉದ್ಯೋಗ ಯೋಜನೆ ಜಾರಿಗೆ ತರಲಾಗಿದ್ದು, ಇದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದರೊಂದಿಗೆ ಅವರು ಆರ್ಥಿಕರಾಗಿ ಸಬಲರಾಗಬೇಕು. ಇಂತವರ ಯಶೋಗಾಥೆಗಳನ್ನು ಪ್ರಚಾರ ಪಡಿಸಬೇಕು ಎಂದರು.

ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜಾರಿ ಸೇರಿದಂತೆ ಅಂಗನವಾಡಿ ಮಕ್ಕಳಿಗೆ ಹಾಲು ಪೌಡರ್ ವಿತರಣೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಅವೈಜ್ಞಾನಿಕವಾಗಿ ನಿಯಮಗಳನ್ನು ಪಾಲಿಸದೇ ಅಕ್ರಮವಾಗಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇವುಗಳ ಬಗ್ಗೆ ಎಚ್ಚರಿಕೆ ಕ್ರಮ ವಹಿಸಬೇಕೆಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಕಳೆದ ಎರಡು ವರ್ಷದ ಸಾಲಿನಲ್ಲಿ ಮೀನುಗಾರರ ಮಹಿಳೆಯರಿಗೆ ನೀಡಿದ ಅಲ್ಪಾವಧಿ ಸಾಲವನ್ನು ಮನ್ನ ಮಾಡಲು 38 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ 31 ಕೋಟಿ ಮಾತ್ರ 11000 ಜನರ ಖಾತೆಗೆ ಜಮಾ ಆಗಿದೆ. ಬಾಕಿ ಉಳಿದ 4050 ಜನರ ಖಾತೆಗೆ ಆಧಾರ್‌ಲಿಂಕ್ ಆಗದ ಕಾರಣ ಜಮೆಯಾಗಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು ಎಂದರು.

ರಾಜ್ಯ ಮಟ್ಟದಲ್ಲಿ ಜಿಲ್ಲೆಯಲ್ಲಿ ಬರುವ ಮಾಹಿತಿಗಳ ಆಧಾರದ ಮೇಲೆ ಮುಂಬರುವ ಬಜೆಟ್‌ನಲ್ಲಿ ಯೋಜನೆಗಳನ್ನು ತಯಾರಿಸಲಾಗುವುದು. ಇದರ ಹಿನ್ನೆಲೆ ಪ್ರತಿಯೊಂದು ಇಲಾಖೆಯವರು ತಮ್ಮ ಇಲಾಖೆಗಳಲ್ಲಿನ ಯೋಜನೆಗಳ ಮಾಹಿತಿಯನ್ನು ನಿಗಧಿತ ಸಮಯದಲ್ಲಿ ರಾಜ್ಯ ಮಟ್ಟದ ಕಚೇರಿಗಳಿಗೆ ತಲುಪಿಸಬೇಕೆಂದು ಸೂಚನೆ ನೀಡಿದರು.

ವಿಧಾನಸಭಾ ಅಧಿವೇಶನದಲ್ಲಿ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಉತ್ತರವನ್ನು ವಿಳಂಬವಿಲ್ಲದೇ ನಿಖರ ಮಾಹಿತಿಗಳನ್ನು ಕಳುಹಿಸಬೇಕು ಎಂದು ಸೂಚನೆ ನೀಡಿದರು.

ಸಿ.ಆರ್.ಝೆಡ್ ಹಾಗೂ ನಾನ್ ಸಿ.ಆರ್.ಝೆಡ್ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆಯನ್ನು ಕೈಗೊಳ್ಳುತ್ತಿರುವುದು ಸೇರಿದಂತೆ ಮತ್ತಿತರ ಗಣಿಗಾರಿಕೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಸರಕಾರದ ನಿಯಮಾನುಸಾರ ಸಾಂಪ್ರದಾಯಿಕ ಎಲ್ಲಾ ರೀತಿಯ ಗಣಿಗಾರಿಕೆಗೆ ಅವಕಾಶ ಮಾಡಿಕೊಡಬೇಕೆಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಅವಕಾಶಗಳಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಅಭಿವೃದ್ಧಿ ಕಾಮಗಾರಿಗಳನ್ನು ಕಲ್ಪಿಸಬೇಕೆಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

Comments are closed.