ಕರಾವಳಿ

ಶ್ರೀ ಕೃಷ್ಣ ಮಠದ ಮುಖ್ಯ ದ್ವಾರದಲ್ಲಿದ್ದ ಕನ್ನಡ ನಾಮಫಲಕ ತೆರವು: ವ್ಯಾಪಕ ಆಕ್ರೋಷ..!

Pinterest LinkedIn Tumblr

ಉಡುಪಿ: ಕನ್ನಡದ ವಿಚಾರದಲ್ಲಿ ಹಲವಷ್ಟು ಹೋರಾಟಗಳು ನಡೆಯುತ್ತಿರುವ ಬೆನ್ನಲ್ಲೆ ಶ್ರೀಕೃಷ್ಣ ಮಠದ ಮುಖ್ಯದ್ವಾರದಲ್ಲಿ ಈ ಹಿಂದೆ ಕನ್ನಡದಲ್ಲಿದ್ದ ಕೃಷ್ಣ ಮಠ ಎನ್ನುವ ನಾಮಫಲಕ ತೆರವು ಮಾಡಲಾಗಿದ್ದು, ಮಠದ ಈ ಕಾರ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ನಾಮಫಲಕ ತೆರವಾಗಿ ಮೂರ್ನಾಲ್ಕು ದಿನ ಕಳೆದರೂ ಇನ್ನೂ ಮರು ಅಳವಡಿಸದಿರುವುದಕ್ಕೆ ಕನ್ನಡಾಭಿಮಾನಿಗಳು, ಕೃಷ್ಣನ ಭಕ್ತರು ಆಕ್ರೋಶ ಹೊರಹಾಕಿದ್ದಾರೆ‌. ಎರಡು ದಿನದ ಹಿಂದೆ ಕೃಷ್ಣ ಮಠದ ಮುಂಭಾಗ ಇದ್ದ ಕೃಷ್ಣ ಮಠ ಎಂಬ ಕನ್ನಡ ಹಾಗೂ ಆಂಗ್ಲಭಾಷೆಯಲ್ಲಿದ್ದ ನಾಮಫಲಕವನ್ನ ತೆರವು ಮಾಡಿರುವ ಮಠದ ಪರ್ಯಾಯ‌ ಅದಮಾರು‌ ಮಠದ ಆಡಳಿತ ಮಂಡಳಿ, ಇದೀಗ ತುಳು ಹಾಗೂ ಸಂಸ್ಕೃತದಲ್ಲಿ ಶ್ರೀ ಕೃಷ್ಣ ಮಠ, ರಜತಪೀಠ ಪುರಂ  ಎಂಬ ಬರಹವನ್ನ ಮರದಲ್ಲಿ ಕೆತ್ತನೆ ಮಾಡಿ ಮಠದ ಮುಂಭಾಗ ಅಳವಡಿಸಿದೆ. ಕನ್ನಡ ಫಲಕ ತೆರವು ಮಾಡಿದ್ದಕ್ಕೆ  ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ. ಪರ್ಯಾಯ‌ ಶ್ರೀ ಗಳ‌ ಸೂಚನೆ ಮೇಲೆ ಆಡಳಿತ‌ ಮಂಡಳಿ ಮಾಡಿರುವ  ಬದಲಾವಣೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಕ್ರೋಶ ವ್ಯಕ್ತಪಡಿಸಿ,  ಕೃಷ್ಣಮಠದ ಫಲಕ ಬದಲಾವಣೆ ತುಂಬಾ ಬೇಸರದ ಸಂಗತಿ. ಧಾರ್ಮಿಕ ಸಂಸ್ಥೆ ಸಮಾಜಕ್ಕೆ ಬುದ್ಧಿಹೇಳುವ ಸಂಸ್ಥೆಯಾಗಬೇಕು. ಕೃಷ್ಣಮಠದಲ್ಲಿ ಕನ್ನಡವೇ ಕಾಣೆಯಾಗಿದೆ. ಇಷ್ಟರವರೆಗೆ ಕೃಷ್ಣಮಠ ಎಂದು ಕನ್ನಡದಲ್ಲಿ ಬರೆಯಲಾಗಿತ್ತು. ಈಗ ಆ ಫಲಕ ತೆಗೆದು ತುಳುವಿನಲ್ಲಿ ಬರೆಯಲಾಗಿದೆ. ತುಳು ನಮ್ಮ ಸೋದರ ಭಾಷೆ ಒಪ್ಪಿಕೊಳ್ಳುತ್ತೇವೆ. ಆದರೆ ನಾಮಫಲಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ.  ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ.  ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸುತ್ತೇವೆ. ಕನ್ನಡ ಮತ್ತು ತುಳುವಿನ ನಡುವೆ ಕಂದಕ ಏರ್ಪಡಿಸುವ ಕೆಲಸ ಮಾಡಬೇಡಿ ಎಂದು ನೀಲಾವರ ಸುರೇಂದ್ರ ಅಡಿಗ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಪರ್ಯಾಯ ಅದಮಾರು ಮಠದಿಂದ ಸ್ಪಷ್ಟನೆ ನೀಡಿದ್ದು ಕೃಷ್ಣ ಮಠದ ಪುನಶ್ಚೇತನಗೊಳಿಸುವ ಸಂದರ್ಭ ಮಖ್ಯದ್ವಾರದ ಪ್ಲಾಸ್ಟಿಕ್ ಬೋರ್ಡ್ ತೆಗೆಯಲಾಗಿದೆ. ಮರದಲ್ಲಿ ತಯಾರಿಸಿ ಬೋರ್ಡ್ ಅಳವಡಿಸುವ ಯೋಜನೆ ಇದೆ. ದ್ವಾರದ ಮೇಲ್ಬಾಗದಲ್ಲಿ ಕನ್ನಡ ಬೋರ್ಡ್ ಅಳವಡಿಸುತ್ತೇವೆ. ಕೆಳಭಾಗದಲ್ಲಿ ಸಂಸ್ಕೃತ, ತುಳುವಿನಲ್ಲಿ ಬೋರ್ಡ್ ಅಳವಡಿಸಲಾಗುವುದು. ಈ ಬಗ್ಗೆ  ಪರ್ಯಾಯ ಅದಮಾರು ಮಠಾಧೀಶರು ಸೂಚನೆಯನ್ನು ಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

Comments are closed.