ಕರ್ನಾಟಕ

ಮರೆಯಾದ ‘ರವಿ’ : ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಸಂಪಾದಕ ರವಿ ಬೆಳೆಗೆರೆ ವಿಧಿವಶ

Pinterest LinkedIn Tumblr

ಬೆಂಗಳೂರು: ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಟ್ಯಾಬ್ಲಾಯ್ಡ್ ಪತ್ರಿಕೆ ಸಂಸ್ಥಾಪಕ ಹಾಗೂ ಸಂಪಾದಕರಾದ ರವಿ ಬೆಳೆಗೆರೆ (62) ನ.12 ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

1958 ರ ಮಾರ್ಚ್ 15 ರಂದು ಬಳ್ಳಾರಿಯಲ್ಲಿ ಜನಿಸಿದ್ದ ರವಿ ಬೆಳೆಗೆರೆ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ಬಳಿಕ ಆ ವೃತ್ತಿ‌ತೊರೆದು ಪತ್ರಿಕೋದ್ಯಮಕ್ಕೆ ಬಂದಿದ್ದರು. ಕನ್ನಡಪ್ರಭ, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು, ನಂತರ 1995 ರಲ್ಲಿ ಹಾಯ್ ಬೆಂಗಳೂರು ಎನ್ನುವ ತನ್ನದೆ ಆದ ಟಾಬ್ಲಾಯ್ಡ್ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಅಕ್ಷರ ಜಗತ್ತಿನಲ್ಲಿ ತನಿಖಾ ಪತ್ರಿಕೋದ್ಯಮದ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು.

ರವಿ ಬೆಳೆಗೆರೆ ಅವರ ಬಾಟಮ್ ಐಟಮ್, ಖಾಸ್ ಬಾತ್ ಅಂಕಗಳು ಅತ್ಯಂತ ಜನಪ್ರಿಯ. ಹಿಮಾಗ್ನಿ, ನೀನಾ ಪಾಕಿಸ್ತಾನ? ಡಿ ಕಂಪನಿ, ದಂಗೆಯ ದಿನಗಳು, ಭೀಮಾ ತೀರದ ಹಂತಕರು, ರಾಜ್ ಲೀಲಾ ವಿನೋದ್ ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದರು. ಅಲ್ಲದೆ ಒಂದಷ್ಟು ಸಿನೆಮಾಗಳಲ್ಲೂ ನಟಿಸಿದ್ದರು.

ಸುದೀರ್ಘವಾದ ಪತ್ರಿಕೋದ್ಯಮದ ಜರ್ನಿಯಲ್ಲಿ ಅಪಾರ ಸಾಧನೆ ಮಾಡಿದ್ದ ರವಿ ಬೆಳೆಗೆರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ರವಿ ಬೆಳೆಗೆರೆ ಅವರ ಕನಸಿನ ಕೂಸು ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಇಂದು ಬೆಳಿಗ್ಗೆ 9 ರಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Comments are closed.