ಪ್ರಮುಖ ವರದಿಗಳು

ಬಿಹಾರದಲ್ಲಿ ತಲೆಕೆಳಗಾಗಲಿದೆಯೇ ಸಮೀಕ್ಷೆ ಲೆಕ್ಕಾಚಾರ? ಎನ್‌ಡಿಎ ಮೈತ್ರಿಕೂಟ ಮತ್ತೆ ಗದ್ದುಗೆ ಏರಲಿದೆಯೇ?

Pinterest LinkedIn Tumblr

ಪಾಟ್ನಾ/ಮಣಿಪಾಲ: ಬಿಹಾರ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆ ಫಲಿತಾಂಶ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದು, ಎಲ್ಲರು ಗೆಲುವಿನ ನಿರೀಕ್ಷೆ ಇಟ್ಟಿದ್ದ, ಮಹಾಘಟ್ ಬಂಧನ್ ಹಿಂದಿಕ್ಕಿ, ಎನ್ ಡಿ ಎ ಮೈತ್ರಿಕೂಟ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಮೊದಮೊದಲಿಗೆ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಆರ್ ಜೆಡಿ ನೇತೃತ್ವದ ಮಹಾಘಟಬಂಧನ ಕೂಟಕ್ಕೆ ಹಿನ್ನಡೆಯಾಗಿದ್ದು, ಎನ್ ಡಿಎ ಮೈತ್ರಿಕೂಟ ಭಾರೀ ಮುನ್ನಡೆ ಸಾಧಿಸಿದೆ.

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗಾಗಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ಇಂದು ಅಂತಿಮ ಫಲಿತಾಂಶ ಹೊರಬರಲಿದೆ.

ಬಿಹಾರದ 38 ಜಿಲ್ಲೆಗಳಲ್ಲಿ 55 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. 3755 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 30ಕ್ಕೂ ಅಧಿಕ ಸುತ್ತಿನ ಮತ ಎಣಿಕೆಯಾಗಲಿದೆ.

ಭಾರತೀಯ ಜನತಾ ಪಕ್ಷದ ಎನ್ ಡಿಎ ಮೈತ್ರಿಕೂಟ 124 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಆರ್ ಜೆಡಿ ಮಹಾಮೈತ್ರಿಕೂಟ 109 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಪ್ರತಿಕ್ಷಣ ಟ್ರೆಂಡ್ ಬದಲಾಗುತ್ತಿದ್ದು, ರೋಚಕ ಕ್ಲೈಮ್ಯಾಕ್ಸ್ ನಂಥ ಸಾಗುತ್ತಿದೆ. ಆದರೆ, ಎನ್ಡಿಎ ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, ಚಿರಾಗ್ ಅವರ ಎಲ್ ಜೆಪಿ ಬಲ ಕೂಡಾ ಸಿಗುವುದರಿಂದ ಅಂತಿಮ ಫಲಿತಾಂಶದಲ್ಲಿ ಗೆಲುವಿನ ಮುದ್ರೆ ಒತ್ತುವ ಸಾಧ್ಯತೆ ಹೆಚ್ಚಿದೆ.

ಆರ್ ಜೆಡಿ ಮಹಾಮೈತ್ರಿಕೂಟ ಹಾಗೂ ಎನ್ ಡಿಎ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದ್ದು, ಬಿಹಾರದ ಅಧಿಕಾರದ ಗದ್ದುಗೆ ಯಾರಿಗೆ ಎಂಬುದು ಇನ್ನಷ್ಟು ಕುತೂಹಲ ಮೂಡಿಸಿದ್ದು, ಮಧ್ಯಾಹ್ನದೊಳಗೆ ಬಹುತೇಕ ಚಿತ್ರಣ ದೊರೆಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಲೆಕೆಳಗಾಗಲಿದೆಯೇ ಸಮೀಕ್ಷೆ ಲೆಕ್ಕಾಚಾರ?

ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸೀ ವೋಟರ್ ಸೇರಿದಂತೆ ಹಲವು ಸಮೀಕ್ಷೆಗಳು ಆರ್ ಜೆಡಿ ನೇತೃತ್ವದ ಮಹಾಮೈತ್ರಿಕೂಟ ಈ ಬಾರಿ ಬಹುಮತ ಪಡೆಯಲಿದೆ ಎಂದು ತಿಳಿಸಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಎನ್ ಡಿಎ ಮೈತ್ರಿಕೂಟ ಬಹುಮತದದತ್ತ ದಾಪುಗಾಲಿಟ್ಟಿದ್ದು, ಸಮೀಕ್ಷೆ ಲೆಕ್ಕಾಚಾರ ತಲೆಕೆಳಗಾಗಲಿದೆಯೇ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ.

ಬಿಹಾರದಲ್ಲಿ ಈ ಬಾರಿಯೂ ಎನ್ ಡಿಎ ಮೈತ್ರಿಕೂಟ ಮತ್ತೆ ಅಧಿಕಾರದ ಗದ್ದುಗೆ ಏರಲಿದೆಯೇ ಅಥವಾ ಬದಲಾವಣೆಯ ಗಾಳಿ ಬೀಸಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

Comments are closed.