ವಿಶಾಕಪಟ್ಟಣಂ: ಪೊಲೀಸರ ಕಿರುಕುಳಕ್ಕೆ ಬೇಸತ್ತ ಕುಟುಂಬವೊಂದರ ನಾಲ್ವರು ವೀಡಿಯೋವೊಂದನ್ನು ಮಾಡಿ ಆತ್ಮಹತ್ಯೆ ಮಾಡಿದ್ದು, ಈ ಸಂಬಂಧ ಇಬ್ಬರು ಪೊಲೀಸರನ್ನು ಬಂಧಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ನವೆಂಬರ್ 3 ರಂದು ಕರ್ನೂಲ್‍ನ ಪನ್ಯಂ ರೈಲ್ವೆ ನಿಲ್ದಾಣದ ಬಳಿ ಚಲಿಸುತ್ತಿದ್ದ ರೈಲಿಗೆ ಹಾರಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾದ ಶೇಕ್ ಅಬ್ದುಲ್ ಸಲಾಮ್(45), ಪತ್ನಿ ನೂರ್ಜಹಾನ್(43), ಮಗ ದಾದಾ ಖಲಂದರ್ (9), ಮತ್ತು ಮಗಳು ಸಲ್ಮಾ (14) ಎಂದು ಗುರುತಿಸಲಾಗಿದೆ. ಪೊಲೀಸರ ಕಿರುಕುಳ ಆರೋಪದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.
ನಂದ್ಯಾಲ್‍ದ ಆಭರಣದ ಅಂಗಡಿಯೊಂದರಲ್ಲಿ ಶೇಕ್ ಕೆಲಸ ಮಾಡುತ್ತಿದ್ದರು. ಆಭರಣ ಕಳ್ಳತನದ ಆರೋಪವನ್ನು ಹೊರಿಸಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಶೇಕ್ ಅಬ್ದುಲ್ ಸಲಾಮ್‍ನನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಜಾಮೀನು ಪಡೆದುಕೊಂಡು ಬಂದ ಶೇಕ್, ಬಾಡಿಗೆ ಆಟೋ ಒಂದನ್ನು ಓಡಿಸುತ್ತಿದ್ದರು. ಆಭರಣ ಅಂಗಡಿ ಮಾಲೀಕ ಮತ್ತು ಪೊಲೀಸರು ಕಿರುಕುಳ ನೀಡುತ್ತಲೇ ಇದ್ದರು. ಆಭರಣ ಕಳ್ಳತನ ಪ್ರಕರಣದಲ್ಲಿ ಶೇಕ್ ಅವರನ್ನು ಬಂಧಿಸಿ ಅವರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಇದರಿಂದ ಮನನೊಂದಿರುವ ಶೇಕ್ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ.
ನಂದ್ಯಾಲ್ ಐ ಟೌನ್ ಪೊಲೀಸರು ಸುಳ್ಳು ಪ್ರಕರಣ ರೂಪಿಸಿದ್ದಾರೆ. ರಕ್ಷಣೆಗೆ ಯಾರೂ ಬರದ ಕಾರಣ ಜೀವನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳಿ ಕುಟುಂಬ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದೆ. ಕುಟುಂಬದ ಸಾವಿನ ನಂತರ ವಿಡಿಯೋ ವೈರಲ್ ಆಗಿದೆ. ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಮುಖ್ಯ ಪೇದೆಯನ್ನು ಬಂಧಿಸಲಾಗಿದೆ.
ಸರ್ಕಲ್ ಇನ್ಸ್‍ಪೆಕ್ಟರ್ ಸೋಮಶೇಖರ್ ರೆಡ್ಡಿ ಮತ್ತು ಮುಖ್ಯ ಕಾನ್‍ಸ್ಟೆಬಲ್ ಗಂಗಾಧರ್‍ನ್ನು ಭಾನುವಾರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) 323 (ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡುತ್ತದೆ) ಮತ್ತು 324 (ಸ್ವಯಂಪ್ರೇರಣೆಯಿಂದ ಅಪಾಯಕಾರಿ ಶಸ್ತ್ರಾಸ್ತ್ರಾಗಳು ಅಥವಾ ಸಾಧನಗಳಿಂದ ನೋವನ್ನುಂಟುಮಾಡುತ್ತದೆ) ಅಡಿಯಲ್ಲಿ ಬಂಧಿಸಲಾಗಿದೆ.
ಸಮಗ್ರ ತನಿಖೆ ನಡೆಸುವಂತೆ ಆಂಧ್ರಪ್ರದೇಶದ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.