ಕರಾವಳಿ

ಬೈಂದೂರು ಕಲ್ಯಣ್ಕಿ-ಕುಂಜಳ್ಳಿ ಜನರ ಬಹುವರ್ಷದ ಕನಸು ಇದೀಗ ನನಸು: 70 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣ

Pinterest LinkedIn Tumblr

ಕುಂದಾಪುರ: ಹಲವು ವರ್ಷಗಳ ಬೈಂದೂರಿನ ಈ ಭಾಗದ ಜನರ ಕನಸು ಇದೀಗಾ ಈಡೇರಿದೆ. ಮಳೆಗಾಲದಲ್ಲಿನ ಸಂಕಷ್ಟಕ್ಕೆ ಮುಕ್ತಿ ಸಿಕ್ಕಿದೆ. ಮರದ ಕಾಲು ಸಂಕವಿದ್ದ ಜಾಗದಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣಗೊಂಡಿದ್ದು ಜನರ ಓಡಾಟ ಸುಸೂತ್ರವಾಗಿದೆ. ಈ ಬಗ್ಗೆ ಒಂದು ಸ್ಟೋರಿಯಿಲ್ಲಿದೆ.

ಸುಸಜ್ಜಿತ ಸೇತುವೆ ನಿರ್ಮಾಣ….
ಪ್ರತಿ ವರ್ಷ ಮಳೆಗಾಲ ಬಂತೆಂದರೆ ಈ ಭಾಗದ ಜನರು ಅಕ್ಷರಶಃ ದಿಗ್ಭಂಧನಕ್ಕೊಳಗಾಗುತ್ತಿದ್ರು. ಮಳೆಗಾಲದ ಆ ಮೂರು ತಿಂಗಳು ಜೀವಕೈಯಲ್ಲಿ ಹಿಡಿದು ಓಡಾಡಬೇಕಾದ ಅನಿವಾರ್ಯತೆಯಿತ್ತು. ಬೈಂದೂರು ತಾಲೂಕು ಕಲ್ಯಣ್ಕಿ ಕುಂಜಳ್ಳಿ ಜನರ ಬಹುವರ್ಷದ ತಾಪತ್ರಯವಿದುು. ತುಂಬಿ ಹರಿಯುವ ನದಿಗೆ ಅಡ್ಡಲಾಗಿ ಜನರೇ ಮಾಡಿಕೊಳ್ಳುವ ಮರದ ಕಾಲು ಸಂಕ ಪ್ರತಿವರ್ಷ ವರುಣಾರ್ಭಟಕ್ಕೆ ಕೊಚ್ಚಿಹೋಗಿ ಊರಿಗೆ ಊರೇ ಮನೆಯಲ್ಲಿ ಕೂರುತ್ತಿದ್ದ ಕಾಲವಿತ್ತು. ಆದರೆ ಈ ಬಾರಿ ಅದ್ಯಾವುದೇ ಪರಿಸ್ಥಿತಿಯಿಲ್ಲ. ಕಾಲು ಸಂಕ ದಾಟಬೇಕಾದ ಪ್ರಮೇಯವೇ ಇರಲಿಲ್ಲ. ಈ ಬಾರಿ ಮಳೆಗಾಲದಲ್ಲಿ ಜನರಿಗೆ ಸೂಕ್ತ ಸಂಪರ್ಕ ಸೇತುವೆ ನಿರ್ಮಾಣಗೊಂಡಿದ್ದು ಸ್ಥಳಿಯ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬೈಂದೂರು ವಿಧಾನ ಸಭಾಕ್ಷೇತ್ರದ ಯಡ್ತರೆ ಗ್ರಾಮ ಪಂಚಾಯಿತಿ ತೆಕ್ಕೆಯಲ್ಲಿರುವ ಕುಂಜಳ್ಳಿ ಗ್ರಾಮಸ್ಥರು ಸುಸಜ್ಜಿತ ಸೇತುವೆಯಲ್ಲಿ ಸಂಚರಿಸುವಂತಾಗಿದೆ.

(ಸೇತುವೆ ಫೈಲ್ ಫೋಟೋ)

ಶಾಸಕರ ಭರವಸೆ ಈಡೇರಿಕೆ…
ಕಳೆದ ಎರಡು ವರ್ಷದ ಹಿಂದೆ ಮಳೆಗಾಲದಲ್ಲಿ ಕಾಲುಸಂಕ ಕೊಚ್ಚಿಹೋಗಿ ಜನ ದಿಗ್ಬಂಧನಕ್ಕೆ ಒಳಗಾಗಿದ್ದರು. ಬೈಂದೂರು ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಖುದ್ದು ಸ್ಥಳಕ್ಕೆ ದೌಡಾಯಿಸಿ ಜನರ ಸಂಕಷ್ಟ ಕಣ್ನಾರೆ ಕಂಡು ಮರುಗಿದ್ದರು. ಸದ್ಯವೇ ಬಿಜೆಪಿ ಸರಕಾರ ಆಡಳಿತಕ್ಕೆ ಬರಲಿದ್ದು ಆದ್ಯತೆಯ ಮೆರೆಗೆ ಸುಸಜ್ಜಿತ ಸೇತುವೆ ಮಾಡಿಕೊಡುವ ಭರವಸೆ ನೀಡಿದ್ರು. ಅದರಂತೆಯೇ ಬಿಜೆಪಿ ಸರಕಾರ ಬಂದ ತರುವಾಯ ಈ ಸೇತುವೆ ಪ್ರಸ್ತಾವನೆ ಸಲ್ಲಿಸಿ ಟೆಂಡರ್ ಪ್ರಕ್ರಿಯೆ ಪುರ್ಣಗೊಂಡ ಬಳಿಕ ಕಳೆದ ವರ್ಷ ಡಿಸೆಂಬರ್ ತಿಂಗಲಿನಲ್ಲಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆಯೊಂದಿಗೆ ಚಾಲನೆ ನೀಡಲಾಗಿತ್ತು. ಮಳೆಗಾಲಕ್ಕೂ ಮುಂಚೆಯೇ ಸುಸಜ್ಜಿತ ಸೇತುವೆ ಕಾಮಗಾರಿ ನಡೆದು ಈ ವರ್ಷ ಮಳೆಗಾಲದಲ್ಲಿ ನಿರ್ಭಯ ಸಂಚಾರಕ್ಕೆ ಅವಕಾಶ ಕಲಿಸಲಾಗಿದೆ. ಶ್ರೀ ದುರ್ಗಾಪರಮೇಶ್ವರೀ ಕನ್ಸ್’ಸ್ಟ್ರಕ್ಷನ್ ಸಂಸ್ಥೆ ಸೇತುವೆ ನಿರ್ಮಾಣದ ಜವಬ್ದಾರಿ ಹೊತ್ತು ಕಾಮಗಾರಿ ಪೂರ್ಣಗೊಳಿಸಿಕೊಟ್ಟಿದೆ.

ಒಟ್ಟಿನಲ್ಲಿ ಕಲ್ಯಣ್ಕಿ ಜನರ ಬಹುವರ್ಷದ ಕನಸು ಇದೀಗ ನನಸಾಗಿದೆ. ಸುಸಜ್ಜಿತ ಸೇತುವೆ ಜೊತೆಗೆ ಈ ಭಾಗ ರಸ್ತೆ ಸಂಪರ್ಕ ಕಾರ್ಯವೂ ನಡೆಯುತ್ತಿದೆ.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.