ಕರಾವಳಿ

ಉಡುಪಿ ಡಿಸಿ ಜಿ.ಜಗದೀಶ್ ನೇತೃತ್ವ ದಾಳಿ : ಅಕ್ರಮವಾಗಿ ದಾಸ್ತಾನು ಮಾಡಿದ್ದ 600 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ

Pinterest LinkedIn Tumblr

ಉಡುಪಿ: ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮರ್ಗಿ ಎಂಬಲ್ಲಿನ ರೈಸ್ ಮಿಲ್ ಮೇಲೆ , ಸೋಮವಾರ ಮಧ್ಯಾಹ್ನ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಗಳ ತಂಡ ಅನ್ನಭಾಗ್ಯ ಯೋಜನೆಯ ಸುಮಾರು 600 ಕ್ವಿಂಟಾಲ್ ಗೂ ಅಧಿಕ ತೂಕದ ಅಕ್ಕಿಯನ್ನು ವಶಪಡಿಸಿಕೊಂಡಿದೆ.

ಜಿಲ್ಲೆಯಲ್ಲಿ ಅನ್ನಬಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮತ್ತು ದಾಸ್ತಾನು ಮಾಡುತ್ತಿರುವ ಸುಮಾರು ಒಂದು ತಿಂಗಳಿದ ಸತತವಾಗಿ ಮಾಹಿತಿಯನ್ನು ಸಂಗ್ರಹಿಸಿ, ಈ ದಾಳಿಯನ್ನು ನಡೆಸಲಾಗಿದ್ದು, ಅಂದಾಜು 16.5 ಲಕ್ಷ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಈ ಸಂಬಂದ 3 ಲಾರಿ ಚಾಲಕರು ಮತ್ತು ಕ್ಲೀನರ್ ಸೇರಿದಂತೆ, 6 ಲಾರಿ, ಎರಡು 407, ಒಂದು ಟಾಟಾ 909 ಹಾಗೂ ಮಾರುತಿ ಇಕೋ ವಾಹನಗಳನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಜಿಲ್ಲೆಯಲ್ಲಿ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾರಾಟ ಮಾಡುವ ಜಾಲ ಸಕ್ರಿಯವಾಗಿದ್ದು, ಕಳೆದ ತಿಂಗಳು ಕುಂದಾಪುರ ತಾಲೂಕಿನಲ್ಲಿ ಈ ರೀತಿಯ ಜಾಲವನ್ನು ಪತ್ತೆ ಮಾಡಲಾಗಿದೆ, ಜಿಲ್ಲೆಯಲ್ಲಿರುವ ಇಂತಹ ಜಾಲಗಳನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದ್ದು, ಸಾರ್ವಜನಿಕರು ಪಡಿತರ ಅಕ್ಕಿಯ ಅಕ್ರಮ ದಾಸ್ತಾನು, ಸಾಗಾಟ ಕುರಿತು ಮಾಹಿತಿ ಇದ್ದಲ್ಲಿ ಜಿಲ್ಲಾಡಳಿತಕ್ಕೆ ತಿಳಿಸಿದಲ್ಲಿ ಕೂಡಲೇ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಹಾಗೂ ಸಾರ್ವಜನಿಕರೂ ಸಹ ತಮಗೆ ನೀಡಲಾಗುವ ಅಕ್ಕಿಯನ್ನು ಮಾರಾಟ ಮಾಡದೆ, ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ದಾಳಿಯಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕ ಗಜೇಂದ್ರ, ಆಹಾರ ನಿರೀಕ್ಷಕರಾದ ಪಾರ್ವತಿ, ಸುರೇಶ್ ಮತ್ತಿತರರು ಭಾಗವಹಿಸಿದ್ದರು.

Comments are closed.