ಕುಂದಾಪುರ: ಮುಂದಿನ ಐವತ್ತು ವರ್ಷಗಳನ್ನು ಗಮನದಲ್ಲಿಟ್ಟು ಭಕ್ತರ ಮತ್ತು ಅನುಭವಿಗಳ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಗತ್ಪ್ರಸಿದ್ದ ಕ್ಷೇತ್ರವಾದ ಕೊಲ್ಲೂರಿನ ಅಭಿವೃದ್ದಿಗೆ ಏನೆಲ್ಲಾ ಪೂರ್ವಸಿದ್ದತೆಗಳು ಬೇಕು ಎನ್ನುವುದರ ಕುರಿತು ಸಮಗ್ರ ಯೋಜನೆಗಳನ್ನು ರೂಪಿಸಿ ಮುಂದಿನ ಸಭೆಯಲ್ಲಿ ಮಂಡಿಸಬೇಕು ಎಂದು ಆಳಿತಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೊಲ್ಲೂರು ದೇವಳ ಹಾಗೂ ಗ್ರಾಮದ ಸಮಗ್ರ ಜನರಿಗೆ ಅನೂಕೂಲವಾಗುವ ಅಂದಾಜು 33 ಕೋಟಿ ರೂ. ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಆಗುತ್ತಿರುವ ಲೋಪಗಳನ್ನು ಸರಿಪಡಿಸಿ ಇನ್ನೂ 15 ದಿನಗಳ ಒಳಗೆ ಜನರಿಗೆ ನೀರು ನೀಡಲು ಸಂಬಂಧಿತರಿಗೆ ಸೂಚನೆ ನೀಡಲಾಗಿದೆ ರಾಜ್ಯ ಮುಜರಾಯಿ, ಬಂದರು ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಇಲ್ಲಿಗೆ ಸಮೀಪದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕೊಲ್ಲೂರಿನ ಒಳ ಚರಂಡಿ ಯೋಜನೆಯ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರೈಸುವಂತೆ ಹಾಗೂ ಯಾವುದೆ ಲೋಪ–ದೋಷಗಳಿಗೆ ಅವಕಾಶವಾಗದಂತೆ ಶೀಘ್ರವಾಗಿ ಮುಗಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಯೋಜನೆಯ ಹಸ್ತಾಂತರ ಮಾಡಿಕೊಳ್ಳುವ ವೇಳೆ ಯಾವುದೆ ರೀತಿ ಲೋಪ–ದೋಷಗಳು ಇಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡ ಬಳಿಕವೇ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿಗಳ ಸೂಚನೆಯಂತೆ ಕೊಲ್ಲೂರು ಸಮೀಪದ ಹೆಲಿಪ್ಯಾಡ್ ಸರಿಪಡಿಸಲು ಅಗತ್ಯವಾದ ನಕ್ಷೆ, ಏಜೆನ್ಸಿ ಹಾಗೂ ಅನುದಾನಗಳ ಕುರಿತು ಚರ್ಚೆ ನಡೆಸಲಾಗಿದೆ. ಕೊಲ್ಲೂರಿನಲ್ಲಿ 10 ಎಕ್ರೆ ಗೋಮಾಳದಲ್ಲಿ ಗೋ ಶಾಲೆ ತೆರೆಯಲಾಗಿದೆ. ಇಲ್ಲಿ ಈಗಾಗಲೇ 125 ಗೋವುಗಳಿವೆ. ಇಲ್ಲಿ ಯಾರೇ ಆದರೂ ಅನಾಥ ಗೋವುಗಳ ತಂದು ಬಿಡಲು ಅವಕಾಶ ಕಲ್ಪಿಸಲಾಗಿದೆ. ಕೊಲ್ಲೂರಿನ ಭವಿಷ್ಯದ 50 ವರ್ಷಗಳ ಅಭಿವೃದ್ಧಿ ಯೋಜನೆಯನ್ನು ರೂಪಿಸಲು ಮಾಸ್ಟರ್ ಪ್ಲಾನ್ ತಯಾರಿಸಲು ಸೂಚನೆ ನೀಡಲಾಗಿದೆ. ಕಳೆದ ಒಂದು ವರ್ಷದ ಹಿಂದೆ ಮೃತ ಪಟ್ಟ ದೇವಳದ ಆನೆ ಇಂದಿರಾ ಸಾವಿನ ಕುರಿತು ತನಿಖೆ ಮಾಡಿ ವರದಿ ನೀಡುವಂತೆ ಅರಣ್ಯ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗುತ್ತದೆ ಎಂದರು.
ರಾಜ್ಯದ ಮುಜರಾಯಿ ಇಲಾಖೆಯ ಅಧೀನದಲ್ಲಿ ಇರುವ 34,000 ದೇವಸ್ಥಾನಗಳ ಮೂಲ ಆಸ್ತಿಗಳನ್ನು ಖಾಸಗಿಯವರಾಗಲಿ ಅಥವಾ ಯಾರೇ ಉದ್ದಿಮೆದಾರರಾಗಿರಲಿ ಅತಿಕ್ರಮಣ ಮಾಡಿಕೊಂಡಿದ್ದಲ್ಲಿ, ದೇವಸ್ಥಾನದ ಆಸ್ತಿ–ಪಾಸ್ತಿಗಳ ಸಂರಕ್ಷಣೆಗಾಗಿ ಅದರ ಸಮೀಕ್ಷೆ ಮಾಡಬೇಕು ದಾಖಲೀಕರಣ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಇದಾದ ಬಳಿಕ ದೇವಸ್ಥಾನಗಳ ಕಬಳಿಕೆಯಾದ ಭೂಮಿಗಳನ್ನು ತೆರವು ಮಾಡುವ ಕೆಲಸ ಮಾಡಲಾಗುತ್ತದೆ. ಯಾರೇ ಎಷ್ಟೇ ಪ್ರಭಾವಿಗಳ ವಶದಲ್ಲಿ ದೇವಸ್ಥಾನದ ಭೂಮಿಗಳಿದ್ದರೂ, ಅದರ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗಾಗಿ ರಾಜ್ಯ ಹಾಗೂ ಹೊರ ರಾಜ್ಯದಿಂದಲೂ ಅರ್ಜಿಗಳು ಬಂದಿರುವುದರಿಂದ ಪೊಲೀಸ್ ಪರಿಶೀಲನೆ ಹಾಗೂ ಇತರ ಕಾರಣಗಳಿಗಾಗಿ ಒಂದಷ್ಟು ವಿಳಂಭವಾಗಿದೆ. ಆದಷ್ಟು ಶೀಘ್ರದಲ್ಲಿ ದೇವಸ್ಥಾನದ ದೂರಗಾಮಿ ಅಭಿವೃದ್ಧಿ ಯೋಜನೆಗಳ ಚಿಂತನೆ ಇರುವ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಕೊಲ್ಲೂರು ದೇವಸ್ಥಾನದ ನೌಕರರ ವೇತನ ಪರಿಷ್ಕರಣೆ, ಸಿಬ್ಬಂದಿ ಹಾಗೂ ನಿವೃತ್ತಿ ವಿಚಾರಗಳ ಬಗ್ಗೆ ವಿಚಾರ ವಿಮರ್ಶೆ ಮಾಡಲಾಗುತ್ತದೆ. ದೇವಸ್ಥಾನದ ಅಡುಗೆ ಮಾಡುವ ಯಂತ್ರಗಳ ಗುಣಮಟ್ಟ ಸರಿಪಡಿಸಲು ಸೂಚನೆ ನೀಡಲಾಗಿದೆ. ಇದನ್ನು ಸರಿಪಡಿಸದೆ ತಪ್ಪು ಮುಂದುವರೆದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕೊಲ್ಲೂರು ದೇವಸ್ಥಾನದ ವತಿಯಿಂದ ನಡೆದ ಯಾವುದೆ ಕಾಮಗಾರಿಗಳಲ್ಲಿ ಕಳಪೆ ಇದ್ದರೂ ಅದರ ವಿರುದ್ದ ತನಿಖೆ ನಡೆಸಲಾಗುತ್ತದೆ, ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಇಲ್ಲ ಎಂದು ಸ್ವಷ್ಟಪಡಿಸಿದ ಸಚಿವರು ಕೊಲ್ಲೂರಿನಿಂದ ಕೊಡಚಾದ್ರಿಗೆ ನಿರ್ಮಿಸಲು ಉದ್ದೇಶಿಸಿರುವ ’ರೋಪ್ ವೇ’ ನಿರ್ಮಾಣಕ್ಕೆ ದೇವಸ್ಥಾನದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಕೊಲ್ಲೂರು ದೇವಸ್ಥಾನದ ಆಡಳಿತಾಧಿಕಾರಿ, ಕುಂದಾಪುರದ ಉಪ ವಿಭಾಗಾಧಿಕಾರಿ ಕೆ.ರಾಜು, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ, ಬೈಂದೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಮೊದಲಾದವರು ಇದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.