ಗಲ್ಫ್

‘ಕೊರೋನಾ’ ಪ್ರಯಾಣಿಕರನ್ನು ದುಬೈಗೆ ಕರೆದೊಯ್ದಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ; ಅ.2ರವರೆಗೆ ದುಬೈಗೆ ವಿಮಾನ ಹಾರಾಟ ರದ್ದು

Pinterest LinkedIn Tumblr

ನವದೆಹಲಿ: ಕೊರೋನಾ ಸೋಂಕಿಗೊಳಗಾಗಿದ್ದ ಪ್ರಯಾಣಿಕರನ್ನು ಜೈಪುರದಿಂದ ದುಬೈಗೆ ಕರೆತಂದಿದ್ದ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನ ಸಂಚಾರಕ್ಕೆ ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ ನಿಷೇಧ ಹೇರಿದೆ. ಹೀಗಾಗಿ, ಇಂದಿನಿಂದ ಅಕ್ಟೋಬರ್ 2ರವರೆಗೆ ಭಾರತದಿಂದ ದುಬೈಗೆ ಏರ್​ ಇಂಡಿಯಾ ವಿಮಾನಗಳು ಸಂಚರಿಸುವಂತಿಲ್ಲ.

ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ನಿಯಮ ಪ್ರಕಾರ, ಭಾರತದಿಂದ ದುಬೈಗೆ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು ಮೂಲ ಕೊರೋನಾ ನೆಗೆಟಿವ್ ಪ್ರಮಾಣಪತ್ರವನ್ನು ಪ್ರಯಾಣಕ್ಕೆ 96 ಗಂಟೆ ಮೊದಲು ಸಲ್ಲಿಸಬೇಕು. ಆದರೆ ಕಳೆದ ಸೆಪ್ಟೆಂಬರ್ 2ರಂದು ಕೊರೋನಾ ಪಾಸಿಟಿವ್ ಸರ್ಟಿಫಿಕೇಟ್ ಪಡೆದಿದ್ದ ಪ್ರಯಾಣಿಕ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಜೈಪುರ-ದುಬೈ ವಿಮಾನದಲ್ಲಿ ಸೆಪ್ಟೆಂಬರ್ 4ರಂದು ಸಂಚಾರ ನಡೆಸಿದ್ದರು. ಅದಕ್ಕೂ ಮೊದಲು ಕೊರೋನಾ ಪಾಸಿಟಿವ್ ಹೊಂದಿದ್ದ ಮತ್ತೊಬ್ಬ ಪ್ರಯಾಣಿಕ ಕೂಡ ದುಬೈಗೆ ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೊರೋನಾ ತಪಾಸಣೆ ನಡೆಸಬೇಕೆಂದು ಆದೇಶಿಸಲಾಗಿದೆ. ಆದರೂ ಏರ್ ಇಂಡಿಯಾದಲ್ಲಿ ದುಬೈಗೆ ಕೊರೋನಾ ಪಾಸಿಟಿವ್ ಇದ್ದ ಪ್ರಯಾಣಿಕರೊಬ್ಬರನ್ನು ಕರೆತಂದಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದುಬೈ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಸೆಪ್ಟೆಂಬರ್ 4ರಂದು ಜೈಪುರದಿಂದ ದುಬೈಗೆ ಹೊರಟಿದ್ದ ವಿಶೇಷ ವಿಮಾನದಲ್ಲಿ ಕೊರೋನಾ ಪಾಸಿಟಿವ್ ಇದ್ದ ಪ್ರಯಾಣಿಕರೊಬ್ಬರನ್ನು ಕರೆತರಲಾಗಿದೆ. ಆತನಿಗೆ ಸೆಪ್ಟೆಂಬರ್ 2ರಂದೇ ಕೊರೋನಾ ಪಾಸಿಟಿವ್ ಇರುವುದಾಗಿ ವೈದ್ಯಕೀಯ ವರದಿ ನೀಡಲಾಗಿತ್ತು. ಹೀಗಿದ್ದರೂ ಆಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿರಬೇಕಾದ ರೋಗಿಯನ್ನು ವಿಮಾನದಲ್ಲಿ ಕರೆತರಲಾಗಿದೆ ಎಂದು ಆರೋಪಿಸಿ ದುಬೈ ನಾಗರಿಕ ವಿಮಾನಯಾನ ಏರ್ ಇಂಡಿಯಾ ವಿಮಾನ ಸಂಚಾರಕ್ಕೆ ನಿಷೇಧ ಹೇರಿದೆ. ಸೆ. 18ರಿಂದ ಅಕ್ಟೋಬರ್ 2ರವರೆಗೆ ಭಾರತದಿಂದ ದುಬೈಗೆ ಏರ್​ ಇಂಡಿಯಾ ವಿಮಾನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ದುಬೈ ಪ್ರಾಧಿಕಾರ ಈ ರೀತಿ ಏರ್ ಇಂಡಿಯಾ ಮೇಲೆ ನಿಷೇಧ ಹೇರುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಬಾರಿ ಕೂಡ ಇದೇ ರೀತಿ ಕೊರೋನಾ ಪಾಸಿಟಿವ್ ಇರುವ ವ್ಯಕ್ತಿಯನ್ನು ಕರೆತಂದಿದ್ದ ಕಾರಣಕ್ಕೆ ಏರ್ ಇಂಡಿಯಾ ಮೇಲೆ ನಿಷೇಧ ಹೇರಲಾಗಿತ್ತು. ಈ ಬಗ್ಗೆಯೂ ನೋಟಿಸ್​ನಲ್ಲಿ ಪ್ರಸ್ತಾಪಿಸಿರುವ ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ, ‘ಗಂಭೀರವಾದ ಆರೋಗ್ಯ ಸಮಸ್ಯೆಯಿರುವ, ಕೊರೋನಾ ಪಾಸಿಟಿವ್ ಬಂದಿರುವ ರೋಗಿಯನ್ನು ನೀವು ದುಬೈಗೆ ಕರೆತಂದಿದ್ದೀರಿ. ಈ ಬಗ್ಗೆ ಈಗಾಗಲೇ ನಾವು ನಿಮಗೆ ಸೂಚನೆ ನೀಡಿದ್ದೆವು. ಆದರೂ ನೀವು ನಿರ್ಲಕ್ಷ್ಯದಿಂದ ವರ್ತಿಸಿದ್ದೀರಿ. ಇದರಿಂದ ಉಳಿದ ಪ್ರಯಾಣಿಕರ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ’ ಎಂದು ಏರ್ ಇಂಡಿಯಾ ಎಕ್ಸ್​ಪ್ರೆಸ್ ಪ್ರಾದೇಶಿಕ ಮ್ಯಾನೇಜರ್​ಗೆ ದುಬೈ ಪ್ರಾಧಿಕಾರ ಪತ್ರ ಬರೆದಿದೆ.

ಅಷ್ಟೇ ಅಲ್ಲದೆ, ಆ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕರ ವೈದ್ಯಕೀಯ ಚಿಕಿತ್ಸೆ, ಕ್ವಾರಂಟೈನ್ ಖರ್ಚು-ವೆಚ್ಚಗಳನ್ನೆಲ್ಲ ಏರ್ ಇಂಡಿಯಾ ಸಂಸ್ಥೆಯೇ ಭರಿಸಬೇಕೆಂದು ದುಬೈ ವಿಮಾನಯಾನ ಪ್ರಾಧಿಕಾರ ಸೂಚಿಸಿದೆ. ಲಾಕ್​ಡೌನ್ ಬಳಿಕ ವಂದೇ ಭಾರತ್ ಮಿಷನ್​ನಡಿ ಭಾರತದಿಂದ ಅತಿಹೆಚ್ಚು ವಿಮಾನಗಳು ದುಬೈಗೆ ಸಂಚರಿಸುತ್ತಿದ್ದವು. ವಿದೇಶದಿಂದ ಭಾರತಕ್ಕೆ ಮರಳಿದ ಪ್ರಯಾಣಿಕರ ಪ್ರಮಾಣವನ್ನು ಗಮನಿಸಿದರೆ ಬೇರೆಲ್ಲ ದೇಶಗಳಿಗಿಂತ ದುಬೈನಿಂದ ಆಗಮಿಸಿದ ಪ್ರಯಾಣಿಕರೇ ಹೆಚ್ಚಿದ್ದಾರೆ. ಇದೀಗ ಅಕ್ಟೋಬರ್ 2ರವರೆಗೆ ಏರ್ ಇಂಡಿಯಾಗೆ ನಿಷೇಧ ಹೇರಿರುವುದರಿಂದ ಅಲ್ಲಿ ಸಿಲುಕಿರುವ ಸಾಕಷ್ಟು ಜನರಿಗೆ ತೊಂದರೆ ಉಂಟಾಗಲಿದೆ.

Comments are closed.