ಕರಾವಳಿ

ಮಂಗಳೂರಿನ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಛೇರಿ ಗೋವಾ ಸ್ಥಳಾಂತರಕ್ಕೆ ಬ್ರೇಕ್ ಬೀಳಲು ಯಾರು ಕಾರಣ?

Pinterest LinkedIn Tumblr

ಮಂಗಳೂರು : ಮಂಗಳೂರಿನಲ್ಲಿರುವ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಛೇರಿ ಕಚೇರಿಯನ್ನು ನಗರದಿಂದ ಗೋವಾದ ಪಣಜಿಯ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯಲ್ಲಿ ವಿಲೀನಗೊಳಿಸುವ ನಿರ್ಧಾರ ಕೈಬಿಡಲಾಗಿದೆ.

ಕೇಂದ್ರೀಯ ನೇರ ತೆರಿಗೆ ಮಂಡಳಿಯ ನಿರ್ಧಾರದಂತೆ ಕಳೆದ ಎರಡು ದಶಕಗಳಿಗಿಂತ ಹೆಚ್ಚು ಕಾಲ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆದಾಯ ತೆರಿಗೆ ಪ್ರಧಾನ ಆಯುಕ್ತರ (ಆಡಳಿತ) ಕಚೇರಿ ಮಂಗಳೂರಿನಲ್ಲೇ ಮುಂದುವರಿಕೆಯಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.

ಮಂಗಳೂರಿನಕಚೇರಿಯನ್ನು ಗೋವಾದ ಪಣಜಿಯ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯಲ್ಲಿ ವಿಲೀನಗೊಳಿಸುವ ನಿರ್ಧಾರವನ್ನು ಕೈಬಿಡುವಂತೆ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರೊಂದಿಗೆ ತಾನು ವೈಯಕ್ತಿಕವಾಗಿ ಮಾತನಾಡಿದ್ದು, ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆದಾಯ ತೆರಿಗೆ ಪ್ರದಾನ ಆಯುಕ್ತರ ಕಛೇರಿಯನ್ನು ಮಂಗಳೂರಿನಲ್ಲಿಯೇ ಮುಂದುವರೆಸಲು ಕೇಂದ್ರ ಹಣಕಾಸು ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.

ಇದೇ ವೇಳೆ ಕೇಂದ್ರ ಸಚಿವ ಸದಾನಂದ ಗೌಡ ಅವರು, ಮಂಗಳೂರಿನಲ್ಲಿರುವ ಆದಾಯ ತೆರಿಗೆ ಆಯುಕ್ತರ ಕಚೇರಿಯನ್ನು ನಗರದಿಂದ ಯಾವುದೇ ಕಾರಣಕ್ಕೂ ಬೇರೆಡೆ ಸ್ಥಳಾಂತರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಟ್ವೀಟರ್ ಮೂಲಕ ಹೇಳಿಕೆ ನೀಡಿರುವ ಸಚಿವರು, ಆದಾಯ ತೆರಿಗೆ ಆಯುಕ್ತರ ಕಚೇರಿ ಸ್ಥಳಾಂತರ ಪ್ರಸ್ತಾಪ ತನ್ನ ಗಮನಕ್ಕೆ ಬಂದ ತಕ್ಷಣವೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದೇನೆ. ಕಚೇರಿಯನ್ನು ಮಂಗಳೂರಿನಲ್ಲಿಯೇ ಮುಂದುವರಿಸುವ ಅವಶ್ಯ ಕತೆ ಬಗ್ಗೆಯೂ ವಿವರಣೆ ನೀಡಲಾಗಿದೆ. ಈ ಬೇಡಿಕೆಗೆ ಹಣಕಾಸು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಚೇರಿಯು ಬೇರೆಡೆ ಸ್ಥಳಾಂತರ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗೋವಾದ ಕಚೇರಿ ಜೊತೆ ವಿಲೀನಗೊಳಿಸುವ ನಿರ್ಧಾರಕ್ಕೆ ವ್ಯಾಪಕ ವಿರೋಧ :

ಮಂಗಳೂರಿನಲ್ಲಿರುವ ಆದಾಯ ತೆರಿಗೆ ಪ್ರಧಾನ ಕಚೇರಿಯನ್ನು ಗೋವಾ ರಾಜ್ಯಕ್ಕೆ ಶಿಫ್ಟ್ ಮಾಡಲು ಕೇಂದ್ರ ಸರ್ಕಾರ ನಿರ್ಧಾರಿಸಿತ್ತು. ಒಂದು ವೇಳೆ ಪ್ರಧಾನ ಕಚೇರಿಯನ್ನು ಸ್ಥಳಾಂತರಿಸಿದರೆ ಮಂಗಳೂರಿನ ನಾಲ್ಕೂವರೆ ಲಕ್ಷ ತೆರಿಗೆದಾರರು ತೀವ್ರ ಸಂಕಷ್ಟ ಅನುಭವಿಸ ಬೇಕಿತ್ತು.

ಪ್ರಸ್ತುತ ಕರಾವಳಿಯ ತೆರಿಗೆದಾರರು ಆಕ್ಷೇಪಿತ ತೆರಿಗೆ ಪರಿಷ್ಕರಣೆ ಮತ್ತು ಇತರ ತೆರಿಗೆ ಸಂಬಂಧಿ ಕೆಲಸಗಳಿಗಾಗಿ ಈ ಕಚೇರಿಯನ್ನು ಆಶ್ರಯಿಸಿದ್ದಾರೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಈ ಕಚೇರಿ ಒಳಗೊಂಡಿದೆ.

ಕರಾವಳಿಯಲ್ಲಿ ದೊಡ್ಡ ಮಟ್ಟದ ವ್ಯಾಪಾರ ಕೇಂದ್ರಗಳು, ಕೈಗಾರಿಕೆಗಳಿದ್ದು, ದೇಶದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿವೆ. ಬೆಂಗಳೂರಿನ ಅನಂತರ ಉದ್ಯಮ ಸ್ಥಾಪನೆಗೆ ಉತ್ತಮ ವಾತಾವರಣ ಈ ಜಿಲ್ಲೆಗಳು ಹೊಂದಿವೆ. ಜತೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಸುಮಾರು 4 ಲಕ್ಷ ಮಂದಿ ತೆರಿಗೆದಾರರು ವಾರ್ಷಿಕ 3,300 ಕೋ.ರೂ. ತೆರಿಗೆ ಪಾವತಿಸುತ್ತಿದ್ದಾರೆ.

ರಾಜ್ಯದಲ್ಲಿ ತೆರಿಗೆ ಪಾವತಿಯಲ್ಲಿ ಮೊದಲ ಸ್ಥಾನ ಬೆಂಗಳೂರಿಗೆ, ದ್ವಿತೀಯ ಸ್ಥಾನ ಮಂಗಳೂರಿಗಿದ್ದರೆ, ಹುಬ್ಬಳ್ಳಿ ತೃತೀಯ ಸ್ಥಾನದಲ್ಲಿದೆ.

ಸದ್ಯ ಹುಬ್ಬಳ್ಳಿಯ ಕಚೇರಿಯನ್ನು ಕೂಡ ವಿಲೀನ ಮಾಡಲು ಹೊರಟಿದ್ದರು. ಆದ್ರೆ ಹುಬ್ಬಳ್ಳಿ ಸಂಸದ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಅದನ್ನು ಅಲ್ಲೇ ಉಳಿಸಿಕೊಳ್ಳಲಾಗಿದೆ.

ಪ್ರಮುಖ ತೆರಿಗೆಗಳು, ಕುಂದುಕೊರತೆ ಮತ್ತು ಅರ್ಜಿ ವಿಲೇವಾರಿಗಳಾದ 119, 220, 263, 264, ಬಡ್ಡಿ ಮನ್ನಾ, ಟಿಡಿಎಸ್‌ ವಿನಾಯಿತಿ ಪ್ರಮಾಣಪತ್ರ ಗಳಲ್ಲಿ ಪಿಸಿಐಟಿ ಕಚೇರಿ ಮುಖ್ಯ ಪಾತ್ರ ವಹಿಸುತ್ತದೆ. ಕರಾವಳಿಯಲ್ಲಿ ಸಹಕಾರಿ ಮತ್ತು ಶೆಡ್ನೂಲ್ಡ್‌ ಬ್ಯಾಂಕ್‌ಗಳು ಹೆಚ್ಚಿದ್ದು, ಮೌಲ್ಯಮಾಪನದಲ್ಲಿ ತೆರಿಗೆ ಆಕ್ಷೇಪ ಬಂದಾಗ ಪಿಸಿಐಟಿ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಬೃಹತ್‌ ಕೈಗಾರಿಕೆಗಳು, ಉನ್ನತ ಸಂಸ್ಥೆಗಳ ಕಚೇರಿಗಳು ಇಲ್ಲಿದ್ದು, ದೂರದ ಗೋವಾಕ್ಕೆ ಹೋಗುವುದು ಕಷ್ಟಸಾಧ್ಯ.

ಅಲ್ಲದೇ ಈ ಐಟಿ ಸಮಸ್ಯೆಗಳು ಒಂದೇ ಬಾರಿಗೆ ಪರಿಹಾರವಾಗದೆ, ಆಗಾಗ್ಗೆ ಹೋಗುವುದರಿಂದ ಸ್ಥಳೀಯ ತೆರಿಗೆದಾರರ ಸಮಯ ಮತ್ತು ಹಣ ಎರಡೂ ವ್ಯರ್ಥವಾಗಲಿವೆ. ಈ ಹಿನ್ನೆಲೆಯಲ್ಲಿ ಪ್ರಧಾನ ಕಚೇರಿಯಲ್ಲಿ ವಿಲೀನಗೊಳಿಸುವ ನಿರ್ಧಾರ ಕೈಬಿಡಬೇಕು ಎಂದು ಮಂಗಳೂರಿನ ತೆರಿದಾರರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಕೆನರಾ ಚೇಂಬರ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರೀಸ್ ಮಂಗಳೂರು ಹಾಗೂ ನಗರದ ಕೆಲವೊಂದು ಸಂಸ್ಥೆಗಳು ಬೆಂಬಲ ನೀಡಿದ್ದವು

Comments are closed.