ಕರಾವಳಿ

ಮೀನುಗಾರಿಕಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಧ್ಯಯನ/ಸಂಶೋಧನೆ ಅಗತ್ಯ :ಸಂಶೋಧನಾ ಗ್ರಂಥ ಬಿಡುಗಡೆಗೊಳಿಸಿ ಸಚಿವ ಕೋಟ

Pinterest LinkedIn Tumblr

ಮಂಗಳೂರು ಜುಲೈ 04 : ಮಂಗಳೂರಿನ ಮತ್ಸ್ಯನಗರದಲ್ಲಿರುವ ಮೀನುಗಾರಿಕಾ ಕಾಲೇಜು 1969 ರಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿ ಪ್ರಾರಂಭವಾಗಿದ್ದು, 2019 ಕ್ಕೆ 50 ವರ್ಷ ಪೂರೈಸಿದೆ. ಈ ಸುಸಂದರ್ಭದಲ್ಲಿ ಕಾಲೇಜಿನ ವಿಜ್ಞಾನಿಗಳು ಸಂಶೋಧನೆ ಮಾಡಿ ಪ್ರಕಟಿಸಿರುವ ಪ್ರಬಂಧಗಳ ಹೊತ್ತಿಗೆಯನ್ನು ಗ್ರಂಥಗಳ ಮೂಲಕ ಹೊರತಂದಿರುವುದು ಹೆಮ್ಮೆಯ ವಿಷಯ ಎಂದು ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆ ಮಾಡಿ ಹಾರೈಸಿದರು.

ಅವರು ಮೀನುಗಾರಿಕಾ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಸಂಶೋಧನಾ ಗ್ರಂಥ ಬಿಡುಗಡೆ ಮಾತನಾಡುತ್ತಿದ್ದರು,ಮೀನುಗಾರಿಕಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಧ್ಯಯನ ಅರ್ಥಾತ್ ಸಂಶೋಧನೆ ನಡೆಯಬೇಕಿದೆ. ಪಂಜರಗಳಲ್ಲಿ ಮೀನು ಸಾಕಣೆ ಮಾಡಿ ಅಧಿಕ ಇಳುವರಿಯನ್ನು ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಕಾಲೇಜಿನ ವಿಜ್ಞಾನಿಗಳು ಮೀನುಗಾರಿಕೆ ಇಲಾಖೆಯ ಸಹಯೋಗದಿಂದ ಆಧುನಿಕ ತಂತ್ರಜ್ಞಾನಗಳನ್ನಾಧರಿಸಿ ಕೆಲಸ ಮಾಡಬೇಕಿದೆ ಎಂದರು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಇಂತಹ ಕೆಲಸಗಳಿಗೆ ಇಲಾಖೆಯ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದು ಅನಿವಾರ್ಯ ಎಂದರು. ಕರಾವಳಿ ತೀರಪ್ರದೇಶ ಮಾತ್ರವಲ್ಲದೇ, ಹಿನ್ನೀರು ಮತ್ತು ಸಿಹಿನೀರಿನಲ್ಲೂ ಸಹಾ ಮೀನು ಕೃಷಿ ಕೈಗೊಳ್ಳಲು ಅದ್ಯತೆ ನೀಡಬೇಕು ಮತ್ತು ಮೀನಿನ ಸಂತತಿ ಹೆಚ್ಚಿಸವ ಅನಿವಾರ್ಯವಿದೆ ಎಂದು ಅಭಿಪ್ರಾಯಪಟ್ಟರು. ಮೀನಿನ ಮರಿಗಳ ಬೇಡಿಕೆ ಹೆಚ್ಚುತ್ತಿದ್ದು ರೈತರ ಬೇಡಿಕೆಗಳಿಗೆ ಕಾಲೇಜಿನ ಪಾಧ್ಯಾಪಕ ವೃಂದದವರು ಶ್ರಮಿಸಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್, ಸಮುದ್ರ ಕಳೆ (ಸೀ ವೀಡ್) ಬೆಳೆಯುವ ತಂತ್ರಜ್ಞಾನವನ್ನು ಅಳವಡಿಸುವುದು ಅನಿವಾರ್ಯವಾಗಿರುತ್ತದೆ ಎಂದರು. ಈ ಸೀ ವೀಡ್ ಎಂಬದು ಸಮುದ್ರದಲ್ಲಿ ಬೆಳೆಯುವ ತರಕಾರಿ ಸೊಪ್ಪು ಮತ್ತು ಇದು ಆಹಾರ ಸೇವನೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಇದನ್ನು ಔಷದ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇಂತಹ ಜಲ ಸಸ್ಯಗಳನ್ನು ಬೆಳೆಸುವುದರಿಂದ ಕರಾವಳಿ ತೀರಪ್ರದೇಶದಲ್ಲಿ ವಾಸಿಸುವ ಮೀನುಗಾರರಿಗೆ ಒಂದು ಉಪ ಕಸುಬಾಗಿ ಲಾಭದಾಯಕ ಉದ್ಯಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಬಿಪ್ರಾಯ ಪಟ್ಟರು.

ಕಾಲೇಜಿನ ಡೀನ್ ಡಾ. ಎ. ಸೆಂಥಿಲ್ ವೇಲ್, ಪ್ರಾಸ್ತಾವಿಕ ನುಡಿದು ಮೀನುಗಾರಿಕಾ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಮುದ್ರಿಸಲ್ಪಟ್ಟ ಸಂಶೋಧನಾ ಗ್ರಂಥವು ವಿಜ್ಞಾನಿಗಳಿಗೆ ಉಪಯೋಗವಾಗಲಿದೆ ಎಂದು ಹೇಳಿದರು.

ಅತಿಥಿಗಳನ್ನು ಸ್ವಾಗತಿಸಿ ನಿರೂಪಣೆ ಮಾಡಿದ ಕಾಲೇಜಿನ ಜಲಪರಿಸರ ವಿಭಾಗದ ಪೆÇ್ರಫೆಸರ್ ಡಾ. ಎ.ಟಿ. ರಾಮಚಂದ್ರ ನಾಯ್ಕ ಮಾತನಾಡಿ, ಐದು ವರ್ಷಗಳ ಸಂಶೋಧನಾ ಪರಿಶ್ರಮದ ಸಾರಾಂಶದ ಈ ಗ್ರಂಥವು ವಿಶ್ವದಾದ್ಯಂತ ಇರುವ ಮೀನುಗಾರಿಕಾ ಸಂಶೋಧಕರಿಗೆ ನೇರವಾಗಲಿದೆ ಎಂದರು. ಪಂಚ ವಾರ್ಷಿಕ ಮುದ್ರಣದ ಈ ಹೊತ್ತಿಗೆಯು ಮೀನುಗಾರಿಕಾ ಕ್ಷೇತ್ರದಲ್ಲಿ ವಿವಿಧ ವಿಷಯಗಳ ಅರಿವಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ್, ಉಪಮೇಯರ್ ವೇದಾವತಿ, ಹೊಯಿಗೆಬಝಾರ್ ವಾರ್ಡ್ ಕಾಪೆರ್Çೀರೇಟರ್ ರೇವತಿ ಶ್ಯಾಮಸುಂದರ್ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಝೀರ್ ಉಪಸ್ಥಿತರಿದ್ದರು.

ಮೀನುಗಾರಿಕಾ ಕಾಲೇಜಿನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಕುಮಾರನಾಯ್ಕ ಎ,ಎಸ್. ವಂದಿಸಿದರು.

Comments are closed.