ಕರಾವಳಿ

ಕೋರೋನಾ ಪರಿಹಾರಧನಕ್ಕೆ ಆಗ್ರಹಿಸಿ ಕಾರ್ಮಿಕ ವರ್ಗದ ನೇತ್ರತ್ವದಲ್ಲಿ ಪ್ರತಿಭಟನೆ

Pinterest LinkedIn Tumblr

ಮಂಗಳೂರು : ಕೋರೋನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು,ಈ ಸಂಧರ್ಭದಲ್ಲಿ ಎಲ್ಲಾ ವಿಭಾಗದ ಕಾರ್ಮಿಕರಿಗೆ ಕೋರೋನಾ ಪರಿಹಾರಧನವನ್ನು ಒದಗಿಸಬೇಕೆಂದು ಕೇಂದ್ರ ಕಾರ್ಮಿಕ ಸಂಘಟನೆಗಳ ನೇತ್ರತ್ವದಲ್ಲಿ ಶುಕ್ರವಾರ ದೇಶಾದ್ಯಂತ ಪ್ರತಿಭಟನಾ ದಿನವನ್ನಾಗಿ ಆಚರಿಸಬೇಕೆಂಬ ಕರೆಯ ಮೇರೆಗೆ ಮಂಗಳೂರಿನಲ್ಲಿ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.

ಕಾರ್ಮಿಕ ಕಾನೂನುಗಳ ತಿದ್ದುಪಡಿಯ ವಿರುದ್ದ, ಲಾಕ್ ಡೌನ್ ಸಂಧರ್ಭದ ವೇತನವನ್ನು ಪಾತಿಸಬೇಕು,ಉದ್ಯೋಗದ ಭದ್ರತೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆ ಗಳ ನೇತ್ರತ್ವದಲ್ಲಿ ದೇಶಾದ್ಯಂತ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು, ದೇಶದ ಅಧಿಕಾರದ ಚುಕ್ಕಾಣೆ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಸರಕಾರವು ಕಳೆದ 6 ವರ್ಷಗಳಲ್ಲಿ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡಿದ್ದರ ಪರಿಣಾಮವಾಗಿ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಗಂಭೀರ ಹಂತಕ್ಕೆ ತಲುಪಿತ್ತು.ಈಗ ಮಹಾಮಾರಿ ಕೋರೋನಾದಿಂದಾಗಿ ಆರ್ಥಿಕತೆ ಮತ್ತಷ್ಟು ಪಾತಾಳಕ್ಕೆ ಕುಸಿದಿದೆ.ಇವೆಲ್ಲದರ ನೇರ ಪರಿಣಾಮ ದೇಶದ ಕಾರ್ಮಿಕ ವರ್ಗದ ಮೇಲಾಗಿದ್ದು,ಬದುಕು ಸಾಗಿಸಲಾರದಂತಹ ದುಸ್ಥಿತಿ ಬಂದೊದಗಿದೆ.ವಲಸೆ ಕಾರ್ಮಿಕರ ಬವಣೆಯಂತೂ ಹ್ರದಯವಿದ್ರಾವಕವಾಗಿದ್ದು, ಇಡೀ ಜಗತ್ತಿನ ಮುಂದೆ ತಲೆ ತಗ್ಗಿಸುವಂತಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ AITUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾವ್ ರವರು,ಲಾಕ್ ಡೌನ್ ಸಂಧರ್ಭದಲ್ಲಿ ದೇಶದ ಜನತೆ ತೀರಾ ಸಂಕಷ್ಟದಲ್ಲಿದ್ದರೂ,ಇದೇ ಸಮಯವನ್ನು ಬಳಸಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಮಾಲಕ ವರ್ಗದ ಅಡಿಯಾಳಾಗಿ ವರ್ತಿಸಿರುವುದು ಖಂಡನೀಯ.ಲಾಕ್ ಡೌನ್ ಸಂಧರ್ಭದ ವೇತನವನ್ನು ಕಾರ್ಮಿಕರಿಗೆ ಪಾವತಿಸಬೇಕೆಂದು ಬಡಾಯಿ ಕೊಚ್ಚಿಕೊಂಡ ಪ್ರಧಾನಿಯವರು ಮರುದಿನವೇ ವೇತನವನ್ನು ಪಾವತಿಸಬೇಕಾಗಿಲ್ಲ ಎಂದು ತಮ್ಮ ಹೇಳಿಕೆಯನ್ನು ಬದಲಾಯಿಸುವ ಮೂಲಕ ಕೇಂದ್ರ ಸರಕಾರವು ತಾನು ಉಳ್ಳವರ ಪರವಾಗಿರುವುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.

INTUC ದ.ಕ‌.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿಯವರು ಮಾತನಾಡುತ್ತಾ, ಕೋರೋನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು,ಗುತ್ತಿಗೆ ಆಧಾರಿತ ಆರೋಗ್ಯ ಸಿಬ್ಬಂದಿಗಳನ್ನು ಖಾಯಂಗೊಳಿಸುವ ಮೂಲಕ,ಅವರ ಬದುಕನ್ನು ರಕ್ಷಿಸಬೇಕು.ಎಲ್ಲಾ ಕಾರ್ಮಿಕರಿಗೆ ಮಾಸಿಕ ರೂ.7500/ ಹಾಗೂ 10kg ಆಹಾರಧಾನ್ಯಗಳನ್ನು ಮುಂದಿನ 6 ತಿಂಗಳವರೆಗೆ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ CITU ಜಿಲ್ಲಾ ನಾಯಕರಾದ ಸುನಿಲ್ ಕುಮಾರ್ ಬಜಾಲ್,ಜಯಂತಿ ಬಿ‌.ಶೆಟ್ಟಿ, ಭಾರತಿ ಬೋಳಾರ, ಬಿ.ಕೆ.ಇಮ್ತಿಯಾಜ್, ಸಂತೋಷ್ ಆರ್.ಎಸ್, ಅಶೋಕ್ ಸಾಲ್ಯಾನ್,AITUC ಜಿಲ್ಲಾ ನಾಯಕರಾದ ವಿ.ಕುಕ್ಯಾನ್,ಕರುಣಾಕರ್, ಪುಷ್ಪಾರಾಜ್,ಪ್ರವೀಣ್ ಕುಮಾರ್,INTUC ಜಿಲ್ಲಾ ಮುಖಂಡರಾದ ಉಮೇಶ್ ಕೋಟ್ಯಾನ್, ಹನುಮಂತ, ಮಹೇಶ್,ಸಾಹೇಬ್ ಜಾನ್,AICCTU ಮುಖಂಡರಾದ ಭರತ್, ಮೋಹನ್, ಬಿಸಿಯೂಟ ನೌಕರರ ಮುಖಂಡರಾದ ಭವ್ಯಾ,ರೇಖಾಲತಾ,ಕಸ್ತೂರಿ, ಚಂಚಲಾಕ್ಷಿ,ಸಬೀನಾ,ರೇಷ್ಮಾ ಶಶಿಕಲಾ ಮುಂತಾದವರು ಹಾಜರಿದ್ದರು.

Comments are closed.