ಕರಾವಳಿ

ಆರ್ಥಿಕ ಪ್ಯಾಕೇಜ್‌ನಿಂದ ಸಮರ್ಥ ಭಾರತ ನಿರ್ಮಾಣ : ಸಂಸದ ನಳಿನ್‌ಕುಮಾರ್ ಕಟೀಲ್

Pinterest LinkedIn Tumblr

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿ ರೂ. ಮೊತ್ತದ ಆರ್ಥಿಕ ಪ್ಯಾಕೇಜನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐದು ಹಂತದಲ್ಲಿ ವಿಂಗಡಿಸಿ ವಿವಿಧ ವಲಯಗಳಿಗೆ ಹಂಚಿಕೆ ಮಾಡಿದ್ದಾರೆ. ದೇಶದ ಎಲ್ಲ ವರ್ಗದ ಜನತೆಯನ್ನು ಒಳಗೊಂಡ ಸಮರ್ಥ ಭಾರತದ ನಿರ್ಮಾಣ ಈ ಆರ್ಥಿಕ ಪ್ಯಾಕೇಜ್‌ನಲ್ಲಿ ಅಡಕವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಆತ್ಮ ನಿರ್ಭರ ಭಾರತದ ನಿರ್ಮಾಣಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಆದ್ಯತೆ ನೀಡಿದ್ದಾರೆ. ಕೇಂದ್ರ ಸರ್ಕಾರ ರೂಪಿಸಿದ ಯೋಜನೆಗಳನ್ನು ಸದ್ಬಳಕೆ ಮಾಡಿದರೆ ಸ್ಥಳೀಯ ಸಂಪನ್ಮೂಲ ಬಳಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ನಿರ್ಮಿಸುವ ಉದ್ದೇಶ ಸಫಲವಾಗಲಿದೆ.

ದೇಶದ ಆರ್ಥಿಕತೆಗೆ ಒತ್ತು ನೀಡಿ ರೈತರು, ಕಾರ್ಮಿಕರು, ಸಣ್ಣ ಉದ್ದಿಮೆದಾರರು, ಉದ್ಯೋಗಿಗಳು, ಕೈಗಾರಿಕೋದ್ಯಮಿಗಳನ್ನು ಒಳಗೊಂಡಂತೆ ಎಲ್ಲ ವರ್ಗದವರನ್ನು ಗಮನದಲ್ಲಿರಿಸಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಲಾಕ್‌ಡೌನ್ ಸಂದರ್ಭ ಸಂಕಷ್ಟಕ್ಕೆ ಒಳಗಾದವರು ಚೇತರಿಸಿಕೊಳ್ಳಲು ಈ ಪ್ಯಾಕೇಜ್ ವರದಾನವಾಗಲಿದೆ. ಕೃಷಿ, ಮೀನುಗಾರಿಕೆ, ದವಸ ಧಾನ್ಯಗಳ ಮಾರುಕಟ್ಟೆಗೆ ಉತ್ತೇಜನ , ಗುಡಿ ಕೈಗಾರಿಕೆಗಳ ಬೆಳವಣಿಗೆಗೆ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೆ ಅಗತ್ಯ ನೆರವು ಘೋಷಿಸಿದ ನಿರ್ಮಲಾ ಸೀತಾರಾಮನ್ ಅವರರಿಗೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಸಂಸದ ನಳಿನ್‌ಕುಮಾರ್ ತಿಳಿಸಿದ್ದಾರೆ.

Comments are closed.