ಕರಾವಳಿ

ಲಾಕ್‌ಡೌನ್ ರಿಲೀಫ್ ಬಳಿಕ ಕುಂದಾಪುರದಿಂದ ಬೆಂಗಳೂರಿಗೆ ಹೊರಟಿತು KSRTC ಬಸ್

Pinterest LinkedIn Tumblr

ಕುಂದಾಪುರ: ಲಾಕ್ ಡೌನ್ ದಿನದಿಂದಲೂ ಸರಕಾರಿ ಹಾಗೂ ಖಾಸಗಿ ಬಸ್ಸುಗಳು ಅಂತರ್ ಜಿಲ್ಲಾ ಪ್ರಯಾಣಕ್ಕೆ ಸರಕಾರ ಕಡಿವಾಣ ಹಕಿದ್ದು ನಾಲ್ಕನೇ ಹಂತದ ಲಾಕ್ ಡೌನ್ ವಿಸ್ತರಣೆ ವೇಳೆ ಕೆಳವೊಂದು ರಿಯಾಯಿತಿ ನೀಡಿದ್ದು ಅದರಲ್ಲಿ ಸರಕಾರಿ ಬಸ್ಸುಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಮಂಗಳವಾರ ಕುಂದಾಪುರದಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಪ್ರಯಾಣ ಬೆಳೆಸಿದೆ. ಮಂಗಳವಾರ ಬೆಳಿಗ್ಗೆ ಕುಂದಾಪುರ ಸರಕಾರಿ ಬಸ್ ನಿಲ್ದಾಣದಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಬಸ್ಸುಗಳು ತೆರಳಿದೆ.

ಕುಂದಾಪುರ TO ಬೆಂಗಳೂರು..
ಅಂದಾಜು 55 ದಿನಗಳಿಂದ ಬಸ್ ಸಂಚಾರವಿರಲಿಲ್ಲ. ಬೇರೆಬೇರೆ ಕಾರಣಗಳಿಂದ ಬೆಂಗಳುರಿನಿಂದ ಊರಿಗೆ ಬಂದ ಕುಂದಾಪುರ, ಬೈಂದೂರು ಭಾಗದ ಹಲವು ಮಂದಿಗೆ ಬೆಂಗಳುರು ತೆರಳಬೇಕಿದ್ದರೂ ಕೂಡ ಪ್ರಯಾಣ ಅಸಾಧ್ಯವಾಗಿತ್ತು. ಅಲ್ಲದೇ ಲಾಕ್ ಡೌನ್ ಸಡಿಲಿಕೆ ಬಳಿಕ ಕೆಲವು ಕಂಪೆನಿಗಳು, ಉದ್ಯಮಗಳು ಆರಂಭವಾಗಿರುವ ಹಿನ್ನೆಲೆ ಆಯಾ ಸಂಸ್ಥೆಗಳ ಸಿಬ್ಬಂದಿಗಳಿಗೆ ತಕ್ಷಣ ಕೆಲಸಕ್ಕೆ ಹಾಜಾರಾಗಲು ಸೂಚನೆ ನೀಡಿದ್ದು ಈ ಹಿನ್ನೆಲೆ ಊರಿನಲ್ಲಿದ್ದ ಮಂದಿಗೆ ಬೆಂಗಳೂರಿಗೆ ತೆರಳುವುದು ಅನಿವಾರ್ಯವಾಗಿತ್ತು. ಆದ್ದರಿಂದಲೇ ಬಸ್ ಆರಂಭಕ್ಕೆ ಕಾಯುತ್ತಿದ್ದು ನಿನ್ನೆ ಹೊಸ ಮಾರ್ಗಸೂಚಿ ಬರುತ್ತಿದ್ದಂತೆಯೇ ಆನ್ ಲೈನ್ ಮೂಲಕ ಟಿಕೇಟ್ ಬುಕ್ಕಿಂಗ್ ಮಾಡಿದ್ದರು. ಬೆಳಿಗ್ಗೆಯೇ ಬಸ್ಸು ನಿಲ್ದಾಣಕ್ಕೆ ಬಂದು ಬಸ್ಸು ಹಿಡಿದು ರಾಜಧಾನಿಯತ್ತ ಹೊರಟಿದ್ದಾರೆ.

ಪ್ರಯಾಣಿಕರಿಗೆ ಷರತ್ತುಗಳೇನು?
ಬಸ್ ಏರುವ ಪ್ರಯಾಣಿಕರ ಎಲ್ಲಾ ದಾಖಲೆಗಳನ್ನು ಕಲೆಹಾಕಲಾಗುತ್ತದೆ. ಬಳಿಕ ಥರ್ಮಲ್ ಸ್ಕ್ಯಾನರ್ ಮೂಲಕ ದೇಹದ ಉಷ್ಣತೆ ಪರೀಕ್ಷೆ ಮಾಡಲಾಗಿತ್ತು. ಅಂತರ ಕಾಯ್ದುಕೊಳ್ಳುವಿಕೆ ಅನಿವಾರ್ಯ. ಅಲ್ಲದೇ ಬಸ್ ಹತ್ತುವ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯವಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ ತನಕ ಮಾತ್ರವೇ ಸಂಚಾರಕ್ಕೆ ಅವಕಾಶವಿರುವ ಹಿನ್ನೆಲೆ ನಿಗದಿತ ಸಮಯಕ್ಕೆ ನಿಲ್ದಾಣ ತಲುಪಬೇಕಿದೆ. ಕಂಟೇನ್ಮೆಂಟ್ ಝೋನ್ ಹೊರತು ಪಡಿಸಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಬಸ್ಸು ಸಂಚಾರಕ್ಕೆ ಸರಕಾರ ಅವಕಾಶ ಕಲ್ಪಿಸಿದೆ. ಒಂದು ನಿರ್ದಿಷ್ಟ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡ ಮೇಲೆ ಮತ್ತೆ ಅಲ್ಲಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತಿಲ್ಲ. ಯಾವುದಾದರೊಂದು ಮುಖ್ಯ ಸ್ಥಳದಲ್ಲಿ ಪ್ರಯಾಣಿಕರನ್ನು ಹತ್ತಿಸಬೇಕಾದ ಅನಿವಾರ್ಯತೆಯಿದ್ದಲ್ಲಿ ಅಲ್ಲಿನ ಬಸ್ ನಿಲ್ದಾಣದಲ್ಲಿ ಎಲ್ಲಾ ತಪಾಸಣೆ ಬಳಿಕವೇ ಹತ್ತಿಸಿಕೊಳ್ಳಬೇಕು.

ಬಹುತೇಕ ಎಲ್ಲಾ ಬಸ್ಸುಗಳಲ್ಲಿ ಪ್ರಯಾಣಿಕರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿಲ್ಲ ಎನ್ನುವ ದೂರುಗಳು ಕೇಳಿಬಂದಿದ್ದು ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.