ಆರೋಗ್ಯ

ಕ್ವಾರಂಟೇನ್‌ನಲ್ಲಿರುವವರು ಹೊರಗಡೆ ಬಂದು ಓಡಾಡಿದರೆ ಕ್ರಿಮಿನಲ್ ಕೇಸು: ಜಿಲ್ಲಾಧಿಕಾರಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ಹೊರದೇಶ ಮತ್ತು ರಾಜ್ಯದಿಂದ ಉಡುಪಿ ಜಿಲ್ಲೆಗೆ ಬಂದು ಸರಕಾರಿ ಹಾಗೂ ಹೊಟೇಲ್ ಕ್ವಾರಂಟೇನ್‌ನಲ್ಲಿರುವವರು ಹೊರಗಡೆ ಬಂದು ಓಡಾಡಿದರೆ ಅವರ ವಿರುದ್ಧ ಜಿಲ್ಲಾಡಳಿತ ಯಾವುದೇ ಮುಲಾಜಿಲ್ಲದೆ ಸೆಕ್ಷನ್ 188 ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ವಿದೇಶ ಮತ್ತು ಹೊರರಾಜ್ಯದಿಂದ ಸುಮಾರು 6000 ಮಂದಿ ಉಡುಪಿ ಜಿಲ್ಲೆಗೆ ಆಗಮಿಸಿದ್ದು, ಅವರನ್ನೆಲ್ಲ ಹೊಟೇಲ್ ಮತ್ತು ಸರಕಾರಿ ಸಾಂಸ್ಥಿಕ ಕ್ವಾರಂಟೇನ್ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ಇದೀಗ ಇವರಲ್ಲಿ ಕೆಲವರು ಕ್ವಾರಂಟೇನ್ ಕೇಂದ್ರದಿಂದ ಹೊರಗಡೆ ಬಂದು ಓಡಾಡುತ್ತಿರುವುದಾಗಿ ದೂರುಗಳು ಕೇಳಿಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಕ್ವಾರಂಟೇನ್‌ನಲ್ಲಿರುವವರು ಹೊರಗಡೆ ಬಂದು ಜನರ ಸಂಪರ್ಕ ಮಾಡುವುದು ಮತ್ತು ಓಡಾಡುವುದು ಎಪಿಡೆಮಿಕ್ ಡಿಸೀಸ್ ರೆಗ್ಯುಲೇಷನ್ ಆ್ಯಕ್ಟ್ಗೆ ವಿರುದ್ಧವಾಗಿರುತ್ತದೆ. ಆದುದರಿಂದ ಎಲ್ಲರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಈಗಾಗಲೇ ಕ್ವಾರಂಟೇನ್‌ನಲ್ಲಿರುವವರು ಅದರ ಸದುಪಯೋಗ ಮಾಡಿಕೊಳ್ಳಬೇಕು. ಯಾರಿಗೂ ಕೂಡ ನಿಮ್ಮಿಂದ ಕಾಯಿಲೆ ಹರಡಬಾರದು ಎಂಬ ಉದ್ದೇಶ ಜಿಲ್ಲಾಡಳಿತದ್ದಾಗಿದೆ. ಇದನ್ನು ಎಲ್ಲರು ಅರ್ಥ ಮಾಡಿಕೊಂಡು, ಆದೇಶವನ್ನು ತಪ್ಪದೇ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Comments are closed.