ಕರಾವಳಿ

ನಿಷ್ಠೆ ಮತ್ತು ಜ್ಞಾನದ ಜತೆಗೆ ರಾಷ್ಟ್ರ ನಿರ್ಮಾಣ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರಿ : ಮಂಗಳೂರು ವಿಶ್ವವಿದ್ಯಾ ಸಂವಾದದಲ್ಲಿ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ

Pinterest LinkedIn Tumblr

ಮಂಗಳೂರು: ಸಮಸ್ತ ಭಾರತೀಯ ವಿದ್ಯೆ- ಕಲೆಗಳ ಸಂರಕ್ಷಣೆ- ಸಂವರ್ಧನೆ- ಸಂಶೋಧನೆ ಮತ್ತು ಸಂಯೋಜನೆಯ ಮೂಲಕ ದೇಶಭಕ್ತ, ಧರ್ಮನಿಷ್ಠ, ಸಂಸ್ಕೃತಿ ಪ್ರೇಮಿ, ವಿಶ್ವಹಿತೈಷಿ ಸತ್ಪ್ರಜೆಗಳ ನಿರ್ಮಾಣದ ಮಹದುದ್ದೇಶದಿಂದ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸ್ಥಾಪಿಸಲಾಗುತ್ತಿದೆ. ಇದು ಇತರ ವಿಶ್ವವಿದ್ಯಾಲಯಗಳಂತಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ದರ ಭಾರತೀ ಸ್ವಾಮೀಜಿ ಹೇಳಿದರು.

ಮಂಗಳೂರಿನ ಪುರಭವನದಲ್ಲಿ ಭಾನುವಾರ ಆಯೋಜಿಸಲಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತ ಬೃಹತ್ ಸಂವಾದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಅವರು ಈ ವಿಷಯ ತಿಳಿಸಿದರು.

ಸಾಮಾನ್ಯ ವಿಶ್ವವಿದ್ಯಾಲಯಗಳು ತಲೆಮಾರಿಗೆ ಸಾವಿರಾರು ಹುಟ್ಟಿಕೊಳ್ಳುತ್ತವೆ. ಆದರೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸಾವಿರಾರು ತಲೆಮಾರಿಗೆ ಒಂದು ಹುಟ್ಟಿಕೊಳ್ಳುತ್ತದೆ. ಎಲ್ಲ ರೀತಿಯಿಂದಲೂ ಭಿನ್ನವಾದ, ವಿಶಿಷ್ಟವಾದ ಮಹಾಸಂಸ್ಥೆಯನ್ನು ನಿರ್ಮಿಸುವ ಗುರಿಯಿದೆ. ತಕ್ಷಶಿಲೆಯ ಮಾದರಿಯ ವಿಶ್ವವಿದ್ಯಾಲಯ ಇದಾಗಲಿದೆ ಎಂದು ಶ್ರೀಗಳು ಹೇಳಿದರು.

ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ದೇಶಕಟ್ಟುವ ಮತ್ತು ಶಿಕ್ಷಣದಲ್ಲಿ ಭಾರತೀಯತೆಯನ್ನು ಅಳವಡಿಸುವ ಕಾಯಕ ಮಾಡಲಿದೆ. ಪ್ರಸ್ತುತ ಭಾರತದಲ್ಲಿ ಪಾಶ್ಚಾತ್ಯ ಪ್ರೇರಿತ ಶಿಕ್ಷಣ ವ್ಯವಸ್ಥೆಯೇನೋ ಬೆಳೆದಿದೆ; ಆದರೆ ಶಿಕ್ಷಣದಲ್ಲಿ ಭಾರತೀಯತೆ ಬೆಳೆದಿಲ್ಲ; ಪ್ರಾಥಮಿಕ ಶಿಕ್ಷಣದಲ್ಲಿ ಅಷ್ಟೋ ಇಷ್ಟೋ ಭಾರತೀಯತೆಯ ಲಕ್ಷಣಗಳು ಇದ್ದರೂ ಉನ್ನತ ಹಂತಕ್ಕೆ ಹೋದಂತೆ ಭಾರತೀಯತೆಯ ಸುಳಿವೇ ಇಲ್ಲದಂತಾಗಿದೆ. ಈ ಪದ್ಧತಿಯನ್ನು ಬದಲಾಯಿಸಿ ಶಿಕ್ಷಣದಲ್ಲಿ ಭಾರತೀಯತೆಯನ್ನು ಅಳವಡಿಸುವ ಮೂಲಕ ಸದೃಢ ಭಾರತ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಅವರು ವಿವರಿಸಿದರು.

ತಕ್ಷಶಿಲಾ ಮಾದರಿ ವಿವಿ:  ತಕ್ಷಶಿಲೆ ಎನ್ನುವುದು ಭಾರತದ ಅತೀ ಪ್ರಾಚೀನ ಹಿಂದೂ ವಿಶ್ವವಿದ್ಯಾಲಯ. ಈಗ ಪಾಕಿಸ್ತಾನದ ಪ್ರದೇಶದಲ್ಲಿ ಸೇರಿಕೊಂಡಿದೆ. ಶ್ರೀರಾಮನ ಸಹೋದರ ಭರತನ ಇಬ್ಬರು ಮಕ್ಕಳಾದ ತಕ್ಷ ಮತ್ತು ಪುಷ್ಕರನಿಗಾಗಿ ಸಿಂಧೂ ನದಿಯ ಎರಡೂ ದಡಗಳಲ್ಲಿ ತಕ್ಷಶಿಲೆ ಮತ್ತು ಪುಷ್ಕರಾವತ ಎಂಬ ಎರಡು ನಗರಗಳನ್ನು ನಿರ್ಮಾಣ ಮಾಡಲಾಗಿತ್ತು. ಅವುಗಳ ಪೈಕಿ ತಕ್ಷಶಿಲೆಯಲ್ಲಿ ನಿರ್ಮಾಣ ಗೊಂಡಿದ್ದ ತಕ್ಷಶಿಲಾ ವಿಶ್ವವಿದ್ಯಾಲಯವೇ ಪ್ರಾಚೀನ ಭಾರತದ ವಿವಿಗಳಲ್ಲಿ ಕೊನೆಯದು. ಮೊಗಲರ ದಾಳಿಯಿಂದ ನಾಶಗೊಂಡ ಈ ವಿಶ್ವವಿದ್ಯಾಲಯದ ಮರು ನಿರ್ಮಾಣವೇ ವಿಷ್ಣಗುಪ್ತ ವಿಶ್ವವಿದ್ಯಾಪೀಠದ ರೂಪದಲ್ಲಿ ಆಗಲಿದೆ ಎಂದು ಶ್ರೀಗಳು ವಿವರಿಸಿದರು.

ತಕ್ಷಶಿಲಾ ವಿವಿಯಲ್ಲಿ ಚಾಣಕ್ಯ, ಪಾಣಿನಿ ಸೇರಿದಂತೆ ನಾನಾ ಪಂಡಿತರು ಕಲಿಸುತ್ತಿದ್ದರು. 5ನೇ ಶತಮಾನದಲ್ಲಿ ನಾನಾ ಅಕ್ರಮಣಗಳಿಂದ ವಿವಿ ಪೂರ್ಣವಾಗಿ ನಾಶವಾಗುತ್ತಾ ಹೋಯಿತು. ಇದರ ಜತೆಯಲ್ಲಿ ಭಾರತೀಯ ವಿದ್ಯಾ ಕಲೆಗಳು ಅದರ ಜತೆಯಲ್ಲಿ ನಾಶವಾಗುತ್ತಾ ಬಂತದವು. ಇದೇ ಕಲ್ಪನೆಯಲ್ಲಿ ವಿಷ್ಣುಗುಪ್ತ ವಿವಿ ಹುಟ್ಟಿಕೊಂಡಿದೆ ಎಂದರು.

ವಿವಿಗಳು ರಾಷ್ಟ್ರ ನಿರ್ಮಾಣದ ಜತೆಯಲ್ಲಿ ದೇಶ ಕಟ್ಟುವ ಕೆಲಸವನ್ನು ಮಾಡಬೇಕು. ಚಾಣಕ್ಯನಂತಹ ಗುರುವನ್ನು ಸೃಷ್ಟಿಮಾಡಬೇಕು. ಬರೀ ಪದವಿಯನ್ನು ಕೊಡುವ ಕಾರ್ಖಾನೆಯಾಗಿ ಕೆಲಸ ಮಾಡಕೂಡದು. ಭಾರತೀಯ ವಿದ್ಯಾ ಕಲೆಗಳ ನೀಡುವ ಮೂಲಕ ದೇಶ ಭಕ್ತರ, ವಿದ್ಯಾಪೂರಕ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಕೆಲಸ ನಡೆಯಬೇಕು; ಇದನ್ನು ವಿಷ್ಣುಗುಪ್ತ ವಿವಿ ಮಾಡುತ್ತದೆ ಎಂದರು.

ಜ್ಞಾನದ ಜತೆಗೆ ನಿಷ್ಠೆ:  ಜ್ಞಾನ ಹಾಗೂ ನಿಷ್ಠೆಯನ್ನು ಹನುಮಂತನಿಗೆ ಹೋಲಿಕೆ ಮಾಡಲಾಗುತ್ತದೆ. ಜ್ಞಾನ ಹಾಗೂ ನಿಷ್ಠೆ ಇಲ್ಲದವರನ್ನು ರಾವಣ ಸಂತಾನ ಹೇಳಲಾಗುತ್ತದೆ. ಆದರೆ ವಿಷ್ಣುಗುಪ್ತ ವಿವಿ ಮೊದಲ ದಿನದಿಂದಲೇ ಜ್ಞಾನದ ಜತೆಯಲ್ಲಿ ನಿಷ್ಠೆಯನ್ನು ನೀಡುವ ಕೆಲಸ ಮಾಡುತ್ತದೆ. ದೇಶನಿಷ್ಠೆ, ಧರ್ಮನಿಷ್ಠೆ, ಆಚಾರ್ಯನಿಷ್ಠೆ, ಸಮಷ್ಟಿ ಹಿತದ ನಿಷ್ಠೆಗಳ ಜತೆಗೆ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಬರೀ ಜ್ಞಾನಕ್ಕೆ ಮಾತ್ರ ಬೆಲೆ ನೀಡಲಾಗಿದೆ. ಅಲ್ಲಿ ನಿಷ್ಠೆ ಎನ್ನುವ ಕಲ್ಪನೆಯೇ ಬೆಳೆದು ಬಂದಿಲ್ಲ. ಪ್ರಾಥಮಿಕ ಶಿಕ್ಷಣದಲ್ಲಿ ವಿದ್ಯೆ, ಸಂಸ್ಕಾರ ನೀಡುವ ಪರಿಪಾಠವಿದೆ. ಆದರೆ ಉನ್ನತ ಶಿಕ್ಷಣದಲ್ಲಿ ಇದು ಪೂರ್ಣವಾಗಿ ಮರೆಯಾಗಿದೆ. ದೇಶನಿಷ್ಠ, ಧರ್ಮಶೀಲನಾಗಬೇಕು ಎನ್ನುವ ಕಲ್ಪನೆಯಲ್ಲಿ ವಿಷ್ಣುಗುಪ್ತ ವಿವಿ ಕೆಲಸ ಮಾಡಲಿದೆ ಎಂದರು.

ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರವಾದ ಬದಲಾವಣೆಯ ಅಗತ್ಯವಿದೆ. ದೇಶದಲ್ಲಿ ಬಹಳಷ್ಟು ಮಂದಿಗೆ ಶಿಕ್ಷಣ ಇಲ್ಲ. ಇದ್ದರೂ ಕೂಡ ಅದು ಪರಿಪೂರ್ಣ ರೂಪದಲ್ಲಿ ಸಿಗುತ್ತಿಲ್ಲ. ಎರಡು ಕಡೆಯ ಎಂದರೆ ಆ ಕಡೆಯ ಶಿಕ್ಷಣ ಈ ಕಡೆಯ ಶಿಕ್ಷಣ ಎನ್ನುವ ಚೌಚೌ ಶಿಕ್ಷಣವನ್ನು ನೀಡುವ ಪರಿಪಾಠ ದೇಶದಲ್ಲಿದೆ. ಸಮಗ್ರವಾದ ಶಿಕ್ಷಣ ನೀಡುವ ಜತೆಯಲ್ಲಿ ಅದನ್ನು ಒಂದೇ ಕಡೆಯಲ್ಲಿ ನೀಡುವ ಕೆಲಸವನ್ನು ವಿವಿ ಮಾಡಲಿದೆ. ವಿದ್ಯೆ ಇಲ್ಲದ ನಿಷ್ಠೆ ನಿಷ್ಪ್ರಯೋಜಕ. ಅದೇ ರೀತಿಯಲ್ಲಿ ನಿಷ್ಠೆ ಇಲ್ಲದ ವಿದ್ಯೆ ಅತ್ಯಂತ ಅಪಾಯಕಾರಿ ಎಂದು ಶ್ರೀಗಳು ನುಡಿದರು.

ಸಮಗ್ರ ಶಿಕ್ಷಣ ವ್ಯವಸ್ಥೆ: ದೇಶದ ಪರಂಪರೆ, ಸಂಸ್ಕೃತಿಯ ಅರಿವು ವಿದ್ಯಾರ್ಥಿಗಳಿಗೆ ಇರಬೇಕು. ಇದೇ ರೀತಿಯಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆಯ ಜತೆಯಲ್ಲಿ ಸೇತುವಾಗಿ ಕೆಲಸ ಮಾಡಬೇಕು. ವಿದ್ಯಾರ್ಥಿ ಇಂತಹ ವಿವಿಗೆ ಬಂದಾಗ ಆತನಿಗೆ ದೇಶದ ಸಂಸ್ಕೃತಿಯ ಪೂರ್ಣ ಪರಿಚಯ ನೀಡುವ ಕೆಲಸವಾಗಬೇಕು. ಎಲ್ಲ ವಿದ್ಯೆಗಳ ಅರಿವು, ಪರಿಚಯ ಇಟ್ಟುಕೊಂಡು ಒಂದು ವಿದ್ಯೆಯಲ್ಲಿ ಮಾತ್ರ ಪ್ರಾವೀಣ್ಯತೆಯನ್ನು ಸಾಧಿಸುವಂತಾಗಬೇಕು ಎನ್ನುವುದು ವಿಷ್ಣುಗುಪ್ತ ವಿವಿಯ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.

ವಿಷ್ಣುಗುಪ್ತ ವಿವಿಗೆ ಬಾಗಿಲುಗಳೇ ಇಲ್ಲ ಎಂದರೆ ಬರೀ ದೇಶದ ಜನರು ಮಾತ್ರವಲ್ಲ ಪ್ರಪಂಚದ ಯಾವುದೇ ಭಾಗದ ಮಂದಿ ವಿವಿಯಲ್ಲಿ ನಾನಾ ಕೋರ್ಸ್‍ಗಳಿಗೆ ಪ್ರವೇಶ ಪಡೆಯಬಹುದು. ಪೂರ್ವಾಂಕುರ, ಉತ್ತರಾಂಕುರ ಹಾಗೂ ಫಲಿತ ಎನ್ನುವ ಮೂರು ವಿಭಾಗ ಮಾಡಲಾಗಿದೆ. ಮಕ್ಕಳು, ಯುವಕರು ಹಾಗೂ ವಯಸ್ಕರು ಕೂಡ ಎರಡು ವರ್ಷದಲ್ಲಿ ಭಾರತೀಯ ಸಂಸ್ಕೃತಿಯ ಅಮೂಲಾಗ್ರ ಪರಿಚಯ ಮಾಡುವ ಜತೆಯಲ್ಲಿ ಯಾವುದಾದರೂ ಒಂದು ವಿಚಾರದಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಬಹುದು ಎಂದರು.

ಶಿಕ್ಷಣವಿದೆ ಆದರೆ ಭಾರತೀಯತೆ ಇಲ್ಲ: ಈ ವಿವಿಯ ಮೂಲಕ ಶಂಕರಾಚಾರ್ಯರಂತಹ ಮಹಾನ್ ವ್ಯಕ್ತಿಗಳ ಸೃಷ್ಟಿ ಮಾಡುವ ಜತೆಯಲ್ಲಿ ಆಳುವವರ ಸೃಷ್ಟಿ ಎಂದರೆ ಐಎಎಸ್, ಐಪಿಎಸ್‍ನಂತಹ ಉನ್ನತ ಹುದ್ದೆಗೆ ತೆರಳುವ ಮಂದಿಗೆ ದೇಶದ ಅರಿವು ನೀಡುವುದು, ಕಾಯುವವರ ಸೃಷ್ಟಿ ಎಂದರೆ- ದೇಶದ ಗಡಿ ಕಾಯುವ ಸೈನಿಕರಂತೆ ದೇಶದ ಒಳಗಡೆಯೂ ಕಾಯುವವರನ್ನು ಹುಟ್ಟುಹಾಕುವುದು, ಇದರ ಜತೆಯಲ್ಲಿ ಬೆಳಗುವವರ ಸೃಷ್ಟಿ ಜ್ಞಾನಿಗಳನ್ನು ಸಮಾಜಕ್ಕೆ ನೀಡುವುದು ಈ ವಿವಿಯ ಪ್ರಮುಖ ಉದ್ಧೇಶವಾಗಿದೆ. ಭಾರತದಲ್ಲಿ ಶಿಕ್ಷಣ ಸಾಕಷ್ಟಿದೆ; ಆದರೆ ಇಂತಹ ಶಿಕ್ಷಣದಲ್ಲಿ ಭಾರತೀಯತೆ ಕಾಣುತ್ತಿಲ್ಲ. ದೇಶ, ಧರ್ಮದಂತೆ ದೇಶಿಯ ವಿದ್ಯೆಯ ರಕ್ಷಣೆ ಜತೆಗೆ ಅದರ ಬಗ್ಗೆ ಕಳಕಳಿಯಿಂದ ಈ ವಿವಿ ಕೆಲಸ ಮಾಡಲಿದೆ ಎಂದರು.

ಏಪ್ರಿಲ್ 26ರಂದು ಕಾರ್ಯಾರಂಭ:

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಇದೇ ಏಪ್ರಿಲ್ 26ರ ಅಕ್ಷಯ ತೃತೀಯಾದಂದು ಗೋಕರ್ಣದ ಅಶೋಕಾವನದಲ್ಲಿ ಕಾರ್ಯಾರಂಭ ಮಾಡಲಿದೆ. 100 ಮಂದಿ ವಿದ್ಯಾರ್ಥಿಗಳು ಮತ್ತು 20 ಮಂದಿ ಆಚಾರ್ಯರು ಈಗಾಘಲೇ ವಿಶ್ವವಿದ್ಯಾ ಪೀಠದ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಮಾತನಾಡಿ, ಇಂದಿನ ಯುವಜನತೆಗೆ ಮನಸ್ಸು ನಿಯಂತ್ರಣ ಮಾಡುವ ಜತೆಯಲ್ಲಿ ಸಮಾಜಕ್ಕಾಗಿ ದುಡಿಯುವ ಮನಸ್ಸು ಮಾಡುವಂತಹ ಕಾರ್ಯವನ್ನು ಈ ವಿವಿ ಮಾಡಲಿ ಎಂದರು.

ಕರ್ಣಾಟಕ ಬ್ಯಾಂಕಿನ ಎಂಡಿ ಎಂ.ಎಸ್. ಮಹಾಬಲೇಶ್ವರ ರಾವ್ ಮಾತನಾಡಿ, ವಿಷ್ಣುಗುಪ್ತ ವಿವಿಯ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುವ ಜತೆಯಲ್ಲಿ ವೇದಿಕ್ ರಿಸರ್ಚ್ ಸೆಂಟರ್‌ಗೆ ತಗಲುವ ಖರ್ಚನ್ನು ಬ್ಯಾಂಕ್ ವಹಿಸಿಕೊಳ್ಳುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಕಲ್ಲಡ್ಕ ಪ್ರಭಾಕರ ಭಟ್, ಬಂಟರ ಸಂಘದ ಅಜಿತ್ ಕುಮಾರ್ ರೈ ಮಾಲಾಡಿ ಮೊದಲಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ,ರಾಜೇಶ್ ನಾಯ್ಕ್, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಎಂ.ಬಿ.ಪುರಾಣಿಕ್, ಸೇರಿದಂತೆ ಸಮಾಜದ ನಾನಾ ಸಮುದಾಯಗಳ ಮುಖಂಡರು, ರಾಜಕೀಯ ಮುಖಂಡರು, ಶಿಕ್ಷಣ ತಜ್ಞರು ಭಾಗವಹಿಸಿದ್ದರು. ಬಳಿಕ ಸ್ವಾಮೀಜಿ ಅವರು ವಿವಿ ಕುರಿತು ನಾನಾ ಪ್ರಶ್ನೆಗಳಿಗೆ ಉತ್ತರ ನೀಡಿ ಸಂದೇಹಗಳನ್ನು ನಿವಾರಿಸಿದರು.

Comments are closed.