ಕರಾವಳಿ

ಕುಂದಾಪುರ ಮುಳ್ಳಿಕಟ್ಟೆಯಲ್ಲಿ ಲಾರಿ ಪಲ್ಟಿ: ತಪ್ಪಿದ ಬಾರೀ ಅನಾಹುತ-ಬ್ಯಾರಿಕೇಡ್ ಅವ್ಯವಸ್ಥೆ ಕಾರಣ?

Pinterest LinkedIn Tumblr

ಕುಂದಾಪುರ: ಹತ್ತು ಚಕ್ರದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಉಡುಪಿ ಜಿಲ್ಲೆ ಮರವಂತೆ ಸಮೀಪದ ಮುಳ್ಳಿಕಟ್ಟೆ ಜಂಕ್ಷನ್ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.

ಈ ಅವಘಡದಲ್ಲಿ ಲಾರಿ ಚಾಲಕ ಹಾಗೂ ನಿರ್ವಾಹಕ ಪಾರಾಗಿದ್ದಾರೆ. ಲಾರಿ ಪಲ್ಟಿಯಾದ ಅನತಿ ದೂರದಲ್ಲಿ ಮುಳ್ಳಿಕಟ್ಟೆ ಬಸ್ ನಿಲ್ದಾಣವಿದ್ದು ಕೊಂಚದರಲ್ಲೇ ಸಂಭವನೀಯ ಅವಘಡ ತಪ್ಪಿದೆ. ಹರಿಯಾಣದಿಂದ ಸರಕುಗಳನ್ನು ಹೊತ್ತು ಕಲ್ಲಿಕಟ್ಟೆಯತ್ತ ತೆರಳುವ ಬೃಹತ್ ಲಾರಿ ಇದಾಗಿತ್ತು. ಲಾರಿ ಪಲ್ಟಿಯಾದ ಬಳಿಕ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಮಾತ್ರವಲ್ಲ ಲಾರಿಯಲ್ಲಿನ ಆಯಿಲ್ ಸೋರಿಕೆಯಾಗಿತ್ತು.

ಬ್ಯಾರಿಕೇಡ್ ಅವ್ಯವಸ್ಥೆ ಕಾರಣ!
ಕುಂದಾಪುರ ತಾಲೂಕಿನಾದ್ಯಂತ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಅವೈಜ್ಞಾನಿಕವಾಗಿ ಬ್ಯಾರಿಕೇಡ್ ಅಳವಡಿಕೆ ಮಾಡುವುದು ಕಂಡುಬರುತ್ತಿದೆ. ಡಿವೈಡರ್ ಇರುವ ಕಡೆಯಲ್ಲಿ ಮತ್ತು ಅಪಘಾತ ವಲಯಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಅನಿವಾರ್ಯವಾದರೂ ಕೂಡ ಬ್ಯಾರಿಕೇಡ್ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಮತ್ತು ಸುವ್ಯವಸ್ಥಿತವಾಗಿ ಇಡುತ್ತಿಲ್ಲ ಇದರಿಂದ ವಾಹನ ಸವಾರರು ಗೊಂದಲಪಡುವಂತಾಗಿದೆ. ಇನ್ನು ರಾ. ಹೆದ್ದಾರಿಯಲ್ಲಿ ನೇರ ಮಾರ್ಗವಿರುವಲ್ಲಿ ಕೂಡ (ಯಾವುದೇ ಅಪಘಾತ ವಲಯವಲ್ಲದ, ಡಿವೈಡರ್ ಇಲ್ಲದ) ಪ್ರದೇಶದಲ್ಲಿಯೂ ಬ್ಯಾರಿಕೇಡ್ ಅಳವಡಿಸಿ ವಾಹನ ಸವಾರರನ್ನು ಗೊಂದಲಕ್ಕೀಡು ಮಾಡಲಾಗುತ್ತಿದೆ. ಈ ಬ್ಯಾರಿಕೇಡ್ ಬಹುತೇಕ ಖಾಸಗಿ ಕಂಪೆನಿ, ದೇವಸ್ಥಾನಗಳ ಜಾಹಿರಾತು ಫಲಕವಾಗಿ ಕಾರ್ಯನಿರ್ವಹಿಸುತ್ತಿರುವುದು ಕೂಡ ಜನರಲ್ಲಿ ಅಸಮಾಧ ಉಂಟುಮಾಡಿದೆ. ಕುಂದಾಪುರ ಸಂಚಾರಿ ಠಾಣೆ ಎಂದು ಈ ಬ್ಯಾರಿಕೇಡುಗಳಲ್ಲಿ ಬರೆದರೂ ಕೂಡ ತಮ್ಮ ಖಾಸಗಿ ಜಾಹಿರಾತು ಮಾತ್ರ ಬ್ಯಾರಿಕೇಡ್ ಕೊಡುಗೆದಾರರು ದೊಡ್ಡದಾಗಿ ಮುದ್ರಿಸಿರುತ್ತಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸುವ ಇಂತಹ ಬ್ಯಾರಿಕೇಡ್ ನಿರ್ವಹಣೆ ಮಾಡುವುದು ಯಾರು ಎಂಬುದು ಇದೀಗಾ ಸಾರ್ವಜನಿಕರ ಪ್ರಶ್ನೆಯಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.