ಕರಾವಳಿ

ಇಡ್ಯಾ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ಅಷ್ಟಪವಿತ್ರ ನಾಗಾಮಂಡಲೋತ್ಸವ: ಹರಿದು ಬಂದ ಭಕ್ತಸಾಗಾರ

Pinterest LinkedIn Tumblr

ಮಂಗಳೂರು/ ಸುರತ್ಕಲ್, ಫೆಬ್ರವರಿ.08: ಸುರತ್ಕಲ್ ಸಮೀಪದ ಇಡ್ಯಾ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗು ಅಷ್ಟಪವಿತ್ರ ನಾಗಾಮಂಡಲೋತ್ಸವ ಜರಗಿತು.

ಶುಕ್ರವಾರ ಪೂರ್ವಾಹ್ನ 9.30ರಿಂದ 9.45ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ವಿದ್ಯಾಧರ ಮುನಿ ಪ್ರತಿಷ್ಠಾಪಿತ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಯಿತು.

ಬಳಿಕ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವದಿಂದ ಒಂದು ದೇವಸ್ಥಾನ ಮಾತ್ರವಲ್ಲದೆ ಗ್ರಾಮವಿಡೀ ಕಳೆಗಟ್ಟುತ್ತದೆ; ಅಭಿವೃದ್ಧಿಯಾಗುತ್ತದೆ. ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ಹಿಂದಿರುಗಿದರೆ ನಮ್ಮ ಜೀವನದಲ್ಲಿ ನಿತ್ಯೋತ್ಸವವೇ ತುಂಬಿರುತ್ತದೆ ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಶಾಸಕ ಡಾ| ಭರತ್‌ ಶೆಟ್ಟಿ ವೈ. ಶುಭ ಹಾರೈಸಿದರು. ಕಟೀಲು ಕ್ಷೇತ್ರದ ವೇ|ಮೂ| ಲಕ್ಷ್ಮೀನಾರಾಯಣ ಆಸ್ರಣ್ಣ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪಂಜ ಭಾಸ್ಕರ ಭಟ್‌ ಉಪನ್ಯಾಸ ನೀಡಿದರು.

ಬಿಎಎಸ್‌ಎಫ್‌ನ ಸೈಟ್‌ ಡೈರೆಕ್ಟರ್‌ ಶ್ರೀನಿವಾಸ್‌ ಪ್ರಾಣೇಶ್‌, ಮೂಲ್ಕಿ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಅರವಿಂದ ಪೂಂಜಾ, ಯಕ್ಷ ಧ್ರುವ ಫೌಂಡೇಶನ್‌ ಅಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ, ಉದಯಕೃಷ್ಣ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಮುನಿಯಾಲು ಉದಯಕುಮಾರ್‌ ಶೆಟ್ಟಿ, ಉದ್ಯಮಿಗಳಾದ ಪಿ.ಪಿ. ಶೆಟ್ಟಿ, ಜೆ.ಡಿ ವೀರಪ್ಪ, ರಘುನಾಥ ಸೋಮಯಾಜಿ, ಕೂಟ ಮಹಾಜಗತ್ತಿನ ಉಪಾಧ್ಯಕ್ಷ ಪ್ರಕಾಶ ಕಾರಂತ, ಸಿವಿಲ್‌ ಗುತ್ತಿಗೆದಾರ ಗೋಪಾಲಕೃಷ್ಣ ಇಡ್ಯಾ, ಮನಪಾ ಸದಸ್ಯೆ ನಯನಾ ಆರ್‌.ಕೋಟ್ಯಾನ್‌, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಗೌರವಾಧ್ಯಕ್ಷರಾದ ಐ.ಕೆ. ನಾರಾಯಣ ರಾವ್‌, ದೊಂಬಯ್ಯ ಗುರಿಕಾರ, ಉದಯಶಂಕರ್‌ ಭಟ್‌,ಗೋಪಾಲಕೃಷ್ಣ ಇಡ್ಯಾ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಅಗರಿ ರಾಘವೇಂದ್ರ ರಾವ್‌, ಸತ್ಯಜಿತ್‌ ಸುರತ್ಕಲ್‌, ಟಿ.ಎನ್‌. ರಮೇಶ್‌, ಪ್ರಧಾನ ಸಂಚಾಲಕ ಅಣ್ಣಪ್ಪ ದೇವಾಡಿಗ ಉಪಸ್ಥಿತರಿದ್ದರು.

ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಐ. ರಮಾನಂದ ಭಟ್‌ ಪ್ರಸ್ತಾವನೆಗೈದರು. ಸಂತೋಷ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ಮಹೇಶ್‌ ಮೂರ್ತಿ ಸುರತ್ಕಲ್‌ ಮತ್ತು ಗುಣವತಿ ರಮೇಶ್‌ ನಿರೂಪಿಸಿದರು. ಕೃಷ್ಣಕುಮಾರ್‌ ಇಡ್ಯಾ ವಂದಿಸಿದರು.

ರಾತ್ರಿ ಅಷ್ಟಪವಿತ್ರ ನಾಗಮಂಡಲೋತ್ಸವ : ರಾತ್ರಿ ವೇದಮೂರ್ತಿ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗ ಮದ್ದೂರು, ಶ್ರೀ ಕೃಷ್ಣಪ್ರಸಾದ ವೈದ್ಯ ಮತ್ತು ಬಳಗದವರಿಂದ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಿತು..

ಫೆಬ್ರವರಿ 9ರಂದು ಪ್ರಪ್ರಥಮ ಬಾರಿಗೆ ಧರ್ಮನೇಮೋತ್ಸವ :

ಫೆಬ್ರವರಿ 9ರಂದು ಭಾನುವಾರ ಶ್ರೀ ಪಿಲಿಚಾಮುಂಡಿ ದೈವದ ಧರ್ಮನೇಮೋತ್ಸವ ನಡೆಯಲಿದೆ. ಶ್ರೀ ಕ್ಷೇತ್ರ ಒಂಟಿ ದೈವ ಶ್ರೀ ಪಿಲಿಚಾಮುಂಡಿಗೆ ಪ್ರಪ್ರಥಮ ಬಾರಿಗೆ ಧರ್ಮ ನೇಮೋತ್ಸವ ( ಫೆಬ್ರವರಿ.09) ಜರಗುತ್ತಿದ್ದು ಇದೊಂದು ವಿಶೇಷ ಆಕರ್ಷಣೆಯಾಗಿದೆ. ಈ ಬಾರಿಯ ಬ್ರಹ್ಮಕಲಶ, ನಾಗಮಂಡಲ, ಧರ್ಮನೇಮೋತ್ಸವದಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿಯವರು ತಿಳಿಸಿದ್ದಾರೆ.

ಪ್ರತಿದಿನ ಭಕ್ತಾದಿಗಳಿಗೆ ನಿರಂತರವಾಗಿ ಉಪಾಹಾರ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಸುಮಾರು ಒಂದು ಸಾವಿರ ವರ್ಷಕ್ಕೂ ಮಿಕ್ಕಿ ಇತಿಹಾಸ ಇರುವ ಸದ್ರಿ ದೇವಸ್ಥಾನದ ಹಿಂದಿನ ಜೀಣೋರ್ದ್ಧಾರ ಕಾರ್ಯ 1980ರ ಆಸುಪಾಸಿನಲ್ಲಿ ಜರಗಿದ್ದು, ತದನಂತರ ನವೀಕರಣದ ಕಾರ್ಯಗಳು ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ. ಈ ಹಿಂದೆ 1979ರಲ್ಲಿ 1982ರಲ್ಲಿ ಶ್ರೀ ಮಹಾಗಣಪತಿಯ ನೂತನ ಗರ್ಭಗುಡಿ ನಿರ್ಮಾಣ ಮತ್ತು ಪುನರ್ ಪ್ರತಿಷ್ಠೆ 1991 ಮತ್ತು 2004ರಲ್ಲಿ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶ ಹಾಗು ನಾಗಮಂಡಲ ಸೇವೆ ಜರುಗಿರುತ್ತದೆ ಎಂದು ಮಹಾಬಲ ಪೂಜಾರಿ ಕಡಂಬೋಡಿಯವರು ಮಾಹಿತಿ ನೀಡಿದ್ದಾರೆ.

Comments are closed.