ಕರಾವಳಿ

ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ನೀಡುವುದು ಮುಖ್ಯ ಗುರಿ : ಡಾ. ಸತೀಶ್ಚಂದ್ರ

Pinterest LinkedIn Tumblr

ಮಂಗಳೂರು ಜನವರಿ 30: ಸಾರ್ವತ್ರಿಕ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯದೆ ವಂಚಿತರಾಗಿರುವ ಮಕ್ಕಳಿಗೆ ಲಸಿಕೆ ನೀಡುವುದು ಮುಖ್ಯ ಗುರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾಧಿಕಾರಿ ಡಾ. ಸತೀಶ್ಚಂದ್ರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಮೂರನೇ ಸುತ್ತಿನ ಡಿ.ಟಿ.ಎಫ್.ಐ. ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮಿಷನ್ ಇಂದ್ರ ಧನುಷ್ ಯೋಜನೆ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆಯನ್ವಯ ಒಂದು ವರ್ಷದ ಮಗುವಿಗೆ ಹತ್ತು ಮಾರಕ ರೋಗಗಳ ವಿರುದ್ದ ಲಸಿಕೆಯನ್ನು ನೀಡಲಾಗುತ್ತದೆ. ಈ ಲಸಿಕಾ ಕಾರ್ಯಕ್ರಮವು ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದು, ಈಗಾಗಲೇ ಭಾರತದಲ್ಲಿ 92%ರಷ್ಟು ಈ ಕಾರ್ಯಕ್ರಮ ಯಶಸ್ವಿಯಾಗಿದ್ದು, ಇನ್ನು 18% ಸಾಧಿಸಬೇಕಾಗಿದೆ ಹಾಗಾಗಿ ಇದಕ್ಕೆ ಆಶಾ ಕಾರ್ಯಕರ್ತೆ, ಹಾಗೂ ಮಾಹಿತಿ ಸಂವಹನ ಮತ್ತು ತಂತ್ರಜ್ಞಾನ (ಐ.ಸಿ.ಟಿ.), ಸೇರಿದಂತೆ ಇನ್ನಿತರ ಇಲಾಖೆಗಳು ಜನರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಹೇಳಿದರು.

ಈಗಾಗಲೇ ಮೊದಲ ಸುತ್ತಿನ ಹಾಗೂ ಎರಡನೇ ಸುತ್ತಿನಲ್ಲಿ 97%ನಷ್ಟು ಮಕ್ಕಳಿಗೆ, 98%ರಷ್ಟು ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯ ಅನ್ವಯ ಲಸಿಕೆ ನೀಡಲಾಗಿದ್ದು, ಈ ಮೂಲಕ ಪ್ರಗತಿ ಸಾಧಿಸಿದೆ. ಮೂರನೇ ಸುತ್ತಿನ ಈ ಕಾರ್ಯಕ್ರಮವು ಫೆಬ್ರವರಿ 3 ರಿಂದ ನಡೆಯಲಿದ್ದು, ಸಾರ್ವತ್ರಿಕ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಬಹುದಾಗಿದೆ.

ಈ ಬಾರಿ ಲಸಿಕೆ ವಂಚಿತರಾಗಿರುವ ಮಕ್ಕಳಿಗೆ ಲಸಿಕೆ ನೀಡುವುದು ಮುಖ್ಯ ಗುರಿಯಾಗಿಸಿಕೊಂಡು ವಲಸಿಗರ ಪ್ರದೇಶ, ಸ್ಲಂ, ಕಟ್ಟಡ ಕಾರ್ಮಿಕರ ಸ್ಥಳ, ಮಾರುಕಟ್ಟೆ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಕಾರ್ಯಕರ್ತರು ತೆರಳಿ ಮಕ್ಕಳಿಗೆ ಲಸಿಕೆ ನೀಡಬೇಕು. ಇಂದ್ರ ಧನುಷ್ ಕಾಮನಬಿಲ್ಲನ್ನು ಹೋಲುತ್ತಿದ್ದು, ಈ ಯೋಜನೆಯಂತೆ ಒಂದು ಮಗು ಐದು ವರ್ಷದಲ್ಲಿ ಏಳು ಬಾರಿ ಲಸಿಕೆ ತೆಗೆದುಕೊಂಡರೆ ಆ ಮಗುವಿನ ಭವಿಷ್ಯ ಕಾಮನಬಿಲ್ಲನಂತೆ ಬಣ್ಣ ಬಣ್ಣವಾಗಿರುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ರಾಮಕೃಷ್ಣ ರಾವ್, ಆರ್.ಸಿ.ಎಚ್ ಅಧಿಕಾರಿ ಡಾ. ರಾಜೇಶ್ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

Comments are closed.