ಕರಾವಳಿ

ಕುಂದಾಪುರ ಫ್ಲೈ ಓವರ್ ಪೂರ್ಣಗೊಳಿಸದಿದ್ರೆ ಟೋಲ್ ಬಂದ್: ಶೋಭಾ ಕರಂದ್ಲಾಜೆ

Pinterest LinkedIn Tumblr

ಉಡುಪಿ: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳಿಗೆ ವೇಗ ನೀಡಿ ಅವಧಿಯೊಳಗಡೆ ಪೂರ್ಣಗೊಳಿಸಬೇಕು. ಪಡುಬಿದ್ರಿ ರಸ್ತೆಕಾಮಗಾರಿ ಮತ್ತು ಕುಂದಾಪುರದ ಶಾಸ್ತ್ರಿ ಸರ್ಕಲ್ ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸಲು ಮಾರ್ಚ್ 31 ರ ದಿನ ನಿಗದಿಪಡಿಸಿದ್ದು, ಹೇಳಿದ ದಿನಾಂಕದಂದು ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ ಎಂದು ಉಡುಪಿ ಜಿಲ್ಲಾ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಜಿಲ್ಲಾ ಪಂಚಾಯತ್‍ನ ವಿ.ಎಸ್‍ಆಚಾರ್ಯ ಸಭಾಂಗಣದಲ್ಲಿ ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಡ್ಡಿಯಾಗುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಯುದ್ದೋಪಾದಿಯಲ್ಲಿ ಕೆಲಸ ಮಾಡಿ, ಮಳೆಗಾಲಕ್ಕೂ ಮೊದಲೆ ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಏಪ್ರಿಲ್ ಅಂತ್ಯದೊಳಗೆ ಪಡುಬಿದ್ರಿ ಮತ್ತುಶಾಸ್ತ್ರಿ ಸರ್ಕಲ್ ಫ್ಲೈಓವರ್ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದರು. ಕಾಮಗಾರಿಗಳಲ್ಲಿ ವಿಳಂಬ ತೋರುವ ಗುತ್ತಿಗೆ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸಂಸದೆ ಅಧಿಕಾರಿಗಳಿಗೆ ಸೂಚಿಸಿದರು.

ಅಲೆವೂರಿನಲ್ಲಿ ಕೇಂದ್ರೀಯ ವಿದ್ಯಾಲಯ ಕಟ್ಟಡ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ದೊರೆಯದೆ ಮಕ್ಕಳ ಶಾಲೆಗೆ ಸ್ವಂತ ಕಟ್ಟಡ ಇಲ್ಲದಂತಾಗಿದೆ, ಮಾತ್ರವಲ್ಲ ಅಲೆವೂರಿಗೆ ಮಂಜೂರಾಗಿರುವ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಯೋಜನೆಗಳು ರದ್ದಾಗುವ ಮಟ್ಟಕ್ಕೆ ತಲುಪಿವೆ. ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಆದಷ್ಟು ಬೇಗನೆ ಅನುಮತಿ ದೊರಕಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಗೆ ಪ್ರತಿ ಬಾರಿಯೂ ಗೈರು ಹಾಜರಾಗುವ ಎಲ್ಲಾ ಇಲಾಖಾಧಿಕಾರಿಗಳಿಗೆ ಶೋಕಾಸ್ ನೋಟೀಸು ಜಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಂಸದೆ ನಿರ್ದೇಶನ ನೀಡಿದರು.

ಕಾಡೂರು ಗ್ರಾಮ ಪಂಚಾಯತ್‍ನಲ್ಲಿ ಪೈಲಟ್ ಯೋಜನೆಯಡಿ ನಗದುರಹಿತ ಸೇವೆ 100% ಫಲಿಸಿದ್ದು, ಈ ಸೇವೆಯನ್ನು 15 ಗ್ರಾಮ ಪಂಚಾಯತ್ ಗಳಿಗೆ ವಿಸ್ತರಿಸಲಾಗಿದೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‍ಗಳು ನಗದು ರಹಿತ ಸೇವೆಯನ್ನು ನೀಡಲಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಸಭೆಗೆ ಮಾಹಿತಿ ನೀಡಿದರು.

ಮಾತೃ ಪೂರ್ಣಯೋಜನೆಯಿಂದ ಗರ್ಭಿಣಿ ಮತ್ತು ಬಾಣಂತಿ ತಾಯಿಯರಿಗಾಗುವ ತೊಂದರೆಗಳನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಈ ಯೋಜನೆಯನ್ನು ಮಾರ್ಪಡಿಸಿ, ಫಲಾನುಭವಿಗಳಿಗೆ ನಗದು ಹಣ ಅಥವಾ ದವಸ ಧಾನ್ಯಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಸಂಸದೆ ಹೇಳಿದಾಗ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಆರ್. ಶೇಷಪ್ಪ, ಈ ವಿಷಯವನ್ನು ಸಚಿವೆಯವರ ಗಮನಕ್ಕೂ ತಂದಿದ್ದು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಓಡಾಟದ ಮಾರ್ಗ ಮತ್ತು ಸಮಯದ ವೇಳಾಪಟ್ಟಿಯನ್ನು ಬದಲಾಯಿಸಬೇಕು, ಆರ್.ಟಿ.ಓ ಅಧಿಕಾರಿಗಳ ಸಭೆ ಕರೆದು ಅವರ ಜತೆ ಸಮಾಲೋಚನೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ 7,31,453 ಆಯುಶ್ಮಾನ್ ಕಾರ್ಡ್ ವಿತರಣೆಯಾಗಿದ್ದು, 6816 ಫಹಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಡಿ.ಎಚ್.ಓ ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿ ಕಾನೂನನ್ನು ಉಲ್ಲಂಘಿಸಿ ಯಾರೂ ಕೂಡಾ ಯಾವುದೇ ಆಸ್ಪತ್ರೆ ಅಥವಾ ಕಟ್ಟಡವನ್ನು ಕಟ್ಟುವಂತಿಲ್ಲ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸರಕಾರಿ ವೈದ್ಯರುಗಳ ಒಂದು ತಂಡವನ್ನು ನಿಯೋಜಿಸಿ ಬಡವರಿಗೂ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಸಂಸದೆ ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿದರು.

ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಲ್ಲಿ 1,40,371 ರೈತರು ನೋಂದಾಯಿಸಿಕೊಂಡಿದ್ದು, ಇದರಲ್ಲಿ 1,28,899 ಫಲಾನುಭವಿಗಳಿಗೆ ಮೊದಲನೆ ಕಂತು, 1,25,437 ಫಲಾನುಭವಿಗಳಿಗೆ ಎರಡನೆ ಕಂತು, 72,317 ಫಲಾನುಭವಿಗಳಿಗೆ ಮೂರನೆ ಮತ್ತು 3,542 ಫಲಾನುಭವಿಗಳಿಗೆ ನಾಲ್ಕನೆ ಕಂತು ಪಾವತಿಯಾಗಿದೆ, ರಾಜ್ಯ ಸರಕಾರದಎಲ್ಲಾ ಕಂತುಗಳು ಒಂದೇ ಬಾರಿಗೆ ಪಾವತಿಯಾಗಿವೆ. ಮಳೆಯಿಂದ ಹಾನಿಗೊಳಗಾದ 1192 ರೈತರ ಬೆಳೆಗೆ 17,39,000 ಲಕ್ಷ ರೂಗಳು ಪಾವತಿಯಾಗಿವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇ ಗೌಡ ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಜಿಲ್ಲಾಧಿಕಾರಿ ಜಿ ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Comments are closed.