ಕರಾವಳಿ

ಸಂವಿಧಾನದ ಅರಿವು ಭಾರತೀಯರ ಆದ್ಯ ಕರ್ತವ್ಯ: ಶಾಸಕ ರಘುಪತಿ ಭಟ್

Pinterest LinkedIn Tumblr

ಉಡುಪಿ: ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿ ಸಂವಿಧಾನದ ಬಗ್ಗೆ ಅರಿವು ಹಾಗೂ ಸಂವಿಧಾನವನ್ನು ಗೌರವಿಸುವುದು ಭಾರತೀಯ ಪ್ರಜೆಯಾದ ನಮ್ಮೆಲ್ಲರ ಜವಬ್ದಾರಿ ಮತ್ತು ಆದ್ಯ ಕರ್ತವ್ಯ. ಈ ಹಿನ್ನಲೆಯಲ್ಲಿ ಗ್ರಂಥಾಲಯ ಇಲಾಖೆಯಿಂದ ಸಂವಿಧಾನ ದಿನಾಚರಣೆ, ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ ಹಾಗೂ ಉಡುಪಿ, ಮಂಗಳೂರು, ಕಾರವಾರ ಸೇರಿ 3 ಜಿಲ್ಲೆಯ ಗ್ರಂಥಾಲಯ ಇಲಾಖೆಯ ಸಿಬ್ಬಂದಿಗಳಿಗೆ 3 ದಿನಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಉತ್ತಮ ವಿಚಾರ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.  ಅವರು ಗುರುವಾರ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು

ರಾಜಾರಾಮ್ ಮೋಹನ್ ರಾಯ್ ಗ್ರಂಥಾಲಯ ಫೌಂಡೇಶನ್ ಕೋಲ್ಕತ್ತಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಭಾರತ ಸಂವಿಧಾನ ದಿನಾಚರಣೆ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ ಹಾಗೂ ಗ್ರಂಥಾಲಯ ಸಿಬ್ಬಂದಿಗಳಿಗೆ ಡಿಜಿಟಲ್ ಗ್ರಂಥಾಲಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿನ ಪ್ರತೀ ಭಾರತೀಯನ ದಿನಚರಿ ಹಾಗೂ ಆಡಳಿತಗಳು ಸಂವಿಧಾನದ ಅಡಿಯಲ್ಲಿ ನಡೆಯುತ್ತಿದ್ದರೂ, ಸಂವಿಧಾನದ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಕೊರತೆಯಿದ್ದು, ದೇಶದ ವ್ಯವಸ್ಥೆಗೆ ಘಾಸಿಯಾಗುವ ಸನ್ನಿವೇಶಗಳು ಇವೆ. ಈ ನಿಟ್ಟಿನಲ್ಲಿ ಪ್ರಥಮವಾಗಿ ಸಂವಿಧಾನವನ್ನು ಅರಿಯುವ ದೃಷ್ಟಿಯಿಂದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಬೇರೆ ಎಲ್ಲಾ ದಿನಾಚರಣೆಗಳಿಗಿಂತ ಸಂವಿಧಾನ ದಿನಾಚರಣೆ ಬಹಳ ಪ್ರಮುಖವಾದ ದಿನಾಚರಣೆ ಎಂದು ಹೇಳಿದರು.

ದೇಶದಲ್ಲಿಯೇ ಗ್ರಂಥಾಲಯದ ವಿಚಾರದಲ್ಲಿ ಕರ್ನಾಟಕ ಗ್ರಂಥಾಲಯ ಇಲಾಖೆ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ವಿಚಾರವಾಗಿದ್ದು, ಇದಕ್ಕೂ ಒಂದು ಹೆಜ್ಜೆ ಮುಂದಿಕ್ಕಿ ಗ್ರಂಥಾಲಯಕ್ಕೂ ಡಿಜಿಟಲ್ ಸ್ಪರ್ಶ ನೀಡಿ ಜಿಲ್ಲೆಯಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ ನೀಡಲಾಗಿದೆ. ಡಿಜಿಟಲ್ ಯುಗದಲ್ಲಿ ಜನರನ್ನು ಮೊಬೈಲ್ ಗೀಳಿನಿಂದ ಓದಿನತ್ತ ಸೆಳೆಯಲು ಸಹಕಾರಿಯಾಗಿದ್ದು, ತಂತ್ರಜ್ಞಾನದ ಪೂರ್ಣ ಅಳವಡಿಕೆಯಾಗಿ ಜನರಿಗೆ ಸಂಪೂರ್ಣ ಉಪಯೋಗವಾಗಲಿ. ಗ್ರಂಥಾಲಯದ ಸಿಬ್ಬಂದಿಗಳು 3 ದಿನಗಳ ತರಬೇತಿ ಕಾರ್ಯಾಗಾರದಲ್ಲಿ ತಂತ್ರಜ್ಞಾನದ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದು, ಗ್ರಂಥಾಲಯಕ್ಕೆ ಬರುವ ಓದುಗರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಜಿಲ್ಲೆಯಲ್ಲಿ ಓದುಗರ ಸಂಖ್ಯೆಯನ್ನು ಹೆಚ್ಚಿಸುವಂತಾಗಬೇಕು. ಅಜ್ಜರಕಾಡಿನಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಗ್ರಂಥಾಲಯವು ಶೀಘ್ರದಲ್ಲಿ ಜನರ ಸೇವೆಗೆ ಲಭ್ಯವಾಗುವಂತಾಗಲಿ ಎಂದು ಅವರು ಆಶಿಸಿದರು.

ಜಿಲ್ಲಾಧಿಕಾರಿ ಜಿ ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ಸಂವಿಧಾನ ದಿನಾಚರಣೆ ಹಾಗೂ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ ನೀಡಲಾಗಿದ್ದು, ಗ್ರಂಥಾಲಯ ಸಿಬ್ಬಂದಿಗಳಿಗೆ 3 ದಿನಗಳ ತರಬೇತಿ ಕಾರ್ಯಾಗಾರವು ಜನರಿಗೆ ಬಹಳ ಸಹಕಾರಿಯಾಗಲಿದೆ. ಗ್ರಂಥಾಲಯದಲ್ಲಿ ನಾನು ಮಾಡಿದ ತಪಸ್ಸಿನಿಂದ ಇಂದು ನಾನು ಉತ್ತಮ ಹುದ್ದೆಯೇರಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯ ಸಿಬ್ಬಂದಿಗಳು 3 ದಿನಗಳ ಕಾರ್ಯಗಾರದ ಸಂಪೂರ್ಣ ಸದುಪಯೋಗ ಪಡೆದು ಕಾರ್ಯಕ್ರಮ ಯಶಸ್ವಿಯಾಗುವಂತೆ ಸಹಕರಿಸಬೇಕು ಎಂದು ಹೇಳಿದರು.  ಜಿಲ್ಲಾ ಗ್ರಂಥಾಲಯದ ನಿರ್ಮಾಣ ಕಾರ್ಯದ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಗ್ರಂಥಾಲಯದ ಸೌಲಭ್ಯ ಜನರಿಗೆ ದೊರಕಲಿದೆ. ಗ್ರಾ.ಪಂಚಾಯತ್ ಗ್ರಂಥಾಲಯಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದ ಅವರು, 3 ಜಿಲ್ಲೆಗಳಿಂದ ಕಾರ್ಯಾಗಾರಕ್ಕೆ ಆಗಮಿಸಿರುವ ಸಿಬ್ಬಂದಿಗಳಿಗೆ ಉಡುಪಿ ಜಿಲ್ಲೆಯಲ್ಲಿನ ಪ್ರಮುಖ ಸ್ಥಳಗಳನ್ನು ತೋರಿಸುವ ಕಾರ್ಯವಾಗಲಿ ಎಂದು ಅವರು ಹೇಳಿದರು.

ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಎಸ್ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿರುವ ಎಲ್ಲಾ ಓದುಗರಿಗೆ ಸಂವಿಧಾನದ ಬಗ್ಗೆ ಮನವರಿಕೆ ಮಾಡುವ ಹಾಗೂ ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತ ಕಾರ್ಯಕ್ರಮ ಹಾಗೂ ಅನೇಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳು, 26 ನಗರ ಕೇಂದ್ರ ಗ್ರಂಥಾಲಯಗಳು, 176 ತಾಲೂಕು ಕೇಂದ್ರ ಗ್ರಂಥಾಲಯಗಳು ಸೇರಿದಂತೆ ಒಟ್ಟು 272 ಗ್ರಂಥಾಲಯಗಳಲ್ಲಿ ಡಿಜಿಟಲ್ ಗ್ರಂಥಾಲಯ ಸೇವೆಯನ್ನು ಪ್ರಾರಂಭಿಸಿದೆ. ಕರ್ನಾಟಕದಲ್ಲಿ 6.5 ಕೋಟಿ ಜನ ಸಂಖ್ಯೆಗೆ ಸುಮಾರು 7 ಸಾವಿರ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿದೆ. 25 ಕೋಟಿ ಜನ ಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ 78 ಗ್ರಂಥಾಲಯ, ಉತ್ತರಾಖಂಡಲ್ಲಿ 32 ರಾಜಸ್ಥಾನದಲ್ಲಿ 68 ಗ್ರಂಥಾಲಯಗಳಿವೆ. ಸರ್ಕಾರದ ವತಿಯಿಂದ ನಡೆಸಲ್ಪಡುವ ಗ್ರಂಥಾಲಯಗಳಲ್ಲಿ ಕರ್ನಾಟಕದ ಸಾರ್ವಜನಿಕ ಗ್ರಂಥಾಲಯಗಳು ಬೇರೆ ರಾಜ್ಯಗಳಿಗೆ ಮಾದರಿಯಾಗಿದ್ದು, ಪ್ರಶಸ್ತಿಗೂ ಭಾಜನವಾಗಿದೆ.

ಡಿಜಿಟಲ್ ಗ್ರಂಥಾಲಯದಲ್ಲಿ ಆನ್‍ಲೈನ್ ಮೂಲಕ ಸುಮಾರು 17800 ಪುಸ್ತಕಗಳ ಸಾಫ್ಟ್ ಪ್ರತಿಯನ್ನು ಓದಬಹುದಾಗಿದ್ದು, 58 ಸಾವಿರಕ್ಕೂ ಹೆಚ್ಚು ರಾಷ್ಟ್ರೀಯ-ಅಂತರಾಷ್ಟ್ರೀಯ ನಿಯತಕಾಲಿಕೆಗಳನ್ನು, 1 ರಿಂದ 12 ನೇ ತರಗತಿ ವರೆಗೆ ರಾಜ್ಯ ಮತ್ತು ರಾಷ್ಟ್ರೀಯ ಪಠ್ಯ ಕ್ರಮ ಎನ್‍ಸಿಆರ್‍ಟಿ ಮತ್ತು ಸಿಬಿಎಸ್‍ಸಿ ಪುಸ್ತಕಗಳನ್ನು ಓದಬಹುದು. ಲೇಖಕರ ಕೃತಿಗಳನ್ನು ಕೂಡ ಡಿಜಿಟಲ್ ಮಾಡಲಾಗುತ್ತಿದ್ದು, 15 ದಿನಗಳ ಮಟ್ಟಿಗೆ ಆನ್‍ಲೈನ್‍ನಲ್ಲಿ ಓದಬಹುದಾಗಿದ್ದು, ಇಲ್ಲಿನ ಪುಸ್ತಕಗಳನ್ನು ಪ್ರಿಂಟ್, ಕಾಪಿ, ಡೌನ್‍ಲೋಡ್ ಅಥವಾ ಡಿಲಿಟ್ ಮಾಡಲಾಗುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದರು.

ಜಿಲ್ಲಾ ಗ್ರಂಥಾಲಯ ಕಾಮಗಾರಿ ಕುರಿತು ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಆರ್ಥಿಕ ಇಲಾಖೆಯಿಂದ ಹಣ ಮಂಜೂರಾದಲ್ಲಿ ಜಿಲ್ಲಾ ಗ್ರಂಥಾಲಯ ಕಟ್ಟಡವನ್ನು ಓದುಗರಿಗೆ ಲೋಕಾರ್ಪಣೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ವಿಶೇಷ ಚೇತನರಿಗಾಗಿ ಬ್ರೈಲ್ ಗ್ರಂಥಾಲಯವನ್ನು ನಿರ್ಮಿಸಿದ್ದು, 1 ಸಾವಿರಕ್ಕೂ ಅಧಿಕ ಗ್ರಂಥಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಗ್ರಂಥಾಲಯಗಳಲ್ಲಿ ಬ್ರೈಲ್ ಗ್ರಂಥಾಲಯವನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ದೇಶದ ಮಾದರಿ ಗ್ರಂಥಾಲಯ ಸ್ಮಾರ್ಟ್ ಸಿಟಿ ಡಿಜಿಟಲ್ ಗ್ರಂಥಾಲಯ ತುಮಕೂರಿನಲ್ಲಿದೆ. ಉಡುಪಿ, ಕಾರವಾರ, ಮಂಗಳೂರಿನ ಸಿಬ್ಬಂದಿಗಳಿಗೆ ಇ-ಆಡಳಿತ, ವಿವಿಧ ಕಚೇರಿ ಕೆಲಸ ಹಾಗೂ ತಾಂತ್ರಿಕ ಕೆಲಸದಲ್ಲಿ ಹೆಚ್ಚಿನ ತಂತ್ರಜ್ಞಾನದ ಅಳವಡಿಕೆಗಳು ಸೇರಿದಂತೆ ಅನೇಕ ವಿಚಾರಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸಲಾಗುತ್ತದೆ. ತರಬೇತಿ ಅವಧಿಯಲ್ಲಿ ಗ್ರಂಥಾಲಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಸಂಪೂರ್ಣ ತಿಳಿಯುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಸಾಹಿತಿ ಮತ್ತು ಉಡುಪಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ಸಂವಿಧಾನ ವಿಮರ್ಶಕ ಅಂಕಣಕಾರ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ಸೇರಿದಂತೆ ಇತರ ಸಂಪನ್ಮೂಲ ವ್ಯಕ್ತಿಗಳು, ಉಡುಪಿ, ಮಂಗಳೂರು ಮತ್ತು ಕಾರವಾರ ಜಿಲ್ಲೆ ಹಾಗೂ ತಾಲೂಕು ಮಟ್ಟದ ಗ್ರಂಥಾಲಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಭಾರತೀಯ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂವಿಧಾನ ಕುರಿತ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.  ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಐ.ಜಿ ಸ್ವಾಗತಿಸಿದರು. ಶ್ರೀಹರಿ ಹೊಳ್ಳ ನಿರೂಪಿಸಿದರು. ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹ ಗ್ರಂಥಪಾಲಕಿ ವನಿತಾ ಕೆ ವಂದಿಸಿದರು.

Comments are closed.